Advertisement

ಕೋಟ್ಯಂತರ ಆಯುಷ್ಮಾನ್‌ ಕಾರ್ಡ್‌ ವ್ಯರ್ಥ!

11:17 PM Jul 24, 2023 | Team Udayavani |

ದಾವಣಗೆರೆ: ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿ ರಾಜ್ಯದಲ್ಲಿ ನೋಂದಣಿಯಾದ ಹಳೆಯ (ಒಂದು ವರ್ಷ ಹಿಂದಿನ) ಕೋಟ್ಯಂತರ ಆರೋಗ್ಯ ವಿಮೆ ಕಾರ್ಡ್‌ಗಳು ನಿರುಪಯುಕ್ತವಾಗಿವೆ!

Advertisement

ನೀವು ಮಾಡಿಸಿಕೊಂಡ ಆಯುಷ್ಮಾನ್‌- ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯ ಆರೋಗ್ಯ ವಿಮೆ ಕಾರ್ಡ್‌ನಲ್ಲಿ ಹೆಲ್ತ್‌ ಐಡಿ ನಂಬರ್‌ ಎಂದರೆ, ಪಿಎಂ-ಜೆಎವೈ ಐಡಿ ಇಲ್ಲದಿದ್ದರೆ ಅದು ಈಗ ವ್ಯರ್ಥವಾಗಿದೆ. ಆದ್ದರಿಂದ ನೀವು ಆನ್‌ಲೈನ್‌ ಸೇವಾ ಕೇಂದ್ರ ಇಲ್ಲವೇ ಸ್ವತಃ ಅರ್ಜಿ ಹಾಕಿ ಉಚಿತವಾಗಿ ಹೆಲ್ತ್‌ ಐಡಿ (ಪಿಎಂ-ಜೆಎವೈ ಐಡಿ) ನಂಬರ್‌ ಇರುವ ಹೊಸ ಆಯುಷ್ಮಾನ್‌ ಭಾರತ್‌- ಪ್ರಧಾನಮಂತ್ರಿ ಜನಾರೋಗ್ಯ ಕರ್ನಾಟಕ ಕಾರ್ಡ್‌ ಪಡೆದುಕೊಳ್ಳಬೇಕು.

ಕಳೆದ ವರ್ಷ ಕೇಂದ್ರ ಸರಕಾರವು ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಆರೋಗ್ಯ ವಿಮೆ ಕಾರ್ಡ್‌ ಗಳಲ್ಲಿ ಮಾರ್ಪಾಡು ತಂದಿದ್ದು, ಇದರಲ್ಲಿ ಹೆಲ್ತ್‌ ಐಡಿ (ಪಿಎಂ-ಜೆಎವೈ ಐಡಿ) ನಂಬರ್‌ ಸೇರಿಸಿದೆ. ಆದ್ದರಿಂದ ಈಗ ಆರೋಗ್ಯ ವಿಮೆ ಪಡೆಯುವವರು ಹೆಲ್ತ್‌ ಐಡಿ ಇರುವ ಹೊಸ ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನಾರೋಗ್ಯ ಕರ್ನಾಟಕ ಕಾರ್ಡ್‌ (ಎಬಿ-ಪಿಎಂಜೆಎವೈ-ಎಆರ್‌ಕೆ ಕಾರ್ಡ್‌) ಪಡೆದುಕೊಳ್ಳಬೇಕಾಗಿದೆ.

ಆಯುಷ್ಮಾನ್‌ ಕಾರ್ಡ್‌ಗಳನ್ನು ಮೊದಲು 35 ರೂ. ಕೊಟ್ಟು ಜನರು ಮಾಡಿಸಿಕೊಂಡಿದ್ದರು. ಈಗ ಎಬಿ- ಪಿಎಂಜೆಎವೈ-ಎಆರ್‌ಕೆ ಕಾರ್ಡ್‌ಗಳನ್ನು ಸಾರ್ವಜನಿಕರು ಉಚಿತವಾಗಿ ಪಡೆಯಬಹುದು. 1 ವರ್ಷದಲ್ಲಿ ರಾಜ್ಯದಲ್ಲಿ 45 ಲಕ್ಷಕ್ಕೂ ಅಧಿಕ ಹೊಸ ಎಬಿ-ಪಿಎಂಜೆಎವೈ-ಎಆರ್‌ಕೆ ಕಾರ್ಡ್‌ ನೋಂದಣಿಯಾಗಿವೆ.

ಕಾರ್ಡ್‌ ಕಡ್ಡಾಯವಲ್ಲ
ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆ ಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ (ಬಿಪಿಎಲ್‌ನವರಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ) ಹಾಗೂ ರಿಯಾಯಿತಿ (ಎಪಿಎಲ್‌ನವರಿಗೆ ಶೇ.30ರಷ್ಟು ರಿಯಾಯಿತಿ) ಆರೋಗ್ಯ ಸೇವೆ ಪಡೆಯಲು ಆರೋಗ್ಯ ಕಾರ್ಡ್‌ ಕಡ್ಡಾಯವಲ್ಲ ಎಂದು ಸರಕಾರ ಹೇಳಿದೆ. ಆದರೆ ಕಾರ್ಡ್‌ ಬದಲಿಗೆ ಆಧಾರ್‌ ಕಾರ್ಡ್‌, ಪಡಿತರ ಚೀಟಿ ಕೊಟ್ಟು ಸರಕಾರಿ ವೈದ್ಯರಿಂದ ಶಿಫಾರಸು ಪತ್ರ ಪಡೆದು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು. ಆರೋಗ್ಯ ಕಾರ್ಡ್‌ ಮಾಡಿಟ್ಟುಕೊಂಡರೆ ತುರ್ತು ಆರೋಗ್ಯ ಸೇವೆ ಪಡೆಯಬೇಕಾದ ಸಂದರ್ಭದಲ್ಲಿ ದಾಖಲೆ ಪತ್ರಗಳಿಗಾಗಿ ತಡಕಾಡುವುದು ತಪ್ಪುತ್ತದೆ.

Advertisement

ಕಳೆದ ವರ್ಷದಿಂದ ಫಲಾನುಭವಿಯ ಆರೋಗ್ಯ ಮಾಹಿತಿ ದಾಖಲಿಸಲು ಸಹಕಾರಿಯಾಗುವಂತೆ ಹೆಲ್ತ್‌ ಐಡಿ ಇರುವ ಹೊಸ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಹೆಲ್ತ್‌ ಐಡಿ ಇಲ್ಲದ ಹಳೆಯ ಕಾರ್ಡ್‌ಗಳು ಈಗ ನಿರುಪಯುಕ್ತವಾಗಿವೆ. ಆದ್ದರಿಂದ ಸಾರ್ವಜನಿಕರು ಆನ್‌ಲೈನ್‌ ಸೇವಾ ಕೇಂದ್ರ ಇಲ್ಲವೇ ಸ್ವತಃ ಅರ್ಜಿ ಹಾಕಿ ಉಚಿತವಾಗಿ ಹೊಸ ಎಬಿ-ಪಿಎಂಜೆವೈ-ಎಆರ್‌ಕೆ ಕಾರ್ಡ್‌ ಪಡೆಯಹುದಾಗಿದೆ.
– ಡಾ| ಮುರುಳೀಧರ, ಜಿಲ್ಲಾ ಉಸ್ತುವಾರಿ ಅಧಿಕಾರಿ, ಎಬಿ-ಪಿಎಂಜೆಎವೈ-ಎಆರ್‌ಕೆ, ದಾವಣಗೆರೆ

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next