Advertisement

ಸಂತ್ರಸ್ತರತ್ತ ಸಹಸ್ರ ನೆರವಿನ ಹಸ್ತ

11:59 AM Aug 19, 2018 | Team Udayavani |

ಬೆಂಗಳೂರು: ಭಾರಿ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಹಾಗೂ ಕೇರಳ ಸಂತ್ರಸ್ತರಿಗೆ 3.28 ಕೋಟಿ ರೂ. ನೆರವು ನೀಡುವ ಜತೆಗೆ, ಸಾರ್ವಜನಿಕರಿಂದ ಪರಿಹಾರ ಸಾಮಗ್ರಿ ಸಂಗ್ರಹಿಸಲು ಪಾಲಿಕೆಯಿಂದ ಕೇಂದ್ರ ಒಂದನ್ನು ತೆರೆಯಲಾಗಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದ ಮೇಯರ್‌ ಆರ್‌.ಸಂಪತ್‌ರಾಜ್‌, ನೆರೆ ಸಂತ್ರಸ್ತರ ನೆರವಿಗಾಗಿ 198 ಪಾಲಿಕೆ ಸದಸ್ಯರ ಒಂದು ತಿಂಗಳ ಹಾಗೂ ಅಧಿಕಾರಿ ಮತ್ತು ನೌಕರರ ಒಂದು ದಿನದ ವೇತನದ ಒಟ್ಟು 1.28 ಕೋಟಿ ರೂ.ಗಳನ್ನು ಕೊಡಗು ನೆರೆ ಸಂತ್ರಸ್ತರಿಗೆ ನೀಡಲಾಗುವುದು. ಜತೆಗೆ ಕೊಡಗು ಹಾಗೂ ಕೇರಳಕ್ಕೆ ತಲಾ ಒಂದು ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. 

ಕೊಡಗಿನ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸುವ ಉದ್ದೇಶದಿಂದ ಪಾಲಿಕೆಯ ಕೇಂದ್ರ ಕಚೇರಿಯ ಡಾ.ರಾಜ್‌ಕುಮಾರ್‌ ಗಾಜಿನ ಭವನದಲ್ಲಿ ಪರಿಹಾರ ಸಾಮಗ್ರಿ ಸಂಗ್ರಹ ಕೇಂದ್ರ ತೆರೆಯಲಾಗಿದೆ. ಜತೆಗೆ ಪಾಲಿಕೆಯ ಎಲ್ಲ 198 ವಾರ್ಡ್‌ಗಳ ಕಚೇರಿಗಳಿಗೂ ಸಾರ್ವಜನಿಕರು ಸಾಮಗ್ರಿಗಳನ್ನು ತಲುಪಿಸಬಹುದಾಗಿದ್ದು, ತಮ್ಮ ಹೆಸರು ನೋಂದಾಯಿಸಿ ದೇಣಿಗೆ ನೀಡಬಹುದಾಗಿದೆ ಎಂದು ಹೇಳಿದರು.

ವೇತನ ಕಡಿತಕ್ಕೆ ಆಕ್ಷೇಪ!:ಕೊಡಗಿನ ನೆರೆ ಸಂತ್ರಸ್ತರಿಗೆ ತಮ್ಮ ಒಂದು ದಿನ ವೇತನ ಕಡಿತಗೊಳಿಸುವ ಕುರಿತು ಬಿಬಿಎಂಪಿ ಅಧಿಕಾರಿ, ನೌಕರರ ಸಂಘದ ಒಂದು ಬಣ ಪತ್ರಿಕಾಗೋಷ್ಠಿಯಲ್ಲೇ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು.

ವೇತನ ಕಡಿತದ ಕುರಿತು ತಮ್ಮೊಂದಿಗೆ ಚರ್ಚಿಸದೆ ಏಕಪಕ್ಷೀಯ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ ಎಂದು ಮಾಯಣ್ಣ ನೇತೃತ್ವದ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರೆ, ಅಮೃತ್‌ರಾಜ್‌ ನೇತೃತ್ವದ ಸಂಘದ ಸದಸ್ಯರು ಒಂದು ದಿನದ ವೇತನ ನೀಡಲು ಯಾರ ಅಭ್ಯಂತರವೂ ಇಲ್ಲವೆಂದರು. ಇದರಿಂದ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು.

Advertisement

ಈ ವೇಳೆ ಮಧ್ಯ ಪ್ರವೇಶಿಸಿದ ಮೇಯರ್‌, ಅಧಿಕಾರಿ, ನೌಕರರಿಗೆ ಇಷ್ಟವಿದ್ದರೆ ಒಂದು ದಿನದ ವೇತವನ್ನು ಸಂತ್ರಸ್ತರ ಪರಿಹಾರ ನಿಧಿಗೆ ನೀಡಬಹುದು. ಬಲವಂತವಾಗಿ ಯಾರ ವೇತನವನ್ನೂ ಕಡಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನೆರೆ ಸಂತ್ರಸ್ತರಿಗೆ ಸಾರ್ವಜನಿಕರು ಹಳೆಯ ಬಟ್ಟೆಗಳನ್ನು ಕಳುಹಿಸಬೇಡಿ. ಇದರಿಂದ ಅವರ ಮನಸ್ಸಿಗೆ ನೋವಾಗುತ್ತದೆ. ಗುಣಮಟ್ಟದ ಆಹಾರ ಪದಾರ್ಥ ಹಾಗೂ ಔಷಧಗಳನ್ನು ನೀಡಿ.
-ಪದ್ಮನಾಭ ರೆಡ್ಡಿ, ವಿಪಕ್ಷ ನಾಯಕ 

ಕಾರ್ಪೊರೇಟರ್‌ಗಳ ಒಂದು ತಿಂಗಳ ಗೌರವಧನ ಹಾಗೂ ಅಧಿಕಾರಿ, ನೌಕರರ ಒಂದು ದಿನದ ವೇತನ ಸೇರಿ 1.28 ಕೋಟಿ ಹಾಗೂ ಪಾಲಿಕೆಯಿಂದ 2 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು.
-ಎಂ.ಶಿವರಾಜು, ಆಡಳಿತ ಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next