Advertisement

ಬರಗಾಲದಲ್ಲೂ ಕ್ಷೀರಕ್ರಾಂತಿ

03:09 PM May 10, 2019 | Suhan S |

ಕುಷ್ಟಗಿ: ಹೈನುಗಾರಿಕೆ ಬರಗಾಲದಲ್ಲೂ ರೈತರ ಕೈ ಹಿಡಿದಿದ್ದು, ಕುಷ್ಟಗಿ-ಯಲಬುರ್ಗಾ ತಾಲೂಕುಗಳ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಗ್ರಾಮೀಣ ಭಾಗದ ರೈತರಿಗೆ ಲಾಭದಾಯಕ ಹೈನುಗಾರಿಕೆಯ ಹಾದಿ ತೋರಿಸಿದೆ. ರೈತರು ಬರವನ್ನು ಮೆಟ್ಟಿ ನಿಂತಿದ್ದು, ಕ್ಷೀರಕ್ರಾಂತಿಗೆ ಮುನ್ನುಡಿಯಾಗಿದೆ.

Advertisement

ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ವ್ಯಾಪ್ತಿಯಲ್ಲಿರುವ ಜಿಲ್ಲೆಯ ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕುಗಳು ಬರಗಾಲದಲ್ಲಿಯೂ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಿಕೊಂಡಿವೆ. ಈ ಉಭಯ ತಾಲೂಕುಗಳಲ್ಲಿ ಕಳೆದ ವರ್ಷ ಏಪ್ರಿಲ್ 30ಕ್ಕೆ 21,060 ಲೀಟರ್‌ ಹಾಲು ಉತ್ಪಾದನೆಯಾಗಿದ್ದರೆ, ಪ್ರಸಕ್ತ ವರ್ಷ ಏಪ್ರಿಲ್ 30ರಂದು 23,300 ಲೀಟರ್‌ ಹಾಲು ಉತ್ಪಾದನೆಯಾಗಿದೆ. ಕಳೆದ ವರ್ಷಕ್ಕಿಂತ ಶೇ. 13ರಷ್ಟು ಹೆಚ್ಚಳವಾಗಿದ್ದು, ಬರಗಾಲದಲ್ಲೂ ಹಾಲಿನ ಉತ್ಪಾದನೆ ಹೆಚ್ಚಾಗಿದೆ.

ಕುಷ್ಟಗಿ ತಾಲೂಕಿನಲ್ಲಿ 58, ಯಲಬುರ್ಗಾ ತಾಲೂಕಿನಲ್ಲಿ 54 ಹಾಲು ಉತ್ಪಾದಕರ ಸಹಕಾರ ಸಂಘಗಳು ಸಕ್ರಿಯವಾಗಿವೆ. ಅಲ್ಲದೇ ಮೇ 23ರ ನಂತರ ಕುಷ್ಟಗಿ, ಯಲಬುರ್ಗಾ ತಾಲೂಕಿನಲ್ಲಿ ತಲಾ ಮೂರು ಸಂಘಗಳು ಕಾಯಾರಂಭಗೊಳಿಸಲಿದ್ದು, ಒಟ್ಟು 118 ಸಂಘಗಳಾಗಲಿವೆ. ಕುಷ್ಟಗಿಯಲ್ಲಿ 10 ಸಾವಿರ ಲೀಟರ್‌ ಸಂಗ್ರಹ ಸಾಮಾರ್ಥ್ಯದ ಹಾಲು ಶೀತಲೀಕರಣ ಘಟಕ, ತಾವರಗೇರಾದಲ್ಲಿ 3 ಸಾವಿರ ಲೀಟರ್‌ ಸಂಗ್ರಹ ಬಲ್ಕ ಮಿಲ್ಕ್ ಕೂಲರ್‌ (ಬಿಎಂಸಿ) ಹಾಗೂ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ 10 ಸಾವಿರ ಲೀಟರ್‌ ಸಾಮಾರ್ಥ್ಯದ ಹಾಲು ಶೀತಲೀಕರಣ ಘಟಕವಿದೆ. 3.5 ಫ್ಯಾಟ್, 8.5 ಎಸ್‌ಎನ್‌ಎಫ್‌ ಅಂಶವಿರುವ ಪ್ರತಿ ಲೀಟರ್‌ ಹಾಲಿಗೆ 22.50 ರೂ. ದರದಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ರೈತರು ಈ ಸಂಘಗಳಿಗೆ ಹಾಲು ಪೂರೈಸುತ್ತಿದ್ದಾರೆ. ಈ ರೈತರಿಗೆ ಕಳೆದ ಏಪ್ರಿಲ್ 1ರಿಂದ ಪ್ರೋತ್ಸಾಹಧನ 6 ರೂ.ಗೆ ಹೆಚ್ಚಿದ್ದು, ಕಳೆದ ಜನವರಿಯ ಪ್ರೋತ್ಸಾಹ ಧನ ಪಾವತಿಸಲಾಗಿದೆ. ಆಧಾರ್‌ ಲಿಂಕ್‌ ಇರುವ ಬ್ಯಾಂಕ್‌ ಖಾತೆಗೆ, ಪ್ರೋತ್ಸಾಹ ಧನ ಹಾಗೂ ಹಾಲಿನ ದರವನ್ನು ಆನ್‌ಲೈನ್‌ ಮೂಲಕ ಪಾವತಿಸುವ ವ್ಯವಸ್ಥೆಯಿದೆ ಎಂದು ವಿಸ್ತೀರ್ಣಾಧಿಕಾರಿ ಬಸವರಾಜ್‌ ಯರದೊಡ್ಡಿ ಮಾಹಿತಿ ನೀಡಿದರು.

ಪಶು ಆಹಾರ ದರ ಜಾಸ್ತಿ: ಬರಗಾಲದಲ್ಲೂ ಹಾಲು ಉತ್ಪಾದನೆಯಲ್ಲಿ ಸೈ ಎನಿಸಿಕೊಂಡಿದ್ದರೂ, ಪಶು ಅಹಾರ ಪ್ರತಿ ವರ್ಷ ಹೆಚ್ಚುತ್ತಿರುವುದು ಸರ್ಕಾರದ ಧೋರಣೆಗೆ ಹಾಲು ಉತ್ಪಾದಕರಲ್ಲಿ ಬೇಸರ ಮೂಡಿಸಿದೆ. ಸತತ ಬರಗಾಲ ಎದುರಿಸುವ ಈ ತಾಲೂಕುಗಳಲ್ಲಿ ಪಶು ಆಹಾರ ದರ ತಗ್ಗಿಸದೇ ಇರುವುದೇ ಈ ಬಾರಿ ಜನವರಿ, ಫೆಬ್ರವರಿ ತಿಂಗಳಲ್ಲಿ ರೈತರಿಗೆ ಹೆಚ್ಚಿಸಬೇಕಿದ್ದ ಹಾಲಿನ ದರವನ್ನು ಹೆಚ್ಚಿಸಲಾಗಿಲ್ಲ. ಕಳೆದ ವರ್ಷ ಪಶು ಆಹಾರ 890 ರೂ., ಬೈಪಾಸ್‌ 997 ಇತ್ತು. ಇದೀಗ ಪಶು ಅಹಾರ 50 ಕೆ.ಜಿ.ಗೆ 986 ಇದ್ದು, ಶೇ. 90ರಷ್ಟು ಪೌಷ್ಟಿಕಾಂಶವುಳ್ಳ ಬೈಪಾಸ್‌ ಪಶು ಆಹಾರ 1,109 ರೂ. ಇದೆ. ಸದ್ಯ ಶೈಲೇಜ್‌ ಬೇಲ್ (ರಸಮೇವು) ಬೇಡಿಕೆ ಇದ್ದು, ಇದನ್ನು ತೆಲಂಗಾಣದಿಂದ ಖರೀದಿಸಬೇಕಿದ್ದು, ಸಾಗಾಣಿಕೆ ವೆಚ್ಚ ಅಧಿಕವಾಗುತ್ತಿದೆ. ಸರ್ಕಾರ ಮನಸ್ಸು ಮಾಡಿದರೆ ಬರಗಾಲ ಎದುರಿಸುತ್ತಿರುವ ಜಿಲ್ಲೆಯಲ್ಲಿ ಶೈಲೇಜ್‌ ಬೇಲ್ಗಳನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪೂರೈಸಬಹುದಾಗಿದೆ. ಅಲ್ಲದೇ ಗೋಶಾಲೆಗಳಿಗೂ ಪೂರೈಸಬಹುದಾಗಿದೆ. ಬರಗಾಲದಲ್ಲೂ ಇಷ್ಟು ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗುತ್ತಿರುವುದು ರೈತಾಪಿ ವರ್ಗಕ್ಕೆ ಹೈನುಗಾರಿಕೆಯಲ್ಲಿ ವಿಶ್ವಾಸ ಮೂಡಿಸಿದೆ. ತಾಲೂಕು ಕೇಂದ್ರದಲ್ಲಿ ಎರಡು ದಶಕವಾದರೂ ಹಾಲು ಶೀತಲೀಕರಣ ಘಟಕಕ್ಕೆ ಸ್ವಂತ ಕಟ್ಟಡ ಇಲ್ಲ ಎಂಬ ಕೊರಗು ಹಾಗೆಯೇ ಇದೆ.

.ಮಂಜುನಾಥ ಮಹಾಲಿಂಗಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next