ಬನಹಟ್ಟಿ: ಕೋವಿಡ್ 19 ವೈರಸ್ ತಡೆಗೆ ಸರ್ಕಾರದ ಲಾಕ್‌ಡೌನ್ ಆದೇಶದಿಂದ ಬನಹಟ್ಟಿ ಸಹಕಾರಿ ನೂಲಿನ ಗಿರಣಿ ನೇಕಾರರು ಸಂಕಷ್ಟ ಅನುಭವಿಸುವಂತಾಗಿದೆ.
ಸ್ಥಳೀಯ ನೂಲಿನ ಗಿರಣಿಯ ಅಂದಾಜು 300ಕ್ಕೂ ಹೆಚ್ಚು ಕಾರ್ಮಿಕರು ಸ್ಥಿತಿ ಅತಂತ್ರವಾಗಿದೆ. ನೂಲಿನ ಗಿರಣಿಯು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿರುವುದರಿಂದ ಅಲ್ಲಿರುವ ಕಾರ್ಮಿಕರು ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಎರಡು ಹೊತ್ತಿನಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.
ಸ್ಥಳೀಯ ನೇಕಾರರಿಗೆ ಮಾಲೀಕರು ಲಾಕ್‌ಡೌನ್ ಮುಗಿಯುವವರೆಗೆ ಸ್ವಲ್ಪ ಮಟ್ಟಿನ ಆರ್ಥಿಕ ಸಹಾಯಮಾಡಬಹುದು. ಕೆಎಚ್‌ಡಿಸಿ ನೇಕಾರರಿಗೆ ಸರ್ಕಾರ ಈಗಾಗಲೇ ಸ್ಥಳೀಯ ಶಾಸಕ ಸಿದ್ದು ಸವದಿ ಮತ್ತು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರ ಒತ್ತಾಯದ ಮೇರೆಗೆ ಕಚ್ಚಾ ನೂಲು ಮತು ವೇತನ ಮಂಜೂರಿ ಮಾಡಿದೆ.
ಈ ಹಿಂದೆ ವೇತನ ಹೆಚ್ಚಳಕ್ಕಾಗಿ ಕಾರ್ಮಿಕರು ಕೆಲವು ದಿನಗಳ ಕಾಲ ಕೆಲಸಕ್ಕೆ ಹೋಗಿರಲಿಲ್ಲ. ಆದರೆ ಈಗ ಕಾರ್ಮಿಕರ ವೇತನ ಹೆಚ್ಚಳ ಮಾಡಲಾಗಿತ್ತು. ಎಂದಿನಂತೆ ನೂಲು ಉತ್ಪಾದನೆ ಕಾರ್ಯ ಪ್ರಾರಂಭವಾಗಿ ಗಿರಣಿ ಸುಸ್ಥಿತಿಯಲ್ಲಿ ಮುಂದುವರಿದಿತ್ತು. ಇನ್ನೇನು ಕಾರ್ಮಿಕರು ಮತ್ತೆ ಸುಗಮ ಜೀವನ ಸಾಗಿಸಬಹುದು ಎನ್ನುವಷ್ಟರಲ್ಲಿ ಈಗ ಕೋವಿಡ್ -19ನಿಂದಾಗಿ ಇಲ್ಲಿಯ ಕಾರ್ಮಿಕರು ಮತ್ತೆ ಸಂಕಷ್ಟ ಎದುರಿಸುವಂತಾಗಿದೆ. ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ ಕೆ.ಆರ್.ಬುಧವಾರ ನೂಲಿನ ಗಿರಣಿಗೆ ಭೇಟಿ ನೀಡಿ ಪರಿಸ್ಥಿತಿ ಆಧ್ಯಯನ ಮಾಡಿದ್ದಾರೆ.
ದೇಶಾದ್ಯಂತ ಸಾರಿಗೆ ಸಂಪರ್ಕ ಕಡಿತಗೊಂಡಿದ್ದು ಮತ್ತು ಮಾರುಕಟ್ಟೆ ಸಂಪೂರ್ಣವಾಗಿ ಬಂದಾಗಿರುವುದರಿಂದ ಇಲ್ಲಿಯ ನೂಲು ಮಾರಾಟಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಯಾವುದೆ ಅವಕಾಶ ಇಲ್ಲದಂತಾಗಿದೆ. ಇನ್ನೂ ನೂಲಿನ ಗಿರಣಿಗೆ ಯಾರಿಂದಲೂ ಆರ್ಥಿಕ ಸಹಾಯ ಕೇಳಲು ಬರುತ್ತಿಲ್ಲ. ಇದರಿಂದಾಗಿ ನೂಲಿನ ಗಿರಣಿಯಕಾರ್ಮಿಕರಿಗೆ ಸದ್ಯ ಪರಿಸ್ಥಿತಿಯಲ್ಲಿ ಕೂಲಿ ಮತ್ತು ವೇತನ ನೀಡಲು ಸಾಧ್ಯವಿಲ್ಲದಂತಾಗಿದೆ. ಪೂರ್ತಿ ಆಗದೆ ಇದ್ದರೂ ಅರ್ಧದಷ್ಟಾದರೂ ಕೊಡಬೇಕು ಎಂದರೂ ಅದು ಕೂಡಾ ಸಾಧ್ಯವಾಗುತ್ತಿಲ್ಲ.
ನೂಲಿನ ಗಿರಣಿಯ ಕಾರ್ಮಿಕರಿಗೆ, ಸಿಬ್ಬಂದಿ ಮತ್ತು ಇನ್ನೀತರ ಕೆಲಸಗಾರರಿಗೆ ವೇತನ ಕೊಡಬೇಕಾದರೆ ಸರ್ಕಾರದ ಸಹಾಯ ನೆರವು ಅವಶ್ಯಕವಾಗಿದೆ. ಅಧಿಕಾರಿಗಳು, ಜನ ಪ್ರತಿನಿಧಿಗಳು ನೂಲಿನ ಗಿರಣಿಯ ಆರಂಭವಾಗುವವರೆಗೆ ಇಲ್ಲಿಯ ಕಾರ್ಮಿಕರಿಗೆ ಅವಶ್ಯಕ ವಸ್ತುಗಳ ಜತೆಗೆ ಒಂದಿಷ್ಟು ಆರ್ಥಿಕ ಸಹಾಯ ಮಾಡಬೇಕಾಗಿರುವುದು ಅಗತ್ಯವಾಗಿದೆ
. ಪ್ರಭಾಕರ ಕೆ.ಆರ್. ವ್ಯವಸ್ಥಾಪಕ ನಿರ್ದೇಶಕ ಬನಹಟ್ಟಿ ಸಹಕಾರಿ ನೂಲಿನ ಗಿರಣಿ ನಿ
-ಕಿರಣ ಶ್ರೀಶೈಲ ಆಳಗಿ