Advertisement

ಮಿನಿ ಫೈಟ್‌: ವಿರೂಪಾಕ್ಷಪ್ಪರ ಕೇಸರಿ ಕಹಳೆಗೆ ಅಣ್ಣನ ಮಗನೇ ಅಡ್ಡಿ

06:16 PM Mar 11, 2021 | Team Udayavani |

ಮಸ್ಕಿ: ಈ ಭಾಗದ ಹಿರಿಯ ರಾಜಕಾರಣಿ ಕೆ.ವಿರೂಪಾಕ್ಷಪ್ಪ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಅವರ ಪುತ್ರ (ಅಣ್ಣನ ಮಗ) ಕೆ.ಕರಿಯಪ್ಪ ಕಾಂಗ್ರೆಸ್‌ನಲ್ಲಿ ಅಖಾಡಕ್ಕೆ ಇಳಿದಿದ್ದಾರೆ!. ವಿರೂಪಾಕ್ಷಪ್ಪರನ್ನು ಹಿಂಬಾಲಿಸುವ ಕುರುಬ ಸಮುದಾಯ ಸೇರಿ ಇತರೆ ನಾಯಕರನ್ನು ಕೈ ಪಾಳಯದಲ್ಲೇ ಉಳಿಸಲು ಪ್ರತಿತಂತ್ರ ಹೆಣೆಯಲಾಗುತ್ತಿದೆ.

Advertisement

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಕಾಂಗ್ರೆಸ್‌ ತೊರೆದು ಸಾಂಕೇತಿಕವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆದರೆ ಮಾ.20ರಂದು ಬೃಹತ್‌ ಕಾರ್ಯಕ್ರಮ ಮಸ್ಕಿಯಲ್ಲೇ ಆಯೋಜಿಸುವ ಮೂಲಕ ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೆ ಸಕಲ ಸಿದ್ಧತೆ ನಡೆಸಿದ್ದಾರೆ. ಕೆ.ವಿರೂಪಾಕ್ಷಪ್ಪ ಅವರ ಬೃಹತ್‌ ಕೇಸರಿ ಕಹಳೆಗೆ ಈಗ ಮಗನಿಂದಲೇ ಅಡ್ಡಿ-ಆತಂಕ ಎದುರಾಗಿದೆ.

ಮುಖಂಡರ ಜತೆ ಮಾತುಕತೆ: ಕಾಂಗ್ರೆಸ್‌ನಲ್ಲಿರುವ ಕೆ.ವಿರೂಪಾಕ್ಷಪ್ಪ ಅವರ ಬೆಂಬಲಿಗರು, ಹಲವು ಮುಖಂಡರನ್ನು ಹಿಡಿದಿಡುವ ಪ್ರಯತ್ನಕ್ಕೆ ಕೆ.ಕರಿಯಪ್ಪ
ಕೈ ಹಾಕಿದ್ದಾರೆ. ಮಂಗಳವಾರ, ಬುಧವಾರದಿಂದ ಈ ರಾಜಕೀಯ ಕ್ಷೀಪ್ರ ಬೆಳವಣಿಗೆಗಳು ಮಸ್ಕಿ, ಸಿಂಧನೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಗಿವೆ. ಕೆ.ವಿರೂಪಾಕ್ಷಪ್ಪ ಅವರನ್ನು ಹಿಂಬಾಲಿಸಿ ಬೆಂಗಳೂರಿಗೆ ಹೋದವರ್ಯಾರು? ಹೋಗದೇ ಇರುವವರು ಯಾರು? ಎನ್ನುವ ಪಟ್ಟಿ ಸಿದ್ಧಪಡಿಸಿಕೊಳ್ಳಲಾಗಿದೆ. ಎಲ್ಲರನ್ನೂ ಸಂಪರ್ಕಿಸಿ ಕಾಂಗ್ರೆಸ್‌ನಲ್ಲೇ ಉಳಿಯುವಂತೆ ಮನವೊಲಿಸುವ ಕಸರತ್ತು ಕೆ.ಕರಿಯಪ್ಪ ಮತ್ತು ಕಾಂಗ್ರೆಸ್‌ನ ಇತರೆ ನಾಯಕರು ನಡೆಸಿದ್ದಾರೆ.

ಸ್ವತಃ ಕೆ.ಕರಿಯಪ್ಪ ಕೆಲವು ಮುಖಂಡರನ್ನು ಖುದ್ದು ಭೇಟಿಯಾಗಿ ಮನವೊಲಿಕೆ ಮಾಡಿದ್ದರೆ, ಇನ್ನು ಬಹುತೇಕರಿಗೆ ದೂರವಾಣಿ ಕರೆಯ ಮೂಲಕ ಬಿಜೆಪಿ ಸೇರ್ಪಡೆ ಬೇಡ ಎಂದು ಸಂದೇಶ ಸಾರಿದ್ದಾರೆ. ಇದೇ ಕಾರಣಕ್ಕೆ ಕೆ.ವಿರೂಪಾಕ್ಷಪ್ಪ ಅವರ ಅಳಿಯ ಎಂ.ದೊಡ್ಡಬಸವರಾಜ ನೇತೃತ್ವದಲ್ಲಿ ನಡೆದ ಸಭೆಯೊಂದರಲ್ಲಿ ಹಲವು ಕಾಂಗ್ರೆಸ್‌ನ ಮುಖಂಡರು ಬಿಜೆಪಿ ಸೇರ್ಪಡೆಯಾಗುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಸರಣಿ ಸಭೆ: ಇನ್ನು ಮಸ್ಕಿ ಕಾಂಗ್ರೆಸ್‌ ಕಚೇರಿಯಲ್ಲಿ ಎರಡು ದಿನಗಳಿಂದ ಸರಣಿ ಸಭೆ ನಡೆಸಿರುವ ಕೆ.ಕರಿಯಪ್ಪ ಹಾಲುಮತ ಸಮಾಜ ಸೇರಿ ಇತರೆ ವರ್ಗದ ಎಲ್ಲ ನಾಯಕರನ್ನು ಕರೆದು ಮಾತುಕತೆ ನಡೆಸಿದ್ದಾರೆ. ಅಲ್ಲದೇ ಮಸ್ಕಿ ವಿಧಾನಸಭೆ ಕ್ಷೇತ್ರದ ತಿಡಿಗೋಳ, ನಿಡಿಗೋಳ, ಕುರಕುಂದಾ, ಉಪ್ಪಲದೊಡ್ಡಿ, ಗೌಡನಭಾವಿ, ಹಾಲಾಪೂರ, ಹಿರೇದಿನ್ನಿ, ಸಂತೆಕಲ್ಲೂರು ಸೇರಿ ಹಲವು ಹೋಬಳಿಗಳಲ್ಲಿನ ಮುಖಂಡರನ್ನು ಭೇಟಿ ಮಾಡಿ ಬಿಜೆಪಿ ಸೇರುವ ಹಾದಿಯಲ್ಲಿರುವ ಎಲ್ಲ ನಾಯಕರಿಗೆ
ತಡೆಯೊಡ್ಡಿದ್ದಾರೆ. ಇದಕ್ಕೆ ಕಾಂಗ್ರೆಸ್‌ನ ನಿಯೋಜಿತ ಅಭ್ಯರ್ಥಿ ಆರ್‌.ಬಸನಗೌಡ ತುರುವಿಹಾಳ ಸಾಥ್‌ ನೀಡಿದ್ದು ಇಬ್ಬರು ಜತೆಯಾಗಿ ಬಿಜೆಪಿ ಬೃಹತ್‌ ಶಕ್ತಿ
ಪ್ರದರ್ಶನಕ್ಕೆ ಪರ್ಯಾಯವಾಗಿ ಕೆ.ವಿರೂಪಾಕ್ಷಪ್ಪ ಅವರನ್ನು ಹಿಂಬಾಲಿಸುವ ಮುಖಂಡರು, ಕಾರ್ಯಕರ್ತರನ್ನು ಹಿಡಿದಿಡುವ ಪ್ರಯತ್ನ ಮಾಡಲಾಗುತ್ತಿದೆ.

Advertisement

2013ರಿಂದ ಸಂಪರ್ಕ ಕಟ್‌!
ಕಾಂಗ್ರೆಸ್‌ ಮುಖಂಡ ಕೆ.ಕರಿಯಪ್ಪ ಕೆ.ವಿರೂಪಾಕ್ಷಪ್ಪ ಅವರ ಸಹೋದ ಕೆ.ನಾಗಪ್ಪ ಅವರ ಪುತ್ರ. ಮೊದಲಿಂದಲೂ ಕೆ.ವಿರೂಪಾಕ್ಷಪ್ಪ ಅವರ ರಾಜಕೀಯ ಗರಡಿಯಲ್ಲಿ ಕೆ.ಕರಿಯಪ್ಪ ಬೆಳೆದಿದ್ದಾರೆ. ಸಿಂಧನೂರು, ಮಸ್ಕಿ ಸೇರಿ ಜಿಲ್ಲೆಯಲ್ಲೇ ರಾಜಕೀಯವಾಗಿ ಮತ್ತು ಕುರುಬ ಸಮಾಜದ ಮೇಲೆ ತಮ್ಮದೇ ಹಿಡಿತ ಹೊಂದಿದ ಕೆ.ಕರಿಯಪ್ಪ 2013ರಲ್ಲಿ ಬಿ.ಶ್ರೀರಾಮುಲು ಸ್ಥಾಪಿತ ಬಿಎಸ್‌ಆರ್‌ ಪಕ್ಷದಿಂದ ಸಿಂಧನೂರು ವಿಧಾನಸಭೆ ಕ್ಷೇತ್ರಕ್ಕೆ ಸ್ಪರ್ಧಿಸಿ ಆಗಿನ ಎದುರಾಳಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಹಂಪನಗೌಡ ಬಾದರ್ಲಿ ವಿರುದ್ಧ 13 ಸಾವಿರ ಮತಗಳ ಅಂತರದಿಂದ ಪರಾಜಿತರಾಗಿದ್ದರು. ಈ ಚುನಾವಣೆಯಲ್ಲಿ ತಮ್ಮ ತಂದೆ ಕೆ.ವಿರೂಪಾಕ್ಷಪ್ಪ ತಮ್ಮ ಪರವಾಗಿ ಕೆಲಸ ಮಾಡಲಿಲ್ಲ ಎನ್ನುವ ಬೇಸರದಿಂದ ಅಂದಿನಿಂದಲೂ ಅವರಿಂದ ರಾಜಕೀಯವಾಗಿ ದೂರು ಉಳಿದಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಕೆ.ಕರಿಯಪ್ಪ ಹಾಗೂ ಕೆ.ವಿರೂಪಾಕ್ಷಪ್ಪ ಪ್ರತ್ಯೇಕವಾಗಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಒಂದೇ ಪಕ್ಷದಲ್ಲಿದ್ದರೂ ಪರಸ್ಪರ ಮಾತುಕತೆಯಿಂದ ದೂರ ಉಳಿದಿದ್ದರು.

ಬೈ ಎಲೆಕ್ಷನ್‌ ಬಿಸಿ
ಮಸ್ಕಿ ಕ್ಷೇತ್ರದಲ್ಲಿ ಬಾಕಿ ಇರುವ ಉಪಚುನಾವಣೆ ಇಂತಹ ಹಲವು ರಾಜಕೀಯ ಬೆಳವಣಿಗೆಗಳ ಮೂಲಕ ಸಿಂಧನೂರು ವಿಧಾನಸಭೆ ಮೇಲೂ ಪರೋಕ್ಷ ಬಿಸಿ ತಟ್ಟಲಾರಂಭಿಸಿದೆ. ಸಿಂಧನೂರು ಬಿಜೆಪಿಯಲ್ಲಿ ಈಗಾಗಲೇ ಎರಡು ಬಣಗಳಿದ್ದರೂ ಮತ್ತೂಂದು ವರ್ಗವಾಗಿ ಕೆ.ವಿರೂಪಾಕ್ಷಪ್ಪ ಸೇರ್ಪಡೆ ಅಲ್ಲಿನ ಕೇಸರಿ ಮುಖಂಡರಿಗೆ ಒಳಗೊಳಗೆ ಅಸಮಾಧಾನವಿದೆ. ಆದರೆ ಮಸ್ಕಿ ಉಪಚುನಾವಣೆ ಹಾಗೂ ಹೈಕಮಾಂಡ್‌ ಮಾತಿಗೆ ಮಣಿದು ಸದ್ಯಕ್ಕೆ ಮೌನಕ್ಕೆ ಶರಣಾಗಿದ್ದಾರೆ. ಆದರೆ ಮುಂದಿನ ಹಂತದಲ್ಲಿ ಇದು ರಾಜಕೀಯವಾಗಿ ಪರೋಕ್ಷ ಪರಿಣಾಮ ಸಿಂಧನೂರು ವಿಧಾನ ಸಭೆ ಎದುರಿಸಲಿದೆ ಎನ್ನುತ್ತಾರೆ ಜಿಲ್ಲಾ ಬಿಜೆಪಿ ಮುಖಂಡರು.

ಯಾರೇ ಬಿಜೆಪಿಗೆ ಹೋಗಲಿ ನಾನಂತೂ ಕಾಂಗ್ರೆಸ್‌ ಬಿಡುವುದಿಲ್ಲ. ಸಿದ್ದರಾಮಯ್ಯ ನನ್ನ ಹೈಕಮಾಂಡ್‌. 2013ರಿಂದಲೇ ವಿರೂಪಾಕ್ಷಪ್ಪನವರಿಂದ ದೂರವಾಗಿದ್ದೇನೆ. ನಮ್ಮ ಹಿಂಬಾಲಕರು ಯಾರೂ ಬಿಜೆಪಿ ಸೇರುವುದಿಲ್ಲ.
ಕೆ.ಕರಿಯಪ್ಪ, ಮುಖಂಡರು, ಕಾಂಗ್ರೆಸ್‌ ಪಕ್ಷ ಸಿಂಧನೂರು

*ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next