ವಿದ್ಯಾನಗರ: ಯುವ ಪೀಳಿಗೆಗೆ ಪರಂಪರಾಗತ ಕೃಷಿ ಪದ್ಧತಿಯ ಸಂದೇಶವನ್ನು ಹಾಗೂ ಕೃಷಿ ಸಂಸ್ಕೃತಿಯ ಮಹತ್ವ ತಿಳಿಸುವ ಪ್ರಯತ್ನವೇ ಮಳೆ ಸೊಬಗು. ಮರೆಯಾಗುವ ಗ್ರಾಮದ ಕಡೆಗಿನ ಆಸಕ್ತಿ, ಕೃಷಿಯ ಮೇಲಿನ ಪ್ರೀತಿಯನ್ನು ಮರಳಿ ತರುವ ಉದ್ಧೇಶದೊಂದಿಗೆ ಮುಂಗಾರು ಮಳೆಯ ಸ್ಪರ್ಶವನ್ನು, ನೀರಾಟದ ಸೊಬಗನ್ನು ಆಸ್ವಾದಿಸುತ್ತಾ ಶಾರೀರಿಕ ಮಾನಸಿಕ ಕ್ರಿಯಾಶೀಲತೆಯನ್ನು ಪರೀಕ್ಷಿಸುವ ಸ್ಪರ್ಧೆಗಳನ್ನೂ ಆಯೋಜಿಸಿ ಹೊಸತನವನ್ನು ತುಂಬುವ ಹಾಗೂ ಗದ್ದೆಯ ಕೆಸರಿನಲ್ಲಿರುವ ನಿಜವಾದ ಆನಂದವನ್ನು ನೀಡುವ ಉದ್ದೇಶದಿಂದ ಏರ್ಪಡಿಸಲಾದ ಮಳೆ ಸೊಬಗು ಹೊಸ ಅನುಭವ ಎಂದು ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್ ತಿಳಿಸಿದರು.
ಮಧೂರು ಗ್ರಾಮ ಪಂಚಾಯತ್ ಕುಟುಂಬಶ್ರೀ ಸಿಡಿಎಸ್ ಸಂಯುಕ್ತಾಶ್ರಯದಲ್ಲಿ ಮಧೂರು ಚೇನಕ್ಕೋಡು ಪಾರಶೇಖರದಲ್ಲಿ ಜರುಗಿದ ಮಳೆ ಸೊಬಗು-2019 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ಕೆಸರೇ ನಮ್ಮ ಅನ್ನದ ಮೂಲ. ಕೆಸರಲ್ಲಿ ಬಿತ್ತಿದ ಬೀಜ ನಮ್ಮ ಹಸಿವನ್ನು ನೀಗಿಸುವಾಗ ಆ ಕೆಸರಲ್ಲಿ ಒಂದು ದಿನವಾದರೂ ಮೈಮರೆತು ಆಡಿ, ಹಾಡಿ, ಕುಣಿಯೋಣ ಎಂದು ಹೇಳಿದರು.
ಮಳೆ ಸೊಬಗಿನ ಅಧ್ಯಕ್ಷತೆ ವಹಿಸಿದ್ದ ಮಧೂರು ಗ್ರಾಮ ಪಂಚಾಯತ್ ಸಿಡಿಎಸ್ ಅಧ್ಯಕ್ಷೆ ರೇಣುಕಾ ಮಾತನಾಡಿ ಇಂತಹ ಕಾರ್ಯಕ್ರಮಗಳ ಮೂಲಕ ಯುವಜನರನ್ನು ಕೃಷಿಯತ್ತ ಆಕರ್ಷಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ದೇಶದ ಹಸಿವನ್ನು ನೀಗಿಸಲು ಕೃಷಿಕರು ಪಡುವ ಕಷ್ಟವನ್ನು° ಮನಗಾಣುವಂತೆ ಮಾಡಬೇಕು. ನಮ್ಮ ಪೂರ್ವಜರು ಹೊಲ-ಗದ್ದೆಗಳಲ್ಲಿ ಕೆಸರಲ್ಲಿ ಬೆವರು ಸುರಿಸಿ ದುಡಿದು ಕುಟುಂಬವನ್ನು ಸಾಕುತ್ತಿದ್ದರು. ಮಣ್ಣಿನ ಮಹತ್ವವನ್ನು ಅರಿತು ಪರಿಸರವನ್ನು ನಾಶ ಮಾಡುವುದಲ್ಲ ಉಳಿಸಿ ಮುಂದಿನ ಜನಾಂಗಕ್ಕೆ ನೀಡಬೇಕು ಎಂಬ ಪ್ರಜ್ಞೆಯನ್ನು ಮೂಡಿಸಬೇಕು.ಎಂದರು.
ಕಾಸರಗೋಡು ಬ್ಲೋಕ್ ಪಂಚಾಯತ್ ಸದಸ್ಯ ಪ್ರಭಾಶಂಕರ ಮಾಸ್ಟರ್, ಬ್ಲೋಕ್ ಪಂಚಾಯತ್ ಸದಸ್ಯೆ ಯಶೋಧ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷ ಆವಿನ್.ಎಸ್.ವಿ, ಆರೋಗ್ಯ-ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಪುಷ್ಪ, ಪಂಚಾಯತ್ ಸದಸ್ಯ ಯೋಗೀಶ್.ಎಂ.ಆರ್, ಕುಟುಂಬಶ್ರೀ ಡಿಎಂಸಿ ಸುರೇಂದ್ರನ್.ಟಿ.ಟಿ, ಪಂಚಾಯತ್ ಉಪಾಧ್ಯಕ್ಷ ದಿವಾಕರ ಆಚಾರ್ಯ, ಮಧೂರು ಪಂಚಾಯತ್ ಕಾರ್ಯದರ್ಶಿ ಎ.ಆರ್.ಪ್ರಶಾಂತ್ ಕುಮಾರ್, ಕೃಷ್ಣ ಕುಮಾರ್ ಎಂ.ಎಸ್, ಕೃಷಿ ಅಧಿಕಾರಿ ಬಿಂದು ಶುಭ ಹಾರೈಸಿದರು.
ಓಟದ ಸ್ಪರ್ಧೆ, ಚೆಂಡಾಟ, ಹಗ್ಗ ಜಗ್ಗಾಟ, ಲಿಂಬೆ ಚಮಚ ಮುಂತಾದ ಸ್ಪರ್ಧೆಗಳಲ್ಲಿ ಪುಟ್ಟ ಮಕ್ಕಳು, ಮಹಿಳೆಯರು ಹಾಗೂ ಪುರುಷರು ಭಾಗವಹಿಸಿದರು. ಮಧ್ಯಾಹ್ನದ ಬಿಸಿಯೂಟದ ಜತೆಗೆ ಪಾಯಸದ ಸವಿ ಹೊಟ್ಟೆಯ ಹಸಿವು ತಣಿಸಿತು. ಆಕರ್ಷಕ ಮೆರವಣಿಗೆ ಮಧೂರು ಕ್ಷೇತ್ರದ ಪರಿಸರದಿಂದ ಪ್ರಾರಂಭಗೊಂಡು ಪರಕ್ಕಿಲ ಪಾರಶೇಖರ ಕೆಸರುಗದ್ದೆ ಬಳಿ ಕೊನೆಗೊಂಡಿತು. ಸಮವಸ್ತ್ರ ಧರಿಸಿದ ಮಹಿಳೆಯರು, ಮಕ್ಕಳು ಸಂಭ್ರಮದಿಂದ ಪಾಲ್ಗೊಂಡರು. ಪಂಚಾಯತಿನ ಎಲ್ಲಾ ಕುಟುಂಬಶ್ರೀ ಬಾಲಸಭೆ, ಜೆ.ಎಲ್.ಜಿ ಸದಸ್ಯರು, ಶಾಲಾ ಮಕ್ಕಳು, ಕ್ಲಬ್ ಸದಸ್ಯರು , ಪಾರಶೇಖರ ಸಮಿತಿ ಸದಸ್ಯರು, ಊರಜನರು ಹಾಗೂ ಪಂಚಾಯತ್ ಉದ್ಯೋಗಸ್ಥರು ಪಾಲ್ಗೊಂಡರು. ಉಪಾಧ್ಯಕ್ಷೆ,ಶಾರದ ಎಂ.ಕೆ ಸ್ವಾಗತಿಸಿ, ವಂದಿಸಿದರು.
ಹೆಜ್ಜೆ ಮುಂದಿಡುವುದೇ ಕಷ್ಟ
ಕೆಸರುಗದ್ದೆಯಲ್ಲಿ ಹೆಜ್ಜೆ ಮುಂದಿಡುವುದೇ ಕಷ್ಟ ಹಾಗಿದ್ದರೂ ಅಂಜದೆ ಆಡುವ ಓಡುವ ಕಠಿನ ಕಾರ್ಯವನ್ನೂ ಪೊÅàತ್ಸಾಹ ಹಾಗೂ ಸ್ಪರ್ಧೆಯ ಪೈಪೋಟಿ ಸುಲಭವಾಗಿಸಿತು. ಪಾರಂಪರಿಕ ಕ್ರೇಡೆಯನ್ನು ನೆನಪಿಸಿದ ಉತ್ಸವವಿದು. ಕಾಲು ಹೂತು ಹೋಗುತ್ತಿದ್ದರೂ ಹೆಣಗಾಡಿ ಗೆಲ್ಲುವ ಆಟಗಳು ರೋಮಾಂಚಕ ಅನುಭವ ನೀಡಿದುವು. ನಮ್ಮ ಜೀವನಾಡಿಯಾಗಿದ್ದ ಸಂಸ್ಕೃತಿಯ ಉಳಿವಿಗೆ ಇಂತಹ ಉತ್ಸವಗಳ ಅಗತ್ಯವಿದೆ.
– ಶ್ರೀಧರ್ ಕೂಡ್ಲು
ಸದಸ್ಯರು, ಮಧೂರು ಗ್ರಾಮ ಪಂಚಾಯತ್