Advertisement

ಈಡೇರುವುದೇ ಗಣಿ ಕಾರ್ಮಿಕರ ಕನಸು?

05:49 PM Jul 10, 2023 | Team Udayavani |

ಕೆಜಿಎಫ್‌: ಕಾರ್ಮಿಕ ಸಂಘಟನೆಗಳ ಮನವಿ ಹಿನ್ನಲೆಯಲ್ಲಿ ಕೇಂದ್ರ ಗಣಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಬಿಜಿಎಂಎಲ್‌ ವ್ಯವಸ್ಥಾಪಕ ನಿರ್ದೇಶಕಿ ಫರೀದಾ ಎಂ ನಾಯಕ್‌ರವರು ಎರಡು ಮೂರು ದಿನಗಳಲ್ಲಿ ಕೆಜಿಎಫ್‌ಗೆ ಭೇಟಿ ನೀಡಲಿದ್ದು, ಮನೆಗಳ ನೋಂದಣಿ ಮತ್ತು ಫ್ಲೋಟಿಂಗ್‌ ಟೆಂಡರ್‌ ಬಗ್ಗೆ ಕೆಲವು ಆಯ್ದ ಕಾರ್ಮಿಕ ಸಂಘಟನೆಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಜುಲೈ 4 ರಂದು ಬಿಜಿಎಂಎಲ್‌ ಆಡಳಿತ ಮಂಡಳಿಯು ಎಸ್‌ಟಿಬಿಪಿ ಯೋಜನೆಯಡಿಯಲ್ಲಿ ಮಂಜೂರು ಮಾಡಲಾದ ಮನೆಗಳ ನೋಂದಣಿಗೆ, ಫಸ್ಟ್‌ ಕಮ್‌ ಫಸ್ಟ್‌ ಸರ್ವ್‌ ಆಧಾರದಲ್ಲಿ ಕ್ರಮ ವಹಿಸಲಾಗುವುದು ಎಂದು ನೋಟಿಸ್‌ ನೀಡಿರುವುದರಿಂದ ಫರೀದಾ ಎಂ ನಾಯಕ್‌ ರವರ ಕೆಜಿಎಫ್‌ ಭೇಟಿಯು ಮಹತ್ವ ಪಡೆದುಕೊಂಡಿದೆ.

Advertisement

ತೆರಿಗೆ ಹಣ ಬಾಕಿ: ಚಿನ್ನದ ಗಣಿ ಪ್ರದೇಶಗಳ ಬಡಾವಣೆಗಳಿಗೆ ಸಂಬಂ ಧಿಸಿದಂತೆ 2001ರ ಮಾರ್ಚ್‌ 1ಕ್ಕಿಂತ ಮುಂಚೆ ಬಿಜಿಎಂಎಲ್‌ ಸಂಸ್ಥೆಯವರು ಪ್ರತಿ ವರ್ಷ ನಗರಸಭೆಗೆ 16 ಲಕ್ಷ ರೂ. ಮನೆ ತೆರಿಗೆಯನ್ನಾಗಿ ಪಾವತಿ ಮಾಡುತ್ತಿದ್ದರು ಎನ್ನಲಾಗಿದ್ದು, ಬಳಿಕ ಇದುವರೆಗೆ ಒಂದು ನಯಾ ಪೈಸೆಯನ್ನೂ ಬಿಜಿಎಂಎಲ್‌ನವರು ನಗರಸಭೆಗೆ ಪಾವತಿ ಮಾಡಿಲ್ಲ. ಬಿಜಿಎಂಎಲ್‌ ಸಂಸ್ಥೆಯು ಚಿನ್ನದ ನಿಕ್ಷೇಪ ಕಡಿಮೆಯಾಗಿದೆ ಎನ್ನುವ ಕಾರಣ ನೀಡಿ 2001ರ ಮಾರ್ಚ್‌ 1 ರಂದು ಚಿನ್ನದ ಗಣಿಯನ್ನು ಮುಚ್ಚಿದ ಬಳಿಕ ಇಲ್ಲಿಯವರೆಗೆ ಚಿನ್ನದ ಗಣಿ ಪ್ರದೇಶದ ವಾರ್ಡ್ ಗಳಲ್ಲಿ ರಸ್ತೆಗಳು, ಬೀದಿ ದೀಪ, ಚರಂಡಿ ಮತ್ತು ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯ ಮೂಲ ಸೌಲಭ್ಯಗಳನ್ನು ನಗರಸಭೆ ವತಿಯಿಂದಲೇ ಮಾಡಲಾಗುತ್ತಿದೆ. ವರ್ಷಕ್ಕೆ 16 ಲಕ್ಷದಂತೆ ಇಲ್ಲಿಯವರೆಗೆ ಅಂದರೆ ಸುಮಾರು 22 ವರ್ಷಗಳ ತೆರಿಗೆಯನ್ನು ಬಿಜಿಎಂಎಲ್‌ ಸಂಸ್ಥೆಯು ನಗರಸಭೆಗೆ ಪಾವತಿಸಬೇಕಾಗಿದ್ದು, ಇದರ ಜೊತೆಗೆ ಚಿನ್ನದ ಗಣಿ ಪ್ರದೇಶವನ್ನೊಳಗೊಂಡ 16 ವಾರ್ಡ್‌ಗಳಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳು ಮತ್ತು ಬಾಕಿ ತೆರಿಗೆ ಹಣ ಎರಡೂ ಸೇರಿ ಒಟ್ಟಾರೆ ಸೇರಿ 43 ಕೋಟಿಯಷ್ಟಾಗಿದೆ ಎನ್ನುವುದು ನಗರಸಭೆ ವಾದವಾಗಿದೆ.

50 ಜನರಿಗೆ ಮಾತ್ರ ಪಿಐಡಿ ಸಂಖ್ಯೆ: ಎಸ್‌ಟಿಬಿಪಿ ಯೋಜನೆಯಡಿಯಲ್ಲಿ ಮಂಜೂರು ಮಾಡಲಾದ ಮನೆಗಳ ನೋಂದಣಿಗೆ ಕ್ರಮ ಕೈಗೊಳ್ಳುಲಾಗುವುದು ಎಂದು ತಿಳಿಸಿದ್ದು, ಎಸ್‌ಟಿಬಿಪಿ ಫಲಾನುಭವಿಗಳು ತಮ್ಮ ಮನೆಗಳಿಗೆ ನಗರಸಭೆ ವತಿಯಿಂದ ಪ್ರಾಪರ್ಟಿ ಸಂಖ್ಯೆ(ಪಿಐಡಿ)ಯನ್ನು ಪಡೆದುಕೊಂಡು ಆದಷ್ಟು ಬೇಗನೇ ಬಿಜಿಎಂಎಲ್‌ ಆಡಳಿತ ಮಂಡಳಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಆದರೆ, ನಗರಸಭೆ ಅಧಿಕಾರಿಗಳು ಸಾಂಕೇತಿಕವಾಗಿ ಕೇವಲ 50 ಮಂದಿ ನೌಕರರಿಗೆ ಮಾತ್ರ ಪಿಐಡಿ ಸಂಖ್ಯೆ ನೀಡಿ, ಉಳಿದ ನೌಕರರಿಗೆ ಬಿಜಿಎಂಎಲ್‌ ಸಂಸ್ಥೆ ನಗರಸಭೆಗೆ ಬಾಕಿಯಿರುವ ಸುಮಾರು 43 ಕೋಟಿ ರೂ ಹಣವನ್ನು ಪಾವತಿಸಿದರೆ ಮಾತ್ರ ಪಿಐಡಿ ಸಂಖ್ಯೆ ನೀಡುವುದಾಗಿ ತಿಳಿಸಿದ್ದರಿಂದ ನೌಕರರು ಕಂಗಾಲಾಗಿದ್ದಾರೆ.

ಬಿಜಿಎಂಎಲ್‌ ವ್ಯವಸ್ಥಾಪಕ ನಿರ್ದೇಶಕಿ ಫರೀದಾ ಎಂ ನಾಯಕ್‌ರವರು ಕೆಜಿಎಫ್ಗೆ ಆಗಮಿಸಿಮಿ ಇಲ್ಲಿನ ಪರಿಸ್ಥಿತಿ ಪರಿಶೀಲಿಸಿದ ನಂತರ ಅವರು ತೆಗೆದುಕೊಳ್ಳಲಿರುವ ನಿರ್ಧಾರದ ಮೇಲೆಯೇ ಗಣಿ ಕಾರ್ಮಿಕರ ಸ್ವಂತ ಮನೆಯ ಕನಸು ನನಸಾಗ ಲಿದೆಯೇ ಎಂಬುದು ಗೊತ್ತಾಗಲಿದೆ.

ಏಪ್ರಿಲ್‌ 23ರಂದು ನವದೆಹಲಿಯ ಕೇಂದ್ರ ಗಣಿ ಸಚಿವಾಲಯದಲ್ಲಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಬಿಜಿಎಂಎಲ್‌ ವ್ಯವಸ್ಥಾಪಕ ನಿರ್ದೇಶಕರಾದ ಫರೀದಾ ಎಂ ನಾಯಕ್‌ರವರನ್ನು ಭೇಟಿ ಮಾಡಿ, ಗಣಿ ಕಾರ್ಮಿಕರ ಮನೆಗಳ ನೋಂದಣಿ, ಫ್ಲೋಟಿಂಗ್‌ ಟೆಂಡರ್‌ ಮತ್ತು ಹಲವು ವರ್ಷಗಳಿಂದ ಬಾಕಿಯಿರುವ ಕಾರ್ಮಿಕರ 52 ಕೋಟಿ ರೂ ಗ್ರಾಚ್ಯುಟಿ ಹಣ ಬಿಡುಗಡೆ ಬಗ್ಗೆ ಚರ್ಚಿಸಿದ್ದರ ಫಲವಾಗಿ ಎರಡು ಮೂರು ದಿನಗಳಲ್ಲಿ ಫರೀದಾ ಎಂ ನಾಯಕ್‌ ರವರು ಕೆಜಿಎಫ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿರುವುದು ಸಂತಸದ ವಿಚಾರವಾಗಿದೆ. -ಟಿ.ಎಸ್‌.ಪುರುಷೋತ್ತಮನ್‌, ಉಪಾಧ್ಯಕ್ಷ, ಗ್ಲೋಬಲ್‌ ಸೊಸೈಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next