Advertisement

ಮುಂದಿನ ವರ್ಷ ಬೆಂಗಳೂರಲ್ಲಿ “ಮಿನಿ ಒಲಿಂಪಿಕ್ಸ್‌’

12:20 AM Dec 05, 2019 | Sriram |

ಬೆಂಗಳೂರು: ಮುಂದಿನ ವರ್ಷ ಫೆಬ್ರವರಿಯಲ್ಲಿ 14 ವರ್ಷ ವಯೋಮಿತಿಯ ಕ್ರೀಡಾಪಟುಗಳಿಗಾಗಿ ಬೆಂಗಳೂರಿನಲ್ಲಿ “ಮಿನಿ ಒಲಿಂಪಿಕ್ಸ್‌’ ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದರಾಜು ತಿಳಿಸಿದ್ದಾರೆ.

Advertisement

ಬುಧವಾರ ಉದ್ಯಾನನಗರಿಯ ಕಂಠೀರವ ಕ್ರೀಡಾಂಗಣ ಆವರಣದಲ್ಲಿರುವ ಕರ್ನಾಟಕ ಒಲಿಂಪಿಕ್‌ ಭವನದಲ್ಲಿ ನಡೆದ “ಕೆಒಎ ವಾರ್ಷಿಕ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಮಾತನಾಡಿದ ಅವರು, “ರಾಜ್ಯ ಮಟ್ಟದ ಒಲಿಂಪಿಕ್ಸ್‌ ಕೂಟವನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ. ಇದೀಗ ದೇಶದಲ್ಲೇ ಮೊದಲ ಬಾರಿಗೆ ಕಿರಿಯರಿಗಾಗಿ ಮಿನಿ ಒಲಿಂಪಿಕ್ಸ್‌ ಕೂಟ ಆಯೋಜಿಸುತ್ತಿದ್ದೇವೆ. ಮಕ್ಕಳಲ್ಲಿ ಕ್ರೀಡೆಯ ಕುರಿತು ಆಸಕ್ತಿ, ಭವಿಷ್ಯದಲ್ಲಿ ಒಲಿಂಪಿಕ್ಸ್‌ ಪದಕ ಗೆಲ್ಲುವ ಕನಸು ಚಿಗುರಲಿ ಎನ್ನುವ ಸದುದ್ದೇಶ ಇಟ್ಟುಕೊಂಡು ಆಯೋಜಿಸಲಾಗುತ್ತಿದೆ. ಜತೆಗೆ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಅನೇಕ ಕೂಟಗಳಲ್ಲಿ ಭಾಗವಹಿಸುವ ತಾರೆಯರಿಗೆ ಈ ಕೂಟ ಅದ್ಭುತ ಅನುಭವ ನೀಡಲಿದೆ.

ಇದಕ್ಕಾಗಿ ರಾಜ್ಯ ಸರಕಾರ 2 ಕೋಟಿ ರೂ. ಅನುದಾನ ನೀಡಿದೆ. 2020 ಫೆಬ್ರವರಿ ಮೊದಲನೇ ವಾರದಲ್ಲಿ ಕೂಟ ಆಯೋಜಿಸಲು ನಿರ್ಧರಿಸಿದ್ದೇವೆ. ಅಧಿಕೃತ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುತ್ತೇವೆ’ ಎಂದು ಗೋವಿಂದರಾಜು ತಿಳಿಸಿದರು.

ಪೊಲೀಸ್‌ ಮಹಾನಿರ್ದೇಶಕ ಸಿಐಡಿ ಪ್ರವೀಣ್‌ ಸೂದ್‌ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಕ್ರೀಡಾ ಇಲಾಖೆ ನಿರ್ದೇಶಕ ಶ್ರೀನಿವಾಸ್‌, ಕೆಒಎ ಕಾರ್ಯ ದರ್ಶಿ ಅನಂತ್‌ರಾಜ್‌, ಕೆಒಎ ಖಜಾಂಚಿ ರಾಜೇಶ್‌ ಎನ್‌.ಜಗದಾಳೆ, ಪ್ರಶಸ್ತಿ ಸಮಿತಿ ಅಧ್ಯಕ್ಷ ಮೋಹನ್‌ ರಾಜ್‌ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಏಶ್ಯನ್‌ ಗೇಮ್ಸ್‌ನ ಕೆಲವು ಸ್ಪರ್ಧೆಗಳಿಗೆ ರಾಜ್ಯ ಆತಿಥ್ಯ?ಕೆಒಎ ರಾಜ್ಯ ಕ್ರೀಡಾಕೂಟಗಳ ಇತಿಹಾಸದಲ್ಲಿಯೇ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಇದೇ ಮೊದಲ ಸಲ ಏಶ್ಯನ್‌ ಗೇಮ್ಸ್‌ ಹಾಗೂ ಕಾಮನ್‌ವೆಲ್ತ್‌ ಗೇಮ್ಸ್‌ನ ಕೆಲವು ಸ್ಪರ್ಧೆಗಳಿಗೆ ಆತಿಥ್ಯವಹಿಸಲು ಅವಕಾಶ ನೀಡಬೇಕೆಂದು ಐಒಎಗೆ ಮನವಿ ಮಾಡಿದೆ.

Advertisement

“ಮುಂದಿನ ದಿನಗಳಲ್ಲಿ ಭಾರತ ಏಶ್ಯನ್‌ ಗೇಮ್ಸ್‌ ಅಥವಾ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಆತಿಥ್ಯ ವಹಿಸಿಕೊಂಡರೆ ನಮ್ಮ ರಾಜ್ಯದಲ್ಲೂ ಕೆಲವು ಸ್ಪರ್ಧೆಗಳನ್ನು ಆಯೋಜಿಸಲು ಅವಕಾಶ ನೀಡಬೇಕೆಂದು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಗೆ (ಐಒಎ) ಮನವಿ ಮಾಡಿಕೊಂಡಿದ್ದೇವೆ. ಇದಕ್ಕೆ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಅವಕಾಶ ನೀಡಿದರೆ ನಾವು ಆತಿಥ್ಯ ವಹಿಸಲು ಸಿದ್ಧರಿದ್ದೇವೆ. ಮುಂದೆ ಭಾರತ ಮಹಾಕೂಟಗಳಿಗೆ ಆತಿಥ್ಯ ವಹಿಸಿದರೆ ನಮ್ಮ ಕನಸು ನನಸಾಗಬಹುದು’ ಎಂದು ಗೋವಿಂದರಾಜು ತಿಳಿಸಿದರು.

ಶಿವಮೊಗ್ಗದಲ್ಲಿ ರಾಜ್ಯ ಒಲಿಂಪಿಕ್ಸ್‌
ಪ್ರತೀ ವರ್ಷದಂತೆ ಈ ವರ್ಷವೂ ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟ ನಡೆಯಲಿದೆ. ಶಿವಮೊಗ್ಗದಲ್ಲಿ ಈ ವರ್ಷ ರಾಜ್ಯ ಒಲಿಂಪಿಕ್ಸ್‌ ಕೂಟ ಆಯೋಜನೆಗೊಳ್ಳಲಿದೆ. “ಜನವರಿಯಲ್ಲಿ ಕೂಟ ನಡೆಸುವುದೆಂದು ನಿರ್ಧರಿಸಿದ್ದೇವೆ. ಅಧಿಕೃತ ದಿನಾಂಕ ನಿಗದಿಯಾಗಿಲ್ಲ’ ಎಂದು ಗೋವಿಂದರಾಜು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next