Advertisement

ಲಕ್ಷಾಂತರ ರೂ. ವೆಚ್ಚದ ಎಸ್‌ಐ ವಸತಿಗೃಹ ಅನಾಥ

12:49 AM Jun 26, 2020 | Team Udayavani |

ಪುತ್ತೂರು: ನಗರ ವ್ಯಾಪ್ತಿಯಲ್ಲಿನ ವಿವಿಧ ಠಾಣೆಗಳ ಎಸ್‌ಐಗಳಿಗೆ ವಾಸಕ್ಕೆಂದು 3 ವರ್ಷಗಳ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ ಬನ್ನೂರಿನಲ್ಲಿ ನಿರ್ಮಿಸಲಾದ ವಸತಿಗೃಹ ವಾಸ್ತವ್ಯ ಇಲ್ಲದ ಕಾರಣ ಅನಾಥ ಸ್ಥಿತಿಯಲ್ಲಿದೆ.ಬನ್ನೂರು ಬಲಮುರಿ ಗಣಪತಿ ದೇವಸ್ಥಾನ ಸನಿಹ ನಿರ್ಮಿಸಿದ ವಸತಿಗೃಹದಲ್ಲಿ ವಾಸ್ತವ್ಯಕ್ಕೆ ಎಸ್‌ಐಗಳು ಮನಸ್ಸು ಮಾಡುತ್ತಿಲ್ಲ. ಕುಟುಂಬದ ವಾಸಕ್ಕೆ ಪೂರಕ ಮೂಲ ಸೌಕರ್ಯ ಇಲ್ಲಿಲ್ಲ ಎನ್ನುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

Advertisement

ಮೂರು ಕಡೆ ವಸತಿಗೃಹ
ಸಾಮೆತ್ತಡ್ಕ, ಸಂಪ್ಯ ಹಾಗೂ ಬನ್ನೂರಿನಲ್ಲಿ ಒಟ್ಟು 15 ಕೋ.ರೂ. ಅಂದಾಜು ವೆಚ್ಚದಲ್ಲಿ ಪೊಲೀಸ್‌ ಸಿಬಂದಿ ಹಾಗೂ ಎಸ್‌ಐ ಕುಟುಂಬ ವಾಸಕ್ಕೆ ವಸತಿಗೃಹ ನಿರ್ಮಿಸಲಾಗಿತ್ತು. ಈಗಾಗಲೇ ಸಾಮೆತ್ತಡ್ಕ ಮತ್ತು ಸಂಪ್ಯ ವಸತಿಗೃಹಗಳಲ್ಲಿ ಪೊಲೀಸ್‌ ಸಿಬಂದಿ ವಾಸ್ತವ್ಯ ಹೂಡಿದ್ದಾರೆ.

ಬನ್ನೂರಿನಲ್ಲಿ ಪೊಲೀಸ್‌ ಇಲಾಖೆಗೆ ಸೇರಿದ 25 ಸೆಂಟ್ಸ್‌ ನಿವೇಶನದಲ್ಲಿ 850 ಚದರ ಅಡಿ ವಿಸ್ತೀರ್ಣದ ಕೆಳ ಮತ್ತು ಮೇಲಂತಸ್ತು ಹೊಂದಿರುವ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪೊಲೀಸ್‌ ಹೌಸಿಂಗ್‌ ಬೋರ್ಡ್‌ ನಿರ್ಮಿಸಿದ ಈ ಕಟ್ಟಡ ನಿರ್ಮಾಣದ ಒಂದು ವರ್ಷದ ಬಳಿಕ, 2018ರ ಸೆ. 20ಕ್ಕೆ ಪುತ್ತೂರು ಉಪವಿಭಾಗದ ಪೊಲೀಸ್‌ ಇಲಾಖೆಗೆ ಹಸ್ತಾಂತರ ಮಾಡಲಾಯಿತು. ವಿದ್ಯುತ್‌, ಕೊಳವೆ ಬಾವಿ ಮತ್ತಿತರ ಸೌಕರ್ಯ ಒದಗಿಸಲಾಗಿದೆ.

ಪುತ್ತೂರು ನಗರ ಠಾಣೆ, ಸಂಚಾರಿ ಠಾಣೆ, ಮಹಿಳಾ ಠಾಣೆಗಳಲ್ಲಿ 4 ಮಂದಿ ಎಸ್‌.ಐ.ಗಳು ಕರ್ತವ್ಯ ನಿರ್ವಹಿಸು ತ್ತಿದ್ದಾರೆ. ಸಬ್‌ಇನ್‌ಸ್ಪೆಕ್ಟರ್‌ ಹಾಗೂ ಅವರ ಕುಟುಂಬದ ವಾಸಕ್ಕೆ ಈ ವಸತಿಗೃಹ ನಿರ್ಮಿಸಲಾಗಿದೆ. ಆವರಣಗೋಡೆ ಇಲ್ಲದಿರುವುದರಿಂದ ಹಾಗೂ ಇಡೀ ಕುಟುಂಬ ವಾಸ ಮಾಡಲು ಎಲ್ಲ ವ್ಯವಸ್ಥೆಗಳು ಇಲ್ಲಿಲ್ಲ ಎಂಬ ಕಾರಣದಿಂದ ಪ್ರವೇಶಕ್ಕೆ ಎಸ್‌ಐಗಳು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

ಪಾಳು ಬಿದ್ದ ಸ್ಥಿತಿ
ಕಳೆದ ಮೂರು ವರ್ಷಗಳಿಂದ ಖಾಲಿ ಬಿದ್ದಿರುವ ಕಾರಣ ಕಟ್ಟಡ ಪಾಳು ಬಿದ್ದ ಸ್ಥಿತಿಗೆ ತಲುಪಿದೆ. ಬಾಗಿಲು ಭದ್ರವಾಗಿಲ್ಲ. ಒಳಭಾಗದಲ್ಲಿ ಸ್ವತ್ಛತೆ ಇಲ್ಲ. ಬೀದಿ ಸುತ್ತಾಡುವ ಪ್ರಾಣಿಗಳಿಗೆ ಆವಾಸ ತಾಣವಾಗಿ ಬದಲಾಗುತ್ತಿದೆ. ವಿದ್ಯುತ್‌ ಸಂಪರ್ಕ ಇರುವ ಕಾರಣ ಬಿಲ್‌ ಕೂಡ ಬರುತ್ತಿದೆ. ಕಟ್ಟಡ ಸೂಕ್ತ ರೀತಿಯಲ್ಲಿ ಬಳಕೆ ಆಗದಿದ್ದರೆ ಅದು ಅನ್ಯ ಚಟುವಟಿಕೆಯ ತಾಣವಾಗಿ ಕೂಡ ಬದಲಾಗುವ ಅಪಾಯ ಉಂಟಾಗಿದೆ.

Advertisement

 ಅಗತ್ಯ ಕ್ರಮ
ಬನ್ನೂರಿನ ಎಸ್‌ಐ ವಸತಿಗೃಹದ ಕುರಿತು ಸಂಬಂಧಿಸಿದವರ ಜತೆ ಮಾಹಿತಿ ಪಡೆದು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
 - ಸಂಜೀವ ಮಠಂದೂರು, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next