Advertisement
ಬಳ್ಳಾರಿಯಲ್ಲಿ ಸುಮಾರು 5 ಎಕರೆ ಜಾಗದಲ್ಲಿ ಬಹುದೊಡ್ಡ ಬಂಗಲೆ ಕಟ್ಟಿಕೊಂಡಿರುವ ರೆಡ್ಡಿ, ಅದರ ಸುತ್ತಲು 40 ಅಡಿ ಎತ್ತರದ ಗೋಡೆ ಕಟ್ಟಿದ್ದಾರೆ. ಮನೆಯೊಳಗೆ ಹೋಗಬೇಕಾದರೆ 8ರಿಂದ 10 ಕಡೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.
Related Articles
Advertisement
ಗಾಲಿ ಜನಾರ್ದನ ರೆಡ್ಡಿಗೆ ಕಾರುಗಳ ಅತಿಯಾದ ವ್ಯಾಮೋಹವಿತ್ತು. ವಿಶ್ವದ ಪ್ರತಿಷ್ಠಿತ ಸಂಸ್ಥೆಗಳ ಎಲ್ಲ ಬಗೆಯ ಐಷಾರಾಮಿ ಕಾರುಗಳು ಅವರ ಬಳಿ ಇದ್ದವು. ನಿತ್ಯದ ಪ್ರವಾಸಕ್ಕೆ ಕಪ್ಪು ಬಣ್ಣದ ಸ್ಕಾರ್ಪಿಯೋವನ್ನು ಹೆಚ್ಚಾಗಿ ಬಳಸುತ್ತಿದ್ದರು. ಒಂದೊಂದು ಕಾರನ್ನು ನೋಡಿಕೊಳ್ಳಲು ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಿದ್ದರು.
ಇಷ್ಟು ಮಾತ್ರವಲ್ಲ, ಲಕ್ಷಾಂತರ ಮೌಲ್ಯದ ಕೈಗಡಿಯಾರ, ಚಿನ್ನ ಲೇಪಿತ ಸೂಟುಗಳನ್ನು ಧರಿಸುವುದು ಅವರ ಐಷಾರಾಮಿ ಜೀವನದ ಭಾಗವಾಗಿತ್ತು.
ತಿರುಮಲ ತಿರುಪತಿ ದೇವಸ್ಥಾನಕ್ಕೆ ಕೋಟ್ಯಾಂತರ ರೂ. ಮೌಲ್ಯದ ಮೂರು ಚಿನ್ನದ ಕಿರೀಟ ನೀಡಿದ್ದಾರೆ. ಮಗಳ ಮದುವೆಗೆ ಸುಮಾರು 500 ಕೋಟಿ ರೂ.ಖರ್ಚು ಮಾಡಿದ್ದರು. ಮದುವೆ ಆಮಂತ್ರಣ ಪತ್ರಿಕೆಗೆ ಲಕ್ಷಾಂತರ ರೂ. ಖರ್ಚು ಮಾಡಿದ್ದರೆಂದು ಮೂಲಗಳು ತಿಳಿಸಿವೆ. ಹೀಗೆ ಮನೆಯೊಳಗೆ ರಾಜನಂತೆ ವಿಲಾಸಿ ಜೀವನ ನಡೆಸುತ್ತಿದ್ದ ಗಾಲಿ ಜನಾರ್ದನ ರೆಡ್ಡಿ ಮತ್ತೆ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಚಿನ್ನ, ವಜ್ರಾಭರಣದ ವಿವರ: ರೆಡ್ಡಿ ತಮ್ಮ ಮನೆಗೆ ಅಲಂಕಾರಕ್ಕಾಗಿ ಚಿನ್ನ, ಬೆಳ್ಳಿ, ಮುತ್ತು ಹಾಗೂ ಪ್ಲಾಟಿನಂ ಸಹಿತವಾಗಿ ನವರತ್ನದ ಹರಳುಗಳನ್ನು ಬಳಸಿದ್ದರು. ಮನೆಯ ಹೂವಿನ ಕುಂಡ ಹಾಗೂ ಸ್ಟಾಂಡ್‌ಗಳನ್ನು ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ್ದರು. ಅವರ ಪತ್ನಿಯ ಬಳಿ ಚಿನ್ನ ಹಾಗೂ ವಜ್ರದ ಬಳೆ, ಸರ, ಕಿವಿಯೋಲೆ, ಮೂಗುತಿ, ನೆಕ್ಲೇಸ್ ಹೀಗೆ ಹತ್ತಾರು ಬಗೆಯ ಚಿನ್ನ, ವಜ್ರದ ಆಭರಣಗಳಿದ್ದವು. ಹೇರ್‌ಪಿನ್, ಐಸ್‌ಕ್ರೀಂ ಸ್ಪೂನ್, ತಟ್ಟೆ ಎಲ್ಲವೂ ಚಿನ್ನ, ಬೆಳ್ಳಿಯದ್ದಾಗಿದ್ದವು. ಜತೆಗೆ ಬೆಳ್ಳಿಯಿಂದ ಮಾಡಿದ್ದ ಮೊಬೈಲ್ ಫೋನ್ ಕೂಡ ಹೊಂದಿದ್ದರು.
ರೆಡ್ಡಿ, ಪತ್ನಿ ಹಾಗೂ ಅವರ ಮಕ್ಕಳ ಹೆಸರಿನಲ್ಲಿ ಸುಮಾರು 28.48 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಇದ್ದವು. ರೆಡ್ಡಿ ನಿತ್ಯ ಬಳಕೆಗೆ ಚಿನ್ನದ ಬೆಲ್ಟ್ ಬಳಸುತ್ತಿದ್ದು, ಅದರ ಮೌಲ್ಯ 13.15 ಲಕ್ಷವಾಗಿತ್ತು.2.58 ಕೋಟಿ ಮೌಲ್ಯದ ಚಿನ್ನದ ವಿಗ್ರಹ ಹೊಂದಿದ್ದರು. ಅವರ ಹೆಂಡತಿ ಬಳಿ 4.82 ಲಕ್ಷ ಮೌಲ್ಯದ ವಜ್ರದ ಪಟ್ಟಿ ಇತ್ತು ಎಂಬ ವಿವರಗಳು 2010-11ರಲ್ಲಿ ಲೋಕಾಯುಕ್ತಕ್ಕೆ ನೀಡಿದ ವರದಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.