Advertisement
“ತಲೆನೋವು ಬರುವಷ್ಟು ಕೆಲಸ ಇದೆ’ ಅಥವಾ “ಈ ಹಲ್ಲುನೋವಿನಿಂದಾಗಿ ಸಿನೆಮಾಕ್ಕೆ ಹೋಗಲು ಮನಸ್ಸಾಗುತ್ತಿಲ್ಲ’ ಎಂಬಂಥ ಮಾತುಗಳನ್ನು ನಾವು ಒಂದಲ್ಲ ಒಂದು ಬಾರಿ ಆಡಿಯೇ ಇರುತ್ತೇವೆ. ಮನಸ್ಸಿನ ನೋವು ಮತ್ತು ದೇಹದ ನೋವು ಜತೆ ಜತೆಯಾಗಿ ಅನುಭವಕ್ಕೆ ಬರುತ್ತವೆ. ಮನುಷ್ಯನ ವ್ಯಕ್ತಿತ್ವ ಮತ್ತು ಅನುಭವಗಳು ತುಂಬಾ ಸಂಕೀರ್ಣವಾಗಿ ಪರಸ್ಪರ ಹಾಸುಹೊಕ್ಕಾಗಿವೆ ಎಂಬುದನ್ನು ವೈದ್ಯರು ಹೆಚ್ಚು ಹೆಚ್ಚು ಗಹನವಾಗಿ ಅರ್ಥ ಮಾಡಿಕೊಳ್ಳುತ್ತ ಬಂದಿದ್ದಾರೆ.
Related Articles
- ಆಯುಷ್ 12 ವರ್ಷ ವಯಸ್ಸಿನ ಬಾಲಕ. ಪರೀಕ್ಷೆಯನ್ನು ಅರ್ಧ ಮಾತ್ರ ಉತ್ತರಿಸಿ ಮನೆಗೆ ಬಂದಿದ್ದಾನೆ. ಪರೀಕ್ಷೆ ಬರೆಯುತ್ತಿರುವಾಗ ಭಾರೀ ಹೊಟ್ಟೆ ನೋವು ಆರಂಭವಾಯಿತು ಎಂಬುದು ಅವನ ದೂರು. ಆಯುಷ್ ಪರೀಕ್ಷೆ ಎಂದರೆ ತುಂಬಾ ಚಿಂತೆ ಮಾಡಿಕೊಳ್ಳುತ್ತಾನೆ, ಸರಿಯಾದ ಸಮಯಕ್ಕೆ ಊಟ-ಉಪಾಹಾರ ಸೇವಿಸುವುದಿಲ್ಲ, ಗಂಟೆಗಟ್ಟಲೆ ಅಭ್ಯಾಸ ಮಾಡುತ್ತಿರುತ್ತಾನೆ ಎಂಬುದಾಗಿ ಅವನ ಹೆತ್ತವರು ಹೇಳುತ್ತಾರೆ. ಅವನು ಆಗಾಗ ಉಗುರು ಕಚ್ಚುವುದು ಮತ್ತು ಪರೀಕ್ಷೆ ಹತ್ತಿರ ಬಂದಾಗ ಇದು ಹೆಚ್ಚಾಗುವುದನ್ನು ಅವನ ಹೆತ್ತವರು ಗಮನಿಸಿದ್ದಾರೆ. ಆಯುಷ್‌ನನ್ನು ಮಕ್ಕಳ ವೈದ್ಯರಲ್ಲಿಗೆ ಕರೆದೊಯ್ದಾಗ ಅವರು ಅಕ್ಯೂಟ್ ಗ್ಯಾಸ್ಟ್ರೈಟಿಸ್‌ಗೆ ಚಿಕಿತ್ಸೆ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ಅವನ ಹೊಟ್ಟೆನೋವು ಕಡಿಮೆಯಾಗಿದೆ ಎಂದು ಹೆತ್ತವರು ತಿಳಿಸಿದ್ದಾರೆ. ಆಯುಷ್‌ಗೆ ಹೊಟ್ಟೆನೋವಿಗೆ ಮಾತ್ರ ಚಿಕಿತ್ಸೆ ನೀಡಿದರೆ ಸಾಕೇ?
- 15 ವರ್ಷ ವಯಸ್ಸಿನ ಸವಿತಾಗೆ ಮುಟ್ಟಿನ ಸಮಯ ಬಂತೆಂದರೆ ಸಾಕು, ಮನಸ್ಸೆಲ್ಲ ಅಯೋಮಯವಾಗುತ್ತದೆ. ತೀವ್ರ ಮನೋಭಾವ ಬದಲಾವಣೆಗಳನ್ನು ಅನುಭವಿಸುತ್ತಾಳೆ. ತೀವ್ರ ಹೊಟ್ಟೆನೋವು, ಹೊಟ್ಟೆ ಹಿಡಿದುಕೊಳ್ಳುವುದು, ಕಿರಿಕಿರಿ ಆಗುತ್ತದೆ ಎಂದು ಹೇಳುತ್ತಾಳೆ. ನೋವಿನಿಂದಾಗಿ ಶಾಲೆಗೆ ರಜೆ ಹಾಕಬೇಕಾಗುತ್ತದೆ. ಅವಳಿಗೆ ಪಿಸಿಒಎಸ್ ಇದೆ ಎಂದು ಸ್ತ್ರೀರೋಗಶಾಸ್ತ್ರಜ್ಞರು ಹೇಳಿದ್ದಾರೆ. ತನ್ನ ದೇಹತೂಕ ಇತ್ತೀಚೆಗೆ ಹೆಚ್ಚುತ್ತಿರುವ ಬಗ್ಗೆ ಸವಿತಾ ಆತಂಕಗೊಂಡಿದ್ದಾಳೆ. ಪಥ್ಯಾಹಾರ, ಆರೋಗ್ಯಪೂರ್ಣ ಆಹಾರ ಸೇವನೆಯ ಬಗ್ಗೆ ಅವಳು ಗೂಗಲ್‌ನಲ್ಲಿ ಹುಡುಕಾಡುತ್ತಾಳೆ, ಆಗಾಗ ಉಪವಾಸ, ಜ್ಯೂಸ್ ಕ್ಲೆನ್ಸ್, ಪಾಲಿಯೊ ಡಯಟ್ ಬಗ್ಗೆ ಇನ್‌ಸ್ಟಾಗ್ರಾಂ ಹ್ಯಾಂಡಲ್‌ಗಳನ್ನು ಫಾಲೊ ಮಾಡುತ್ತಾಳೆ ಮತ್ತು ಕಠಿನ ಪಥ್ಯಾಹಾರ ಅನುಸರಿಸಲು ಪ್ರಯತ್ನ ಮಾಡುತ್ತಾಳೆ. ಆಕೆಯ ಅಸಹಜ ಆಹಾರಾಭ್ಯಾಸದ ಬಗ್ಗೆ ಆಕೆಯ ಹೆತ್ತವರು ಕಳವಳಗೊಂಡಿದ್ದಾರೆ. ಅವಳ ಆಹಾರ-ವಿಹಾರದ ವಿಚಾರದಲ್ಲಿಯೇ ಅವಳು ಮತ್ತು ಹೆತ್ತವರ ನಡುವೆ ಆಗಾಗ ಜಗಳವಾಗುತ್ತಿದೆ.
- ಜಾನ್ ಎಂಟು ವರ್ಷ ವಯಸ್ಸಿನ ಹುಡುಗ, ಈಗ 3ನೇ ತರಗತಿಯಲ್ಲಿದ್ದಾನೆ. ಹೆತ್ತವರಿಗೆ ಉದ್ಯೋಗದಲ್ಲಿ ವರ್ಗಾವಣೆಯಾದ್ದರಿಂದ ಅವನು ಶಾಲೆಗಳನ್ನು ಬದಲಾಯಿಸಬೇಕಾಗುತ್ತದೆ. ಜಾನ್ ಆರಂಭದಲ್ಲಿ ಹೆಚ್ಚು ಸಮಸ್ಯೆ ಇಲ್ಲದೆ ಶಾಲೆಗೆ ಹೋಗುತ್ತಿದ್ದ. ಒಂದು ತಿಂಗಳು ಹಿಂದೆ ತಾಯಿಯ ಜತೆಗೆ ಶಾಲೆಗೆ ಹೋಗುತ್ತಿರುವಾಗ ಸಣ್ಣ ಅವಘಡ ಆಗಿತ್ತು. ಜಾನ್‌ನ ಬಲಗೈಯಲ್ಲಿ ಮೂಳೆ ಮುರಿತ ಉಂಟಾಗಿತ್ತು ಮತ್ತು ಡಾಕ್ಟರ್ ಅಂಕಲ್ ಅವನಿಗೆ ಚೆಂದ ಕಾಣುವ ಪ್ಲಾಸ್ಟರ್ ಹಾಕಿದ್ದರು. ಅವನು ಮತ್ತು ಅವನ ತಾಯಿ ಎರಡು ವಾರ ಶಾಲೆ ಮತ್ತು ಉದ್ಯೋಗಕ್ಕೆ ರಜೆ ಹಾಕಿ ಮನೆಯಲ್ಲಿರಬೇಕಾಯಿತು. ಈ ರಜೆಯ ಬಳಿಕ ಜಾನ್ ಶಾಲೆಗೆ ಹೋಗಲು ಕೇಳುತ್ತಿಲ್ಲ. ಹಾಸಿಗೆಯಿಂದ ಏಳಲು, ಹಲ್ಲುಜ್ಜಲು ಮತ್ತು ಶಾಲೆಗೆ ಹೊರಡಲು ಸಿದ್ಧವಾಗಲು ನಿರಾಕರಿಸುತ್ತಾನೆ. ಪ್ರತಿದಿನವೂ ಕೈನೋವು, ಹೊಟ್ಟೆನೋವು ಅಥವಾ ತಲೆನೋವು ಎಂದು ಕಾರಣ ಹೇಳುತ್ತಾನೆ. ಶಾಲಾ ಸಮವಸ್ತ್ರ, ಪುಸ್ತಕಗಳನ್ನು ಕಂಡರೆ ಸಾಕು ಅವನಿಗೆ ಅಳು ಬರುತ್ತದೆ ಮತ್ತು ಅಮ್ಮನಿಗೆ ಜೋತುಬೀಳುತ್ತಾನೆ. ಪ್ರವಾಸ, ಉಡುಗೊರೆ ಹೀಗೆ ನಾನಾ ಆಮಿಷವೊಡ್ಡಿ ಅವನ ತಾಯ್ತಂದೆ ಅವನನ್ನು ಶಾಲೆಗೆ ಕಳುಹಿಸಲು ರಮಿಸಿದರೂ ಪ್ರಯೋಜನವಾಗಿಲ್ಲ. ಅವನಿಗೆ ಬೈದು ಒತ್ತಾಯಪೂರ್ವಕವಾಗಿ ಶಾಲೆಗೆ ಕರೆದೊಯ್ದದ್ದೂ ಆಗಿದೆ. ಕಳೆದ ವಾರ ಅವನ ತಂದೆ ಹೀಗೆ ಅವನನ್ನು ಶಾಲೆಗೆ ಬಿಟ್ಟು ಬಂದರೂ ಎರಡೇ ಗಂಟೆಗಳಲ್ಲಿ ಅವನು ಮನೆಗೆ ಓಡಿಬಂದಿದ್ದ. ಜಾನ್‌ನ ವರ್ತನೆಯ ಬಗ್ಗೆ ಹೆತ್ತವರು ಕಳವಳಗೊಂಡಿದ್ದಾರೆ.
Advertisement
ಮಕ್ಕಳು ಮತ್ತು ಹದಿಹರಯದವರು ಬಹುತೇಕ ಬಾರಿ ತಮ್ಮನ್ನು ಕಾಡುತ್ತಿರುವ ಮಾನಸಿಕ ಒತ್ತಡ, ಬೇಗುದಿಗಳನ್ನು ದೈಹಿಕ ರೀತಿಗಳಲ್ಲಿ ಅಭಿವ್ಯಕ್ತಪಡಿಸುತ್ತಾರೆ. ದಣಿವು, ಹೊಟ್ಟೆನೋವು, ತಲೆನೋವು ಅವರು ಅನುಭವಿಸುತ್ತಿರುವ ಬೇಗುದಿ ಮತ್ತು ಒತ್ತಡವನ್ನು ವ್ಯಕ್ತಪಡಿಸುವ ಮಾರ್ಗಗಳಾಗಿರಬಹುದು.
ಮಕ್ಕಳು ಇಂತಹ ತೊಂದರೆಗಳನ್ನು ಹೊಂದಿದ್ದರೆ ಮನೋವೈದ್ಯಕೀಯ ತಜ್ಞರ ಬಳಿ ಸಮಾಲೋಚನೆ ನಡೆಸುವುದರಿಂದ ಪ್ರಯೋಜನ ಪಡೆದುಕೊಳ್ಳಬಹುದು. ಮನಸ್ಸು ಮತ್ತು ದೇಹದ ನಡುವಣ ಇಂತಹ ಪ್ರಾಮುಖ್ಯ ಸಂಬಂಧಗಳನ್ನು ಅರ್ಥ ಮಾಡಿಕೊಂಡು ವರ್ತನೆ ಮತ್ತು ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವ ನಿಟ್ಟಿನಲ್ಲಿ ಮಾನಸಿಕ ಆರೋಗ್ಯ ತಜ್ಞರು ಮಕ್ಕಳು, ಹದಿಹರಯದವರು ಹಾಗೂ ಅವರ ಹೆತ್ತವರಿಗೆ ಸಹಾಯ ಮಾಡಬಹುದಾಗಿದೆ.
ಸಣ್ಣ ವಯಸ್ಸಿನಿಂದಲೇ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ಮತ್ತು ಒತ್ತಡವನ್ನು ನಿಭಾಯಿಸಿಕೊಳ್ಳುವ ಮಾರ್ಗೋಪಾಯಗಳನ್ನು ಕಲಿತುಕೊಳ್ಳುವ ಮೂಲಕ ಮಕ್ಕಳು ಮತ್ತು ಹದಿಹರಯದವರು ಭವಿಷ್ಯದಲ್ಲಿ ಕಾಡಬಹುದಾದ ಪ್ರತಿಕೂಲ ಸನ್ನಿವೇಶಗಳನ್ನು ದಕ್ಷವಾಗಿ ಎದುರಿಸಬಹುದಾಗಿದೆ. ಆರೋಗ್ಯಪೂರ್ಣ ಜೀವನಶೈಲಿಯನ್ನು ರೂಢಿಸಿಕೊಳ್ಳುವುದಕ್ಕೆ ಇವು ಸೋಪಾನಗಳಾಗಿವೆ. ತಮ್ಮ ಮಕ್ಕಳ ಮಾನಸಿಕ ಆರೋಗ್ಯ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಹೆತ್ತವರಿಗೂ ಪ್ರಯೋಜನಗಳಿವೆ.