Advertisement

ಬೆಂಗಳೂರು ಕೇಂದ್ರ ಎಂಬ ಮಿನಿ ಭಾರತ

12:27 AM Apr 09, 2019 | Team Udayavani |

ಬೆಂಗಳೂರು: ದಶಕದ ಹಿಂದೆ ನಡೆದ ಕ್ಷೇತ್ರ ಮರುವಿಂಗಡಣೆ ವೇಳೆ ಹುಟ್ಟಿಕೊಂಡಿದ್ದು ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ. ಹಲವು ಭಾಷೆ, ಸಂಸ್ಕೃತಿ, ಉದ್ಯೋಗ ವರ್ಗಗಳು ಒಟ್ಟಿಗೆ ಇರುವ ಇದು ಒಂದು ಮಿನಿ ಭಾರತ. ಕೇವಲ ಎರಡು ಚುನಾವಣೆಗಳನ್ನು ಎದುರಿಸಿರುವ ಈ ಪುಟ್ಟ ಭಾರತ, ಹುಟ್ಟಿದಾಗಿನಿಂದಲೂ ಬಿಜೆಪಿ ಮಡಿಲಲ್ಲೇ ಇದೆ.

Advertisement

ಉತ್ತರ ಮತ್ತು ದಕ್ಷಿಣದಿಂದ ಕೆಲವು ಪ್ರದೇಶಗಳನ್ನು ಕಿತ್ತುಕೊಂಡು ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಹೀಗೆ ಬರುವಾಗ ಸಾಕಷ್ಟು ಸಂಖ್ಯೆಯಲ್ಲಿ ವಲಸಿಗರನ್ನೇ ಕರೆದುಕೊಂಡು ಬಂದಿದೆ. ರಾಜಾಜಿನಗರ, ಚಾಮರಾಜಪೇಟೆ ಹೊರತುಪಡಿಸಿದರೆ, ಇಲ್ಲಿ ಬರುವ ಉಳಿದೆಲ್ಲ ವಿಧಾನಸಭಾ ಕ್ಷೇತ್ರಗಳು ಬಹುತೇಕ ವಲಸಿಗರ ನೆಲೆ. ಟೆಕ್ಕಿಗಳು, ಗಾರ್ಮೆಂಟ್‌ ಉದ್ಯೋಗಿಗಳು, ತಮಿಳರು, ಮಲಯಾಳಿಗಳು, ಇತರೆ ಹಿಂದುಳಿದ ವರ್ಗಗಳು ಈ ಭಾಗದಲ್ಲಿದ್ದಾರೆ.

ಜಾಗತಿಕ ಮಟ್ಟದಲ್ಲಿ ಇಂದು ಬೆಂಗಳೂರು ಬೆಳಗುತ್ತಿದೆ. ಅದರ ಹಿಂದೆ ಈ ಭಾಗದಲ್ಲಿರುವ ಐಟಿ-ಬಿಟಿ ಉದ್ಯೋಗಿಗಳ ಶ್ರಮ ದೊಡ್ಡದಿದೆ. ಕೆರೆಯಲ್ಲಿ ನೊರೆ ಸೃಷ್ಟಿಯಾಗಿ, ಆಗಾಗ ಬೆಂಕಿ ಕಾಣಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಬೆಳ್ಳಂದೂರು ಕೆರೆ ಕೂಡ ಇದೇ ಭಾಗದಲ್ಲಿ ಬರುತ್ತದೆ. ದೇಶಕ್ಕೆ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಪೂರೈಸುವ ಎಚ್‌ಎಎಲ್‌ ಒಳಗೊಂಡಂತೆ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಹಲವು ಇಲಾಖೆಗಳೂ ಈ ಭಾಗದಲ್ಲೇ ಇರುವುದು ಕ್ಷೇತ್ರದ ಹೆಗ್ಗಳಿಕೆ.

ಈ ಹಿಂದೆ ಗಾಂಧಿನಗರ ವಿಧಾನಸಭೆ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದ ಪಿ.ಸಿ.ಮೋಹನ್‌ ಅವರನ್ನು ಗಾಂಧಿನಗರವನ್ನೂ ಒಳಗೊಂಡಂತೆ ಎಂಟು ವಿಧಾನಸಭಾ ಕ್ಷೇತ್ರಗಳಿರುವ ಬೆಂಗಳೂರು ಕೇಂದ್ರದ ಜನ ಕೈಹಿಡಿದರು. ಕಾಂಗ್ರೆಸ್‌ನಿಂದ ಪ್ರಬಲ ಅಭ್ಯರ್ಥಿಯನ್ನು ಹಾಕದಿರುವುದೂ ಇದಕ್ಕೆ ಕಾರಣ. ಕಾಂಗ್ರೆಸ್‌, ಒಮ್ಮೆ ಕ್ರಿಶ್ಚಿಯನ್‌, ಮತ್ತೂಮ್ಮೆ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಬಿಜೆಪಿಗೆ ಲಾಭವಾಗಿ ಪರಿಣಮಿಸಿದೆ.

ಪಕ್ಕದ ಬೆಂಗಳೂರು ಉತ್ತರದಲ್ಲಿ 2004ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ಮಾಜಿ ಸಂಸದ ಎಚ್‌.ಟಿ.ಸಾಂಗ್ಲಿಯಾನ, ಇಲ್ಲಿ 2009ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಆದರೆ, ಜನ ಕೈಹಿಡಿಯಲಿಲ್ಲ. 36 ಸಾವಿರ ಮತಗಳಿಂದ ಪರಾಭವಗೊಂಡರು. ಅದೇ ಚುನಾವಣೆಯಲ್ಲಿ ಜೆಡಿಎಸ್‌ನ ಜಮೀರ್‌ ಅಹಮದ್‌ ಖಾನ್‌ ಕೂಡ ಸ್ಪರ್ಧಿಸಿ, ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. 2014ರಲ್ಲಿ ರಿಜ್ವಾನ್‌ ಅರ್ಷದ್‌ ಅವರೊಂದಿಗೆ ಕಾಂಗ್ರೆಸ್‌ ಇಲ್ಲಿ ಅಖಾಡಕ್ಕಿಳಿಯುತ್ತದೆ. ಮತ್ತೆ ನಿರಾಸೆ ಆಗುತ್ತದೆ.

Advertisement

ಆದರೆ, ರಿಜ್ವಾನ್‌ ಅರ್ಷದ್‌ ಸೋಲಿನಿಂದ ಪಾಠ ಕಲಿತಿದ್ದಾರೆ. ಸೋಲಿನ ನಂತರವೂ ಜನರೊಂದಿಗೆ ನಿರಂತರ ಸಂಪರ್ಕ, ಹಬ್ಬ-ಹರಿದಿನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿದ್ದಾರೆ. ಈಗಲೂ ಮಠ-ಮಂದಿರಗಳು, ಹಿಂದೂಗಳ ಮನೆಯಲ್ಲಿ ಊಟ ಮತ್ತಿತರ ಪ್ರಯೋಗಗಳ ಮೂಲಕ ಗಮನಸೆಳೆದಿದ್ದಾರೆ. ಈ ಮಧ್ಯೆ ಪಿ.ಸಿ.ಮೋಹನ್‌ ಅನ್ಯಭಾಷಿಕರ ಜತೆ ಉತ್ತಮ ಒಡನಾಟ ಹೊಂದಿದ್ದಾರೆ. ಉಪನಗರ ರೈಲು ಯೋಜನೆ ಹೋರಾಟದಲ್ಲಿ ಆಗಾಗ ತಮ್ಮ ಹೆಸರು ಕೇಳಿಬರುವಂತೆಯೂ ನೋಡಿಕೊಂಡಿದ್ದಾರೆ. ಈ ಮಧ್ಯೆ ಪ್ರಸಿದ್ಧ ನಟ ಪ್ರಕಾಶ್‌ ರಾಜ್‌ ಕೂಡ ಇದೇ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಹಾಗೆ ನೋಡಿದರೆ, ಬೆಂಗಳೂರು ಕೇಂದ್ರದಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಉಳಿದ ಐದರಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಇದೆ. ಆದಾಗ್ಯೂ ಈ ಲೋಕಸಭೆ ಕ್ಷೇತ್ರದಲ್ಲಿ ಕಮಲ ಅರಳುತ್ತಿದೆ. ಏಕೆಂದರೆ, ಎಲ್ಲ ಲೆಕ್ಕಾಚಾರಗಳ ನಡುವೆಯೂ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುವುದು ರಾಷ್ಟ್ರೀಯ ವಿಚಾರಗಳು.

ಈ ಬಾರಿಯೂ ಜಾಗತಿಕ ಆರ್ಥಿಕ ಹಿಂಜರಿತವನ್ನು ನಿಭಾಯಿಸಿದ ರೀತಿ, ಉದ್ಯೋಗ ಸೃಷ್ಟಿ, ಪುಲ್ವಾಮ ದಾಳಿ, ಪಾಕಿಸ್ತಾನದ ಮೇಲೆ ನಡೆದ ಏರ್‌ ಸ್ಟ್ರೈಕ್‌, ರಫೇಲ್‌ ಯುದ್ಧ ವಿಮಾನ ಖರೀದಿ ಅವ್ಯವಹಾರ ಆರೋಪ ಸೇರಿದಂತೆ ಮತ್ತಿತರ ವಿಷಯಗಳು ನಿರ್ಣಾಯಕ ಆಗಲಿವೆ ಎನ್ನಲಾಗಿದೆ.

ಪಿ.ಸಿ.ಮೋಹನ್‌ ಪ್ರಣಾಳಿಕೆಯಲ್ಲಿ ಹೇಳಿದ್ದೇನು?: ಐಟಿ ಕಾರಿಡಾರ್‌ ಇಲ್ಲಿ ಬರುವುದರಿಂದ ನಿತ್ಯ ಸಂಚಾರದಟ್ಟಣೆ ಉಂಟಾಗುತ್ತದೆ. ಅದರ ನಿವಾರಣೆಗೆ ಎತ್ತರಿಸಿದ ಸೇತುವೆ ಮತ್ತಿತರ ಮೂಲಸೌಕರ್ಯ ಕಲ್ಪಿಸಲು ತೊಡಕಾಗಿರುವ ರಕ್ಷಣಾ ಇಲಾಖೆ ಭೂಮಿ ಮಂಜೂರು ಮಾಡಿಕೊಡುವುದಾಗಿ ಆ ಭಾಗದ ಜನರಿಗೆ ಪಿ.ಸಿ.ಮೋಹನ್‌ 2014ರಲ್ಲಿ ಭರವಸೆ ನೀಡಿದ್ದರು. ಇದಲ್ಲದೆ, ಉಪನಗರ ರೈಲು ಯೋಜನೆ ಜಾರಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದರು.

-67,154 ಯುವ ಮತದಾರರು (18ರಿಂದ 21ರ ವರ್ಷ)
-2,082 ಮತಗಟ್ಟೆಗಳು
-80 ಪಿಂಕ್‌ ಬೂತ್‌ಗಳು
-2,082 ಬಳಸಲಿರುವ ಇವಿಎಂಗಳು (ಶೇ.20 ಹೆಚ್ಚುವರಿ)
-10,410 ಚುನಾವಣಾ ಸಿಬ್ಬಂದಿ ನಿಯೋಜನೆ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next