ಕೋಲ್ಕತ: ಡಿ.23ಕ್ಕೆ ಐಪಿಎಲ್ ಹರಾಜು ನಡೆಯಲಿದೆ. ಇಲ್ಲಿ ಕೋಲ್ಕತ ನೈಟ್ ರೈಡರ್ಸ್ ಕನಿಷ್ಠ 10 ಆಟಗಾರರನ್ನಾದರೂ ಖರೀದಿಸಬೇಕು. ಆದರೆ ಅದರ ಬಳಿಯಿರುವ ಹಣ ಕೇವಲ 7.5 ಕೋಟಿ ರೂ.! ಅದರಲ್ಲೂ ಮೂವರು ವಿದೇಶಿ ಆಟಗಾರರ ಸ್ಥಾನ ಖಾಲಿ ಇದೆ. ಇಷ್ಟು ಕಡಿಮೆ ಮೊತ್ತದಲ್ಲಿ ಹೇಗೆ ಅಷ್ಟು ಆಟಗಾರರನ್ನು ಖರೀದಿಸುತ್ತದೆ ಎನ್ನುವುದು ಎಲ್ಲರ ಕುತೂಹಲ.
ಈಗಿರುವ ಕಡಿಮೆ ಮೊತ್ತದಲ್ಲಿ ಕೋಲ್ಕತ ಖರೀದಿಗೆ ಭಾರೀ ಸರ್ಕಸ್ ಮಾಡಬೇಕಾಗುತ್ತದೆ. 2 ಕೋಟಿ ರೂ. ಮೂಲಬೆಲೆ ಇರುವ ಯಾರನ್ನೂ ಆ ತಂಡ ಹರಾಜಿನಲ್ಲಿ ಮುಟ್ಟುವುದೇ ಸಾಧ್ಯವಿಲ್ಲ. ಕಾರಣ ಯಾವುದೇ ತಂಡ ಪೈಪೋಟಿಗೆ ಇಳಿದರೆ ಕೋಲ್ಕತ ಸ್ಥಿತಿ ಅಯೋಮಯವಾಗುತ್ತದೆ! ಶಾರುಖ್ ಖಾನ್ ಮಾಲಿಕತ್ವದ ಕೋಲ್ಕತ ಯಾಕೆ ಇಂತಹ ಎಡವಟ್ಟು ಮಾಡಿಕೊಂಡಿದೆ ಎಂದು ಎಲ್ಲರೂ ಪ್ರಶ್ನಿಸುತ್ತಾರೆ.
ಇಡೀ 10 ತಂಡಗಳ ಪೈಕಿ ಹೀಗೊಂದು ಎಡವಟ್ಟು ಮಾಡಿಕೊಂಡಿರುವುದು ಕೋಲ್ಕತ ಮಾತ್ರ. ಇದಕ್ಕೆ ಕಾರಣಗಳೂ ಹಲವು. ಮುಂದಿನ ವರ್ಷದ ಐಪಿಎಲ್ ನಲ್ಲಿ ಆಡುವುದಿಲ್ಲವೆಂದು ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್, ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್, ಸ್ಯಾಮ್ ಬಿಲ್ಲಿಂಗ್ಸ್ ಘೋಷಿಸಿದ್ದಾರೆ. ಅವರ ಜಾಗದಲ್ಲಿ ಹೊಸಬರನ್ನು ಕೊಳ್ಳಲು ಕೋಲ್ಕತ ಪ್ರಯತ್ನಿಸಿ, ಕಿವೀಸ್ ವೇಗಿ ಲಾಕೀ ಫರ್ಗ್ಯುಸನ್, ಅಫ್ಘಾನಿಸ್ತಾನದ ರೆಹ್ಮಾನುಲ್ಲಾ ಗುರ್ಬಾಜ್ ರನ್ನು ಕೊಂಡಿದೆ. ಡೆಲ್ಲಿ ತಂಡದ ಶಾರ್ದೂಲ್ ಠಾಕೂರ್‌ರನ್ನು ಖರೀದಿಸಿದೆ. ಈ ಪೈಕಿ ಫರ್ಗ್ಯುಸನ್‌ಗೆ 10 ಕೋ.ರೂ., ಶಾರ್ದೂಲ್ ಗೆ 10.75 ಕೋಟಿ ರೂ. ನೀಡಿದೆ. ಅಲ್ಲಿಗೆ ಅದರ ಹಣವೂ ಮುಗಿದಿದೆ. ಉಳಿದ ಹಣದಲ್ಲಿ ಆ ತಂಡ ಬಾಕಿ ಯತ್ನ ಮಾಡಬೇಕು.
ಇತರೆ ತಂಡಗಳು ಸುರಕ್ಷಿತ: ಕೋಲ್ಕತದಂತೆ ಹಲವು ತಂಡಗಳು ತಮ್ಮ ಆಟಗಾರರನ್ನು ಬಿಟ್ಟುಕೊಟ್ಟಿವೆ. ಆದರೆ ಅವುಗಳ ಬಳಿ ಹಣವೂ ಹಾಗೆಯೇ ಇದೆ. ಇನ್ನು ರಾಯಲ್ ಚಾಲೆಂಜೆರ್ಸ್ ಬೆಂಗಳೂರು ಬಳಿ ಇರುವುದು ಕೇವಲ 8.75 ಕೋಟಿ ರೂ. ಮಾತ್ರ. ಆದರೆ ಆ ತಂಡ ಖರೀದಿಸಬೇಕಿರುವುದು ಕೇವಲ ಕೆಲವೇ ಆಟಗಾರರನ್ನು ಅಥವಾ ಲೆಕ್ಕಭರ್ತಿಗಷ್ಟೇ. ಹಾಗಾಗಿ ಅದು ನಿಶ್ಚಿಂತೆಯಿಂದ ಹರಾಜಿಗಿಳಿಯಲಿದೆ. ಕೋಲ್ಕತ ಪಾಲಿಗೆ ವಿಷಯ ಹಾಗಿಲ್ಲ. ಅದಕ್ಕೆ ಉತ್ತಮ ಆಟಗಾರರೂ ಬೇಕು, ಕಡಿಮೆ ಬೆಲೆಯಲ್ಲೂ ಸಿಗಬೇಕು. ಅದು ಹರಾಜಿನಲ್ಲಿ ಹೇಗೆ ಸಾಧ್ಯವಾಗುತ್ತದೆ? ಎಲ್ಲರೂ ಬಿಟ್ಟುಕೊಟ್ಟ ಆಟಗಾರರನ್ನು ಕೊಳ್ಳಬೇಕಾಗುತ್ತದೆ ಅಷ್ಟೇ!
ತಂಡ ಬಾಕಿ ಮೊತ್ತ
(ಕೋಟಿ ರೂ.ಗಳಲ್ಲಿ)
ಹೈದರಾಬಾದ್ 42.25
ಪಂಜಾಬ್ 32.20
ಲಕ್ನೋ 23.35
ಮುಂಬೈ 20.55
ಚೆನ್ನೈ 20.45
ಡೆಲ್ಲಿ 19.45
ಗುಜರಾತ್ 19.25
ರಾಜಸ್ಥಾನ 13.20
ಬೆಂಗಳೂರು 8.75
ಕೋಲ್ಕತ 7.5