Advertisement

Students ; ಮುಂದಿನ ತಿಂಗಳಿಂದ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್; ಸಚಿವ ಮಧು ಬಂಗಾರಪ್ಪ

11:59 PM Jan 08, 2024 | Team Udayavani |

ಮಡಿಕೇರಿ: ಸರಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಮುಂದಿನ ತಿಂಗಳಿನಿಂದ ರಾಗಿ ಮಾಲ್ಟ್ ನೀಡಲು ಚಿಂತಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

Advertisement

ಪೊನ್ನಂಪೇಟೆ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಾಕಿ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು ಈಗಾಗಲೇ ವಾರದಲ್ಲಿ ಒಂದು ದಿನ ಮೊಟ್ಟೆ ವಿತರಿಸಲಾಗುತ್ತಿದ್ದು, ವಾರದಲ್ಲಿ ಎರಡು ದಿನ ಮೊಟ್ಟೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುತ್ತಿದೆ. 13 ಸಾವಿರ ಶಿಕ್ಷಕರ ನೇಮಕಾತಿಗೆ ಅಗತ್ಯ ಕ್ರಮ ವಹಿಸಲಾಗಿದೆ. 37 ಸಾವಿರ ಶಿಕ್ಷಕರನ್ನು ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸರಕಾರಿ ಶಾಲೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸರಕಾರ ಅಗತ್ಯ ಕೈಗೊಂಡಿದೆ. ಸರಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕ ಸೇರಿದಂತೆ ಮಧ್ಯಾಹ್ನದ ಬಿಸಿ ಊಟ, ಮೊಟ್ಟೆ ಹಾಗೂ ಹಾಲು ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ತಲುಪಿಸಲಾಗುತ್ತಿದೆ ಎಂದರು.

ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಹೊರೆಯಾಗದಂತೆ ತಪ್ಪಿಸು ವಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಕೊಡಗು ಜಿಲ್ಲೆಯಲ್ಲಿ ಶತಮಾನ ಪೂರೈಸಿರುವ ಶಾಲೆಗಳಿದ್ದು, ಅವುಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳು ನೆಲದಲ್ಲಿ ಕೂರಬಾರದು. ಶಾಲೆಗಳಿಗೆ ಡೆಸ್ಕ್, ಬೆಂಚ್‌ ಇತರೆ ಸಾಮಗ್ರಿಗಳನ್ನು ವಿತರಿಸಲಾಗುವುದು. ಹೊಸ ತಾಲೂಕುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇಮಕಾತಿ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳ ಕೊರತೆ ಇರುವುದರಿಂದ ನೇಮಕ ಮಾಡಿಲ್ಲ. ಮುಂದಿನ ದಿನಗಳಲ್ಲಿ ನೇಮಕಾತಿ ಮಾಡಲಾಗುವುದು ಎಂದು ತಿಳಿಸಿದರು.

Advertisement

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳ ಕುಂದುಕೊರತೆಗೆ ಸಂಬಂಧಿಸಿದಂತೆ ಸಚಿವರು ಅಹವಾಲು ಆಲಿಸಿದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ‌ ಎ.ಎಸ್‌. ಪೊನ್ನಣ್ಣ ಅವರು ಮಾತನಾಡಿ, ಹಾಕಿ ಕ್ರೀಡೆಯು ಕೊಡಗು ಜಿಲ್ಲೆಯ ಸಂಸ್ಕೃತಿಯ ಭಾಗವಾಗಿದೆ ಎಂದರು.

ಜಿಲ್ಲಾಧಿಕಾರಿ ವೆಂಕಟ್‌ ರಾಜಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಾದ ಎಂ. ಚಂದ್ರಕಾಂತ್‌, ತಹಶೀಲ್ದಾರ್‌ ಎಚ್‌.ಎನ್‌. ರಾಮಚಂದ್ರ, ಬಿಇಒ ಎಂ. ಪ್ರಕಾಶ್‌, ಡಾ| ಬಿ.ಸಿ.ದೊಡ್ಡೇಗೌಡ, ಎಸ್‌. ಭಾಗ್ಯಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next