ನೇರ, ದಿಟ್ಟತನ ಎಲ್ಲ ಸಮಯದಲ್ಲೂ ಕೆಲಸ ಮಾಡೋಲ್ಲ. ಆಫೀಸಲ್ಲಿ ಬಾಸ್ ಮುಂದೆಯೋ, ನಮಗಿಂತ ಹಿರಿಯರ ಬಳಿಯೋ ಇದು ಕೆಲಸಕ್ಕೆ ಬಾರದು.
ಲೇ, ಅವರಿಂದ ದೂರ ಇದ್ದುಬಿಡಿ, ಅವರು ಮುಖಕ್ಕೆ ಹೊಡೆದಂತೆ ಮಾತಾಡ್ತಾರೆ… ಹೀಗಂತ ಎಚ್ಚರಿಕೆ ನೀಡುವುದನ್ನು ಕೇಳಿಸಿಕೊಂಡಿರುತ್ತೀರಿ. ಇದರಂತೆ, ನಾನು ನೇರಾನೇರ. ಇದ್ದದ್ದನ್ನು ಇದ್ದಂಗೆ ಹೇಳ್ತೀನಿ. ನನ್ನ ಮಾತಿಂದ ಬೇರೆಯವರಿಗೆ ಕೋಪ ಬಂದ್ರೆ ಬರಲಿ, ನನಗೇನಂತೆ? ಅನ್ನುವವರನ್ನೂ ನೀವು ನೋಡಿರಬಹುದು.
ಮುಖಕ್ಕೆ ಹೊಡೆದಂತೆ ಮಾತಾಡೋದು, ಇದ್ದದ್ದನ್ನು ಇದ್ದಂತೆಯೇ ಹೇಳಿಬಿಡುವುದು- ಎರಡೂ ಒಂದೇನೇ. ಸುಮ್ಮನೆ ಗಮನಿಸಿ. ಇಂಥ ವ್ಯಕ್ತಿತ್ವದವರಲ್ಲಿ ಆತ್ಮವಿಶ್ವಾಸ ಜಾಸ್ತಿ ಇರ್ತದೆ. ಕಾರಣ, ಮುಖಕ್ಕೆ ಹೊಡೆದಂಗೆ ಮಾತಾಡೋದು. ಈ ರೀತಿ ಮಾತೋಡೇದೇ ಇವರ ಟ್ರೇಡ್ ಮಾರ್ಕ್. ಅದೇ ಅವರ ಆಸ್ತಿ.
ನೇರವಂತಿಕೆ ಇದೆಯಲ್ಲ; ಇದು ಬಹಳ ಡೇಂಜರ್. ಟೈಮಿಂಗ್ ಸರಿ ಇಲ್ಲ ಅಂದರೆ ಸಮಸ್ಯೆಯೇ ಜಾಸ್ತಿ. ಹೇಗೆಂದರೆ, ನಮ್ಮ ನಿಷ್ಠುರ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯಕ್ತಿ ಶಾರ್ಟ್ ಟೆಂಪರ್ ಆಗಿದ್ದರೆ, ಕಥೆ ಮುಗಿದೇ ಹೋಯಿತು- ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತಗೊಂಡರು ಅಂತಾರಲ್ಲ? ಆ ರೀತಿ ಜಗಳ ಶುರುವಾಗಿಬಿಡುತ್ತದೆ. ನೆನಪಿರಲಿ: ಪ್ರತಿ ಮಾತಿಗೂ ಸಮಯ-ಸಂದರ್ಭ ಅರ್ಥಾತ್ ಟೈಮಿಂಗ್ ಅಂತ ಇರುತ್ತದೆ. ಅದು ಸರಿ ಇದ್ದರೇನೇ ಮಾತಿಗೆ ಅರ್ಥ ಬರುವುದು. ನೇರವಾಗಿ ಮಾತಾಡೋರಲ್ಲಿ ಬಹುತೇಕರಿಗೆ “ನಾನು’ ಅನ್ನೋದು ಇರುತ್ತದೆ. ತನ್ನ ಜಡ್ಜ್ ಮೆಂಟ್ ಸರಿಯಾಗಿಯೇ ಇರುತ್ತದೆ ಅನ್ನೋ ವಿಶ್ವಾಸ ಇರುತ್ತದೆ. ಇಲ್ಲ, ನೀವು ಹೇಳಿದ್ದು ಸರಿ ಇಲ್ಲ ಅಂತ ಸುಮ್ಮನೆ ಅಂದುನೋಡಿ, ಅವರಿಗೆ ನಖಶಿಖಾಂತ ಕೋಪ ಏರಿ ಕೂಗಾಡಲು ಶುರು ಮಾಡಿಬಿಡುತ್ತಾರೆ.
“ನಾನು’ ಅನ್ನೋದು ದೊಡ್ಡ ಕಾಯಿಲೆ. ಅದರಿಂದ ಬಿಡಿಸಿಕೊಳ್ಳುವುದು ಕಷ್ಟ. ನಾನು- ಅನ್ನುವುದರಲ್ಲೇ ಒಂದು ನೆಗೆ ಟೀವ್ ಥಾಟ್ ಇರುತ್ತದೆ. ಒಂದು ಸಲ ನೆಗೆಟೀವ್ ಥಿಂಕಿಂಗ್ ಶುರುವಾದರೆ, ಹೊಸದಾಗಿ ಕಲಿಯುವ- ತಿಳಿಯುವ ಆಸಕ್ತಿಯೇ ಇರೋದಿಲ್ಲ. ಜೊತೆಗೆ ನಾನು, ನನಗೆ ಗೊತ್ತು ಅನ್ನೋದೆಲ್ಲ ತಲೆಯಲ್ಲಿ ಇರುವುದರಿಂದ, ಆಗ ಗಳಿಸಿದ ತಿಳುವಳಿ ಕೆಯೇ ಗಟ್ಟಿ. ಹೀಗಾಗಿ, ಇವರು ಇದ್ದಲ್ಲೇ ಕೂಪ ಮಂಡೂಕದ ರೀತಿ ಇರುತ್ತಾರೆ. ಜಗತ್ತು, ಜನ ಬಹಳ ಮುಂದೆ ಹೋಗಿರುತ್ತಾರೆ. ಅದನ್ನು ಒಪ್ಪಿಕೊಳ್ಳಲು ಇವರು ಸಿದ್ಧರಿರುವುದಿಲ್ಲ.
ನೇರ, ದಿಟ್ಟತನ ಎಲ್ಲ ಸಮಯದಲ್ಲೂ ಕೆಲಸ ಮಾಡೋಲ್ಲ, ಆಫೀಸಲ್ಲಿ ಬಾಸ್ ಮುಂದೆಯೋ, ನಮಗಿಂತ ಹಿರಿಯರ ಬಳಿಯೋ ಇದು ಕೆಲಸಕ್ಕೆ ಬಾರದು. ಅವರ ಎದುರು ಹಾಗೆಲ್ಲಾ ಮಾತಾಡಿದರೆ, ಇವನಿಗೇನು ಇಷ್ಟು ದುರಹಂಕಾರ ಅಂದುಕೊಳ್ಳುತ್ತಾರೆ. ಹೀಗಾಗಿ, ಇದ್ದುದನ್ನು ಇದ್ದಂತೆ ಯಾವಾಗ ಹೇಳಬೇಕು, ಯಾವಾಗ ಹೇಳಬಾರದು ಎಂಬ ಸೆನ್ಸ್ ಇರಬೇಕು.