Advertisement
ಮಹಾಮಸ್ತಕಾಭಿಷೇಕಕ್ಕೆ ಅಗತ್ಯವಿರುವ ತಾತ್ಕಾಲಿಕ ವ್ಯವಸ್ಥೆಗಳೊಂದಿಗೆ ಶಾಶ್ವತ ಮೂಲ ಸೌಕರ್ಯ ಕಲ್ಪಿಸುವ ಕಾರ್ಯವೂ ನಡೆದಿರುವುದರಿಂದ ಇತರೆ ಹೋಬಳಿಗಳಿಗೆ ಹೋಲಿಸಿದರೆ, ಶ್ರವಣ ಬೆಳಗೊಳ ಹೋಬಳಿಯು ಅಭಿವೃದ್ಧಿ, ಸೌಲಭ್ಯದಲ್ಲಿ ಮುಂದಿದೆ ಎಂಬುದು ಸ್ಥಳೀಯರ ಭಾವನೆ. ಇದು ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ನೀಡುತ್ತಿದೆ.
ಅಪರೂಪದ ಐತಿಹಾಸಿಕ ಮಹೋತ್ಸವಕ್ಕೆ ರಾಜ್ಯ, ರಾಷ್ಟ್ರ ಮಾತ್ರವಲ್ಲದೇ ಜಗತ್ತಿನ ನಾನಾ ಭಾಗಗಳಿಂದಲೂ ಜನ ಆಗಮಿಸುತ್ತಾರೆ. ಸುಮಾರು 8000 ಜನಸಂಖ್ಯೆ ಹೊಂದಿರುವ ಬೆಳಗೊಳಕ್ಕೆ ಮಹೋತ್ಸವ ನಡೆಯುವ 20 ದಿನಗಳಲ್ಲಿ 35 ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡುವ ನಿರೀಕ್ಷೆ ಇದೆ. ದೂರದ ಪ್ರದೇಶದಿಂದ ಬಂದವರು ಉಳಿಯಲೆಂದೇ ದಿನ, ವಾರ ಹಾಗೂ ತಿಂಗಳ ಮಟ್ಟಿಗೆ ಮನೆಗಳು ಬಾಡಿಗೆಗೆ ದೊರೆಯುತ್ತವೆ.
Related Articles
Advertisement
5000ದಿಂದ 50 ಸಾವಿರದವರೆಗೆ ಬಾಡಿಗೆ ಮನೆಪೀಠೊಪಕರಣಗಳು, ಎಲೆಕ್ಟ್ರಾನಿಕ್ ಉಪಕರಣಗಳನ್ನು ಯಥಾಸ್ಥಿತಿಯಲ್ಲೇ ಬಳಸಲು ಅವಕಾಶವಿರುವಂತೆಯೇ ಮನೆಗಳು ಬಾಡಿಗೆಗೆ ಸಿಗುತ್ತವೆ. ನಾಲ್ಕು ಮಂದಿ ವಾಸ್ತವ್ಯ ಹೂಡಬಹುದಾದ ಮನೆ, ಕೊಠಡಿಯ ಒಂದು ದಿನದ ಬಾಡಿಗೆ ದರ ನಾಲ್ಕೈದು ಸಾವಿರ ರೂ. ಇದೆ. ಏಳೆಂಟು ಮಂದಿ ಆರಾಮವಾಗಿ ವಾಸ್ತವ್ಯ ಹೂಡಬಹುದಾದ ಮನೆಗಳಿಗೆ ತಿಂಗಳಿಗೆ 50,000ವರೆಗೆ ಬಾಡಿಗೆ ಇದೆ. ಕಮೋಡ್ ಸೇರಿದಂತೆ ಇತರೆ ಸುಧಾರಿತ ಸೌಲಭ್ಯವಿರುವ ವಿಶಾಲ ಮನೆಗಳ ಬಾಡಿಗೆ ತಿಂಗಳಿಗೆ 60,000ದಿಂದ 75,000 ರೂ.ವರೆಗೂ ಬಾಡಿಗೆಗೆ ನೀಡಿದ್ದೇವೆ. ಹಿಂದಿನ ಮಹಾಮಸ್ತಕಾಭಿಷೇಕಕ್ಕೆ ಹೋಲಿಸಿದರೆ, ಬಾಡಿಗೆ ದರ ಈ ಬಾರಿ ಮೂರು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಸ್ಥಳೀಯ ವ್ಯಾಪಾರಿ ರಮೇಶ್ “ಉದಯವಾಣಿ’ಗೆ ತಿಳಿಸಿದ್ದಾರೆ. 100ಕ್ಕೂ ಹೆಚ್ಚು ಹೊಸ ಮನೆ ಬಾಡಿಗೆಗೆ ಲಭ್ಯ
ಮಹಾಮಸ್ತಕಾಭಿಷೇಕದ ಹೊತ್ತಿನಲ್ಲೇ ಹೋಬಳಿಯಲ್ಲಿ 100ಕ್ಕೂ ಹೊಸ ಮನೆಗಳು ನಿರ್ಮಾಣವಾಗಿದ್ದು, ಬಾಡಿಗೆ ತುಸು ಹೆಚ್ಚೇ ಇದೆ. ಹಿಂದೆ ಯಾರೂ ಬಳಸದ ಮನೆಗಳಿಗೆ ಬೇಡಿಕೆಯೂ ಇದ್ದು, ಸೌಲಭ್ಯಕ್ಕೆ ಅನುಗುಣವಾಗಿ ಬಾಡಿಗೆ ದರವು ಏರಿಳಿತವಾಗುತ್ತದೆ. ಬಹಳಷ್ಟು ಮನೆಗಳು ಈಗಾಗಲೇ ಬುಕ್ ಆಗಿವೆ. ಮಳಿಗೆಗಳು ಬಾಡಿಗೆಗೆ ಲಭ್ಯ
ಮನೆಗಳು ಮಾತ್ರವಲ್ಲದೆ ಮಳಿಗೆಗಳು ಬಾಡಿಗೆಗೆ ಲಭ್ಯವಿವೆ. ಬೆಟ್ಟಕ್ಕೆ ಹೊಂದಿಕೊಂಡ ಪ್ರದೇಶದ ಮಳಿಗೆಗಳ ಬಾಡಿಗೆಯೂ ಗಗನಮುಖೀಯಾಗಿದೆ. ಹಳೆಯ ಮನೆಗಳಲ್ಲಿ ಖಾಲಿಯಿರುವ ಪ್ಯಾಸೇಜ್, ಪೋರ್ಟಿಕೋ ಆವರಣಗಳನ್ನು ತಾತ್ಕಾಲಿಕವಾಗಿ ನವೀಕರಿಸಿ ಬಾಡಿಗೆಗೆ ನೀಡಲಾಗುತ್ತಿದೆ. ತಂಪು ಪಾನೀಯ, ತಿಂಡಿ ತಿನಿಸು, ಉಡುಗೆ -ತೊಡುಗೆ, ಸೀರೆ, ಅಲಂಕಾರಿಕ, ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳು ತಲೆಯೆತ್ತಿದ್ದು, ಕಳೆದ ಬಾರಿ ಹೋಲಿಸಿದರೆ ಶೇ.50ರಷ್ಟು ಮಳಿಗೆಗಳು ಹೆಚ್ಚಾಗಿವೆ. ಮಹೋತ್ಸವಕ್ಕೆ ಉತ್ತರ ಭಾರತದಿಂದಲೂ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಈ ಬಾರಿ ಶ್ರವಣ ಬೆಳಗೊಳಕ್ಕೆ 12 ಹೊಸ ರೈಲು ಸಂಪರ್ಕವೂ ಇರುವುದರಿಂದ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆ ಇದೆ. ಹಾಗಾಗಿ ರಾಜಸ್ತಾನದ ಜೋಧಪುರದಿಂದಲೂ ಸಾಕಷ್ಟು ಮಂದಿ ಈಗಾಗಲೇ ಇಲ್ಲಿಗೆ ಬಂದು ಮಳಿಗೆಗಳನ್ನು ತೆರೆದಿದ್ದಾರೆ. ಅಲ್ಲದೇ ಉತ್ತರ ಭಾರತದ ಜನರಿಗೆ ಬೇಕಾದ ಆಹಾರ, ತಿಂಡಿ- ತಿನಿಸು ಮಾರಾಟಕ್ಕೆ ಸಜ್ಜಾಗಿದ್ದಾರೆ. ಸಾಮಾನ್ಯ ಸಂದರ್ಭದಲ್ಲಿ ಮನೆ, ಮಳಿಗೆಗೆ ಬಾಡಿಗೆ ನೀಡುವಾಗ ಮಹಾಮಸ್ತಕಾಭಿಷೇಕ ಮಹೋತ್ಸವ ನಡೆಯುವ ದಿನಗಳು ಸೇರಿದಂತೆ ಹಿಂದೆ ಮುಂದೆ ಒಂದೆರೆಡು ತಿಂಗಳ ಮಟ್ಟಿಗೆ ಮನೆ, ಮಳಿಗೆಯನ್ನು ಮಾಲೀಕರಿಗೆ ಬಿಟ್ಟುಕೊಡಬೇಕು ಎಂಬ ಷರತ್ತಿನಡಿ ಒಡಂಬಡಿಕೆಯಾಗಿರುತ್ತದೆ. ಮಳಿಗೆಗಳು, ಕ್ಯಾಂಟೀನ್, ಉಪಾಹಾರ ಕೇಂದ್ರ, ಹೋಟೆಲ್, ವಸತಿಗೃಹಗಳು, ಬಸ್ಸು, ಆಟೋರಿಕ್ಷಾ, ಟಾಂಗಾ, ಖಾಸಗಿ ವಾಹನ ಇತರೆ ವಹಿವಾಟು ಕೂಡ ಈ ದಿನಗಳಲ್ಲಿ ಹಲವು ಪಟ್ಟು ಹೆಚ್ಚಾಗಲಿದೆ. ಇದು ಕೇವಲ ಶ್ರವಣ ಬೆಳಗೊಳಕ್ಕೆ ಸೀಮಿತವಾಗಿರುವುದಿಲ್ಲ. ಬದಲಿಗೆ ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ನಗರದ ವಹಿವಾಟಿನಲ್ಲೂ ಹೆಚ್ಚಳವಾಗಲಿದೆ ಎಂದು ಸ್ಥಳೀಯರು ಹೇಳುತ್ತಾರೆ. ಏಕೆಂದರೆ ಶ್ರವಣ ಬೆಳಗೊಳದಲ್ಲಿ ವಸತಿ ಸಿಗದಿದ್ದರೆ ಚನ್ನರಾಯಪಟ್ಟಣ, ಹಾಸನದಲ್ಲಿ ವಸತಿ ಗೃಹಗಳನ್ನು ಆಶ್ರಯಿಸುವುದು ಅನಿವಾರ್ಯ. ಬಾಹುಬಲಿ ದರ್ಶನಕ್ಕೆ ಆಗಮಿಸುವವರ ಪೈಕಿ ಬಹಳಷ್ಟು ಮಂದಿ ಸುತ್ತಮುತ್ತಲ ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತಾರೆ. ಇದರಿಂದ ಆ ಪ್ರದೇಶಗಳ ವಹಿವಾಟಿನ ಮೇಲೆಯೂ ಸಹಜವಾಗಿ ಪರಿಣಾಮ ಬೀರುತ್ತದೆ. ಬೆಂಗಳೂರು- ಮಂಗಳೂರು ಹೆದ್ದಾರಿ ಬದಿಯ ಹೋಟೆಲ್ ಉದ್ಯಮದ ವಹಿವಾಟಿನಲ್ಲೂ ಸಹಜವಾಗಿಯೇ ಏರಿಕೆ ಕಾಣುತ್ತದೆ. ಪ್ರವಾಸೋದ್ಯಮ ಆಕರ್ಷಣೆಗೂ ಒತ್ತು
ಪ್ರವಾಸೋದ್ಯಮ ಇಲಾಖೆ ಈ ಬಾರಿ ಹೆಲಿ ಟೂರಿಸಂಗೂ ಆದ್ಯತೆ ನೀಡಿದೆ. ಜತೆಗೆ ಸಮೀಪದ ಜನಿವಾರ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ನೇತ್ರಾವತಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಿದ್ದು, ಪ್ರಮುಖ ಆಕರ್ಷಣೆ ಎನಿಸಿದೆ. ಇದು ಕೂಡ ಸುತ್ತಮುತ್ತಲ ಆರ್ಥಿಕ ವಹಿವಾಟು ವೃದ್ಧಿಗೆ ಉತ್ತೇಜನ ನೀಡುವಂತಿದೆ. ಒಟ್ಟಾರೆ ಐತಿಹಾಸಿಕ ಆಚರಣೆಯು ಧಾರ್ಮಿಕತೆಗಷ್ಟೇ ಸೀಮಿತವಾಗಿರದೆ ವ್ಯಾಪಾರ- ವಹಿವಾಟು ವೃದ್ಧಿಗೂ ಪೂರಕವಾಗಿದ್ದು, ಬೆಳಗೊಳದ ಸುತ್ತಮುತ್ತಲಿನ ಭಾಗಗಳ ಆರ್ಥಿಕ ಬಲ ವೃದ್ಧಿಗೂ ಸಹಕಾರಿಯಾಗಿರುವುದನ್ನು ಜನರು ಸ್ಮರಿಸುತ್ತಾರೆ. – ಎಂ.ಕೀರ್ತಿಪ್ರಸಾದ್