Advertisement

ಮಿಲ್ಖಾ ಸಿಂಗ್‌ ಮುಳ್ಳುಗಳ ನಡುವೆ ಅರಳಿದ ಹೂವು!

09:41 AM Apr 07, 2018 | Team Udayavani |

ಮಿಲ್ಖಾ ಸಿಂಗ್‌… ಈ ಹೆಸರು ಕೇಳಿದ ಕೂಡಲೇ ನೆನಪಾಗೋದು “ಭಾಗ್‌ ಮಿಲ್ಖಾ ಭಾಗ್‌’ ಚಿತ್ರದ ಹೆಸರು. ಶೀರ್ಷಿಕೆಯಲ್ಲಿರುವಂತೆ, ಓಟಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು ಮಿಲ್ಖಾ ಸಿಂಗ್‌. ಹೌದು, ಅವರ ಇಡೀ ಜೀವನ ಒಂದು ಮಹಾನ್‌ ಓಟ. ಪಾಕಿಸ್ತಾನದಲ್ಲಿನ ದಂಗೆಯಲ್ಲಿ ತಮ್ಮ ಕಣ್ಣ ಮುಂದೆಯೇ ತನ್ನ ಸಮುದಾಯದವರ ಮೇಲೆ ನಡೆದ ಹಳ್ಳಿಗಳಿಂದ ಭಯಭೀತರಾಗಿ ಜೀವ ಉಳಿಸಿಕೊಳ್ಳಲು ಅಲ್ಲಿಂದ ಶುರುವಾದ ಅವರ ಓಟ, 1958ರ ಕಾರ್ಡಿಫ್ ಕಾಮನ್‌ವೆಲ್ತ್‌ ಗೇಮ್ಸ…ನಲ್ಲಿ ಚಿನ್ನ ಗೆಲ್ಲುವವರೆಗೆ, ಆನಂತರ, ಏಷ್ಯನ್‌ ಗೇಮ್ಸ್‌ಗಳಲ್ಲಿ ಬಂಗಾರ ಗೆಲ್ಲುವವರೆಗೂ ಮುಂದುವರಿಯಿತು. ಅವರ ಈ ನಿರಂತರ ಓಟ ಈಗಷ್ಟೇ ಅಲ್ಲ, ಮುಂದಿನ ತಲೆಮಾರುಗಳಿಗೂ ಮಾದರಿಯಾಗಿದೆ. 

Advertisement

ಅದು, ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಕಾಲ. ಈಗ ಪಾಕಿಸ್ತಾನಕ್ಕೆ ಸೇರಿರುವ ಪಂಜಾಬ್‌ ಪ್ರಾಂತ್ಯದ ಗೋವಿಂದಪುರದಲ್ಲಿ ಅವರು ಜನಿಸಿದ್ದರು. ಆದರೆ, ವಿಭಜನೆಯ ಕಾಲಘಟ್ಟದಲ್ಲಿ ಅಲ್ಲಿದ್ದ ಮುಸ್ಲಿàಮೇತರ ಕುಟುಂಬಗಳ ಮೇಲೆ ದೌರ್ಜನ್ಯಗಳು ನಡೆಯಲಾರಂಭಿಸಿದವು. ಇದರಿಂದ ಭೀತಿಗೊಂಡ ಅವರ ಕುಟುಂಬ ಅಲ್ಲಿಂದ ಭಾರತಕ್ಕೆ ಪಲಾಯನ ಮಾಡಿತು. ನೇರವಾಗಿ ದೆಹಲಿಗೆ ಬಂದಿಳಿದ ಅವರ ಕುಟುಂಬ ಪುರಾನಾ ಖೀಲಾದಲ್ಲಿದ್ದ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆಯಿತು. ಒಂದು ಹೊತ್ತಿನ ಅನ್ನಕ್ಕೂ ಪರದಾಟ ನಡೆಸಿದ ಆ ಕುಟುಂಬದ ಪಾಲನೆಗಾಗಿ, ಅದೊಂದು ದಿನ ಡಕಾಯಿತನಾಗಬೇಕೆಂದು ನಿರ್ಧರಿಸಿದ್ದ ಮಿಲ್ಖಾ ಸಿಂಗ್‌ರ ಮನಸ್ಸು ಬದಲಾಯಿಸಿದ್ದು ಅವರ ಸಹೋದರ ಮಾಲ್ಖನ್‌.

ಸಹೋದರನ ಸಲಹೆ ಮೇರೆಗೆ ಮಿಲ್ಖಾ ಸೇನೆಗೆ ಸೇರಿದರು. ಅಲ್ಲಿಯೇ ಅವರಲ್ಲಿನ ಪ್ರತಿಭೆ ಪ್ರಕಟಗೊಳ್ಳಲು ಅವಕಾಶ ಸಿಕ್ಕಿದ್ದು. ವೇಗವಾಗಿ ಓಡುವ ಅವರ ಪ್ರತಿಭೆ ಅನಾವರಣಗೊಂಡ ಕೂಡಲೇ ಅವರಿಗೆ ಕ್ರೀಡಾಲೋಕದ ಹೆಬ್ಟಾಗಿಲು ತೆರೆದುಕೊಂಡಿತು. ಅಲ್ಲಿಂದ ಮುಂದಕ್ಕೆ ಮಿಲ್ಖಾ ಸಿಂಗ್‌ ಹಿಂತಿರುಗಿ ನೋಡಲಿಲ್ಲ. ಸತತ ಪ್ರಯತ್ನದಿಂದ ಅವರು ಹಂತ ಹಂತವಾಗಿ ತಮ್ಮ ಕ್ರೀಡಾ ಜೀವನದಲ್ಲಿ ಏರಿಕೆ ಕಂಡರು. ಅವರ ಪರಿಶ್ರಮಕ್ಕೆ ಬಂಗಾರದ ಮೆರುಗು ನೀಡಿದ್ದು ಕಾಮನ್‌ವೆಲ್ತ್‌ ಗೇಮ್ಸ್‌

1958ರಲ್ಲಿ ನಡೆದಿದ್ದ ಕಾರ್ಡಿಫ್ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 440 ಯಾರ್ಡ್ಸ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಅವರು, ಆ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಆದರೆ, ನೆನಪಿಡಿ… ಇಲ್ಲಿ ಅವರು ಗೆದ್ದ ಸ್ವರ್ಣ ಪದಕ ಅವರ ವೈಯಕ್ತಿಕ ಸಾಧನೆಯಷ್ಟೇ ಅಲ್ಲ. ಇಡೀ ಭಾರತವೇ ಹೆಮ್ಮೆ ಪಡುವಂಥ ಸಾಧನೆ. ಏಕೆಂದರೆ, ಅದು ಕಾಮನ್‌ವೆಲ್ತ್‌ ಕ್ರೀಡಾಕೂಟದ ಇತಿಹಾಸದಲ್ಲೇ  ಭಾರತ ಕ್ಕೊಲಿದ ಮೊದಲ ಚಿನ್ನದ ಪದಕ. ಇಲ್ಲಿಂದ ಅವರ ಕ್ರೀಡಾ ಜೀವನ ಮತ್ತಷ್ಟು ಉತ್ತುಂಗಕ್ಕೇರಿತು. ಕಾಮನ್‌ವೆಲ್ತ್‌ನಲ್ಲಿ ಚಿನ್ನ ಸಂಪಾದಿಸಿದ ಬಳಿಕ, ಅದೇ ವರ್ಷ ಟೋಕಿಯೋದಲ್ಲಿ ನಡೆದಿದ್ದ ಏಷ್ಯನ್‌ ಗೇಮ್ಸ್‌ನ 200 ಹಾಗೂ 400 ಮೀ. ಓಟದ ಸ್ಪರ್ಧೆಯಲ್ಲಿ, 1962ರ ಜಕಾರ್ತಾ ಏಷ್ಯನ್‌ ಗೇಮ್ಸ್‌ನ 400 ಮತ್ತು 4×400 ಮೀ. ರೇಸ್‌ನಲ್ಲಿಯೂ ಮಿಲ್ಖಾ ಚಿನ್ನ ಗೆದ್ದರು.

ಕೂದಲೆಳೆಯಲ್ಲಿ ಕೈತಪ್ಪಿದ ಒಲಿಂಪಿಕ್ಸ್‌ ಪದಕ
ಅವರ ಇಡೀ ಕ್ರೀಡಾ ಜೀವನದ ಬಹುದೊಡ್ಡ ನಿರಾಸೆಯೆಂದರೆ 1960ರ ರೋಮ್‌ ಒಲಿಂಪಿಕ್ಸ್‌ನ ಪದಕ ಸುತ್ತಿನ ರೇಸ್‌ನಲ್ಲಿ ನಾಲ್ಕನೇ ಸ್ಥಾನಗಳಿಸಿದ್ದು. ಏಕೆಂದರೆ, ಅವರು ಆ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಫೇವರಿಟ್‌ ಎನಿಸಿದ್ದರು. ಆದರೆ, ಅದು ನೆರವೇರಲಿಲ್ಲ. ಪರವಾಗಿಲ್ಲ, ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನದಲ್ಲೂ ಇಂಥ ದ್ದೊಂದಾದರೂ ನಿರಾಸೆ ಇದ್ದೇ ಇರುತ್ತದೆ. ಹಾಗೆ ನೋಡಿದರೆ, ರೋಮ್‌ ಒಲಿಂಪಿಕ್ಸ್‌ ನಲ್ಲಿನ ವೈಫ‌ಲ್ಯದ ಹೊರತಾಗಿಯೂ ಮಿಲ್ಖಾ ಸಿಂಗ್‌ ಸಾಧನೆ ಅವಿಸ್ಮರಣೀಯವಾಗಿದೆ.

Advertisement

 ಚೇತನ್‌.ಓ.ಆರ್‌

Advertisement

Udayavani is now on Telegram. Click here to join our channel and stay updated with the latest news.

Next