ಬೆಂಗಳೂರು: ಸರ್ಕಾರಿ ಸೇವೆಗಳು ಜನ ಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು ಆರಂಭಿಸಿದ್ದ ಸೇವಾಸಿಂಧು ಯೋಜನೆಯಡಿ ಲಕ್ಷಾಂತರ ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಉಳಿದುಕೊಂಡಿದೆ. ಕಂದಾಯ, ವಾಣಿಜ್ಯ ತೆರಿಗೆ ಇಲಾಖೆ, ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಔಷಧಗಳ ನಿಯಂತ್ರಣ ಇಲಾಖೆ, ಕೃಷಿ ಇಲಾಖೆ, ನೀರಾವರಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರಿಗೆ, ಆಹಾರ, ಕಾರ್ಮಿಕ, ತಾಂತ್ರಿಕ ಶಿಕ್ಷಣ ಇಲಾಖೆ ಸಹಿತವಾಗಿ ರಾಜ್ಯದ 43 ಇಲಾಖೆಗಳ ಸುಮಾರು 300ಕ್ಕೂ ಅಧಿಕ ಸೇವೆಗಳು ಆನ್‌ಲೈನ್‌ನಲ್ಲೇ ಲಭ್ಯವಾಗುವಂತೆ ಸೇವಾಸಿಂಧು ಯೋಜನೆ ರೂಪಿಸಲಾಗಿದೆ.
ಸರ್ಕಾರದ ವಿವಿಧ ಯೋಜನೆಗಳಿಗೆ ಸೇವಾಸಿಂಧು ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಲ್ಲದೆ, ಅರ್ಹ ಫಲಾನುಭವಿಗಳು ಸರ್ಕಾರದ ಸೌಲಭ್ಯಕ್ಕಾಗಿ ಇಲಾಖೆಯಿಂದ ಇಲಾಖೆಗೆ ಅಲೆಯುವುದನ್ನು ತಪ್ಪಿಸಲು ಇದನ್ನು ರೂಪಿಸಲಾಗಿದೆ. ಇದಕ್ಕೆ ಪ್ರತಿ ದಿನ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗುತ್ತಿರುತ್ತದೆ. ಅತಿ ಶೀಘ್ರದಲ್ಲಿ ಜನ ಸಾಮಾನ್ಯರಿಗೆ ಸೌಲಭ್ಯ ಕಲ್ಪಿಸಬೇಕಾದ ವ್ಯವಸ್ಥೆಯಡಿ ತಿಂಗಳಾದರೂ ಅರ್ಹರಿಗೆ ಸೌಲಭ್ಯ ಸಿಗುತ್ತಿಲ್ಲ.
ಕಾರ್ಮಿಕ ಇಲಾಖೆಗೆ ಸಂಬಂಧಿಸಿದ 7300, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ 37011, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ 9899, ತಾಂತ್ರಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದ 4635, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಬಂಧಿಸಿದ 2069, ರಾಜ್ಯ ಪೊಲೀಸ್ ಇಲಾಖೆಗೆ ಸಂಬಂಧಿಸಿದ 1516, ವಿಶೇಷಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಸಂಬಂಧಿಸಿದ 931, ಕಾಲೇಜು ಶಿಕ್ಷಣ ಇಲಾಖೆಯ 272, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ 204, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 157 ಅರ್ಜಿಗಳು ಇತ್ಯರ್ಥವಾಗದೆ ಉಳಿದುಕೊಂಡಿದೆ. ಸುಮಾರು 12 ಇಲಾಖೆಯಲ್ಲಿ 100ಕ್ಕಿಂತಲೂ ಕಡಿಮೆ ಅರ್ಜಿಗಳು ಇತ್ಯರ್ಥವಾಗದೆ ಉಳಿದಿದೆ. ಒಟ್ಟಾರೆಯಾಗಿ 129960 ಅರ್ಜಿಗಳು ಇತ್ಯರ್ಥವಾಗದೆ ಉಳಿದುಕೊಂಡಿದೆ.
ಸೇವೆಯ ಬಳಕೆಗೆ ನಿರಾಸಕ್ತಿ: ಕಾರ್ಮಿಕ ಇಲಾಖೆಯ 20 ಸೇವೆಗಳಲ್ಲಿ ನಾಲ್ಕೈದು ಸೇವೆಗಳನ್ನು ಗ್ರಾಹಕರು ಬಳಸಿಕೊಳ್ಳುತ್ತಿಲ್ಲ. ಪೊಲೀಸ್ ಇಲಾಖೆಯ 19 ಸೇವೆಗಳಲ್ಲಿ 6, ಕೈಗಾರಿಕಾ ಭದ್ರತೆ ಸಂಬಂಧಿಸಿದ 18 ಸೇವೆಗಳಲ್ಲಿ 16, ಔಷಧ ನಿಯಂತ್ರಣ ಇಲಾಖೆಯ 16 ಸೇವೆಗಳಲ್ಲಿ 16, ಸಾಮಾಜಿಕ ಭದ್ರತೆಗೆ ಸಂಬಂಧಿಸಿದ 11 ಸೇವೆಗಳಲ್ಲಿ 11, ಕೃಷಿ ಇಲಾಖೆಯ 9 ಸೇವೆಗಳಲ್ಲಿ 9 ಸೇವೆಗಳನ್ನು ಬಳಸಿಕೊಂಡಿಲ್ಲ. ಉಳಿದಂತೆ ಬಹುತೇಕ ಇಲಾಖೆಗಳ ಸೇವಾಸಿಂಧು ಯೋಜನೆಯಡಿ ಲಭ್ಯವಿರುವ ಸೇವೆಗಳಲ್ಲಿ ಕನಿಷ್ಠ ಪ್ರಮಾಣದ ಸೇವೆಯನ್ನು ಸಾರ್ವಜನಿಕರು ಬಳಸಿಕೊಂಡಿಲ್ಲ. ಒಟ್ಟಾರೆ ಲಭ್ಯವಿರುವ 300 ಸೇವೆಗಳಲ್ಲಿ 108 ಸೇವೆಗಳನ್ನು ಮಾತ್ರ ನಿರಂತರವಾಗಿ ಬಳಸಿಕೊಳ್ಳಲಾಗುತಿದ್ದು, 192 ಸೇವೆಗಳನ್ನು ಬಳಸಿಕೊಳ್ಳುತ್ತಿಲ್ಲ.
ಅತಿ ಹೆಚ್ಚು ಅರ್ಜಿ ಬರುವ ಇಲಾಖೆ: ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ವಿಶೇಷಚೇತನ ಮತ್ತು ಹಿರಿಯ ನಾಗರಿಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಗೆ ಅತಿ ಹೆಚ್ಚಿನ ಅರ್ಜಿಗಳು ಬರುತ್ತಿವೆ. ಅಲ್ಪಸಂಖ್ಯಾತರ ಕಲ್ಯಾಣ, ಕಂದಾಯ, ಸಾರಿಗೆ, ಸಣ್ಣ ನೀರಾವರಿ ಮೊದಲಾದ 20ಕ್ಕೂ ಅಧಿಕ ಇಲಾಖೆಗಳಿಗೆ ಒಂದು ಅರ್ಜಿಯೂ ಸೇವಾ ಸಿಂಧು ಯೋಜನೆಯಡಿ ಬರುತ್ತಿಲ್ಲ.
ಜನರಿಗೆ ತಲುಪುವಲ್ಲಿ ವಿಫಲ: ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳನ್ನು ನಾನಾ ಮಾರ್ಗಗಳಿಂದ ಜನ ಸಾಮಾನ್ಯರಿಗೆ ಬೆಂಗಳೂರು ಒನ್, ಸಿಎಸ್‌ಸಿ ಸೇವಾ ಕೇಂದ್ರಗಳು, ಕರ್ನಾಟಕ ಒನ್, ಅಟಲ್ ಜೀ ಜನ ಸ್ನೇಹಿ ಕೇಂದ್ರ ಮತ್ತು ಬಾಪೂಜಿ ಕೇಂದ್ರಗಳ ಮೂಲಕ ನೀಡಲಾಗುತ್ತಿತ್ತು. ಇವುಗಳ ಸೇವೆಯನ್ನು ಒಂದೇ ಸೂರಿನಡಿ ನಗದು ರಹಿತ, ಕಾಗದ ರಹಿತ ವಿಧಾನಗಳ ಮೂಲಕ ನೀಡಲು ಸೇವಾಸಿಂಧು ಯೋಜನೆ ಜಾರಿಗೆ ಮಾಡಲಾಗಿತ್ತು. ಸರ್ಕಾರವು ಸಮರ್ಪಕವಾಗಿ ಅರಿವು ಮೂಡಿಸದೇ ಇರುವುದರಿಂದ ಇದು ಜನ ಸಾಮಾನ್ಯರಿಗೆ ತಲುಪುವಲ್ಲಿ ವಿಫಲವಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ.
* ರಾಜು ಖಾರ್ವಿ ಕೊಡೇರಿ