ಹೊಸಕೋಟೆ: ತಾಲೂಕಿನಲ್ಲಿ ಆಗುತ್ತಿರುವ ಮಳೆ ಒಂದೆಡೆ ರೈತರಿಗೆ ವರದಾನವಾದರೆ, ಮತ್ತೂಂದೆಡೆ ರಾಗಿ ಬೆಳೆಗೆ ಹಾನಿಯುಂಟಾಗಿದೆ.
ತಾಲೂಕಿನಲ್ಲಿ ಒಟ್ಟು 21,004 ಎಕರೆ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದ್ದು, ರೈತರು ಎರಡು ಹಂತದಲ್ಲಿ ಬಿತ್ತನೆ ಮಾಡಿದ್ದಾರೆ. ಶೇ.50 ರಷ್ಟು ರೈತರು ಜೂನ್ ಜುಲೈ ಹಾಗೂ ಉಳಿದವರು ಜುಲೈ-ಆಗಸ್ಟ್‌ನಲ್ಲಿ ಬಿತ್ತನೆ ಮಾಡಿದ್ದಾರೆ. ರೈತರ ಆಸೆಗೆ ತಣ್ಣೀರು: ಇದೀಗ ಮಳೆ ಹೆಚ್ಚಾದ ಕಾರಣ ಪ್ರಥಮ ಹಂತದ ರೈತರ ಜಮೀನುಗಳಲ್ಲಿನ ಸುಮಾರು 2,700 ಎಕರೆಯಷ್ಟು ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ರಾಗಿ ಸಂಪೂರ್ಣವಾಗಿ ನೆಲಕಚ್ಚಿದೆ. ಇದರಿಂದಾಗಿ ಉತ್ತಮ ಫಸಲು ನಿರೀಕ್ಷಿಸಿದ್ದ ರೈತರ ಆಸೆಗೆ ತಣ್ಣೀರು ಎರೆಚಿದಂತಾಗಿದೆ. ಆದರೆ, ತಡವಾಗಿ ಬಿತ್ತನೆ ಮಾಡಿರುವ ಪ್ರದೇಶದಲ್ಲಿ ಇದೀಗ ತೆನೆ ಬಂದಿದ್ದು, ಬಲಿಯಲು ಮಳೆ ಸಹಕಾರಿಯಾಗಿದೆ.
ಉತ್ಪಾದನೆ ಕುಸಿತ: ತಾಲೂಕಿನ ಕೆಲವೆಡೆ ತಿಂಗಳ ಹಿಂದೆ ಬಿತ್ತನೆ ಮಾಡಿದ ತರಕಾರಿ, ಸೊಪ್ಪು ಮೊಳಕೆ ಬರುವಷ್ಟರಲ್ಲಿಯೇ ಮಳೆ ಬಂದಿರುವ ಕಾರಣ ಅತಿಯಾದ ತೇವಾಂಶದಿಂದಾಗಿ ಬೆಳೆಗೆ ಹಾನಿಯಾಗಿ ರೈತರಿಗೆ ನಷ್ಟ ಉಂಟಾಗಿದೆ. ಇದರಿಂದಾಗಿ ಉತ್ಪಾದನೆ ಕುಸಿತಗೊಂಡು ಬೇಡಿಕೆಗೆ ಅನುಗುಣವಾಗಿ ಸರಬರಾಜು ಆಗದ ಕಾರಣ ಹಾಗೂ ರೈತರು ನಷ್ಟ ಸರಿದೂಗಿಸಿಕೊಳ್ಳಲು ಬೆಲೆ ಹೆಚ್ಚಿಸಿದ್ದಾರೆ. ಇದರಿಂದ ಗ್ರಾಹಕರಿಗೂ ಹೊರೆಯಾಗಿದೆ. ಆಗಸ್ಟ್‌ನಲ್ಲಿ ಇಂತಹದ್ದೆ ಪರಿಸ್ಥಿತಿಯಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ 60 ರಿಂದ 80 ರೂ.ಗೆ ಮಾರಾಟವಾಗಿತ್ತು.
ಪ್ರಸ್ತುತ ಆಗುತ್ತಿರುವ ಮಳೆಯಿಂದಾಗಿ ತೇವಾಂಶ ವೃದ್ಧಿಗೊಂಡಿದ್ದು, ಇನ್ನೂ 2-3 ದಿನಗಳು ಮಳೆಯಾಗುವ ಸಂಭವವಿದ್ದು, ಕೆಲವು ತೋಟಗಾರಿಕೆ ಬೆಳೆಗಳಿಗೆ ಅನುಕೂಲವಾಗಲಿದೆ. ಮುಂದೆ ಆಗುವ ಮಳೆಯಿಂದ ನೀರು ಕೆರೆ ಹಾಗೂ ಕೊಳವೆ ಬಾವಿಗಳ ಅಂತರ್ಜಲ ಸುಧಾರಣೆಗೂ ಸಹಕಾರಿಯಾಗಲಿದೆ.
ಮಳೆಯಿಂದಾಗಿ ರಾಗಿ ಬೆಳೆ ರಕ್ಷಿಸಿಕೊಳ್ಳುವ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಜಮೀನುಗಳಲ್ಲಿ ನೀರು ನಿಲುಗಡೆಯಾಗದಂತೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಸೂಚಿಸಲಾಗುತ್ತಿದೆ. – ರೇಣುಕಾಪ್ರಸನ್ನ, ಕೃಷಿ ಅಧಿಕಾರಿ, ಹೊಸಕೋಟೆ