ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್ ಮುಲ್)ದಲ್ಲಿ 2021ರಲ್ಲಿ ನಡೆದಿದ್ದ ಹಾಲು-ನೀರು ಮಿಶ್ರೀತ ಹಗರಣ ಮತ್ತೂಮ್ಮೆ ಮುನ್ನಲೆಗೆ ಬಂದಿದ್ದು, ಕಾಂಗ್ರೆಸ್ ಸರ್ಕಾರ ಸಿಬಿಐ ತನಿಖೆಗೆ ವಹಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಹಾಲು ಸರಬರಾಜು ಮಾಡಲು ಲಾರಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಒಂದೇ ಟ್ಯಾಂಕರ್‌ನಲ್ಲಿ ಅರ್ಧ ಹಾಲು ಹಾಗೂ ಅರ್ಧ ನೀರು ತುಂಬಿಕೊಂಡು ಮನ್ ಮುಲ್ ಡೇರಿಗೆ ಹಾಕುವಾಗ ಹಾಲಿನ ಜೊತೆಗೆ ನೀರು ಬೆರೆಸುತ್ತಿದ್ದ ಪ್ರಕರಣ 2021ರ ಮೇ 27ರಂದು ಬೆಳಕಿಗೆ ಬಂದಿತ್ತು. ಆಗ ಇಡೀ ರಾಜ್ಯಾದ್ಯಂತ ಸುದ್ದಿಯಾಗಿದ್ದು, ಮನ್‌ಮುಲ್ ಹಗರಣದ ಕೇಂದ್ರ ಬಿಂದುವಾಗಿತ್ತು. ಆಗಿನ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದರು. ಜೆಡಿಎಸ್ ಆಡಳಿತ ಮಂಡಳಿ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೆ, ಕಾಂಗ್ರೆಸ್ ನಾಯಕರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯ ಬೆಂಬಲಿಗರೇ ಶಾಮೀಲಾಗಿದ್ದಾರೆ ಎಂಬ ಆರೋಪ ಮಾಡಿದ್ದರು.
ಈ ನಡುವೆ ಎನ್.ಚಲುವರಾಯಸ್ವಾಮಿ ಹಾಗೂ ಮನ್‌ಮುಲ್ ಮಾಜಿ ಅಧ್ಯಕ್ಷ ಜವರೇಗೌಡ ನಡುವಿನ ಮೊಬೈಲ್ ಸಂಭಾಷಣೆ ವೈರಲ್ ಆಗಿತ್ತು. ಸಂಭಾಷಣೆಯಲ್ಲಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ತಡೆಯೊಡ್ಡುತ್ತಿದ್ದಾರೆ ಎಂಬ ಆರೋಪವನ್ನು ಮಾಡಲಾಗಿತ್ತು.
ಜನರಿಗೆ ಮಾಹಿತಿ ತಿಳಿದಿಲ್ಲ: ಆರೋಪ-ಪ್ರತ್ಯಾರೋಪ ನಡುವೆ ಬಿಜೆಪಿ ಸರ್ಕಾರ 2021ರ ಜೂ.30ರಂದು ಸಿಐಡಿ ತನಿಖೆಗೆ ವಹಿಸಿ ಆದೇಶ ಹೊರಡಿಸಿತು. ನಂತರ ಸಿಐಡಿ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆಯ ಪ್ರಾರಂಭದಲ್ಲಿ ಹಗರಣದಲ್ಲಿ ಮನ್ ಮುಲ್ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ 7 ಮಂದಿ ಅಧಿಕಾರಿಗಳನ್ನು ಅಮಾನತು ಮಾಡಿ, ವ್ಯವಸ್ಥಾಪಕ ನಿರ್ದೇಶಕರನ್ನು ವರ್ಗಾವಣೆ ಮಾಡಲಾಗಿತ್ತು. ಅಲ್ಲದೆ, ಐದು ಮಂದಿ ಬಂಧಿಸಿದ್ದು, ಎಲ್ಲರೂ ಜಾಮೀನಿನ ಮೇಲೆ ಹೊರ ಬಂದಿದ್ದರು. ಅದಾದ ಬಳಿಕ ತನಿಖೆ ಯಾವ ಮಟ್ಟದಲ್ಲಿದೆ ಎಂಬುದು ಯಾವುದೇ ಮಾಹಿತಿ ಜನರಿಗೆ ತಿಳಿಯಲೇ ಇಲ್ಲ.
ಸಿಬಿಐ ತನಿಖೆ ಸಾಧ್ಯತೆ: ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಮನ್‌ಮುಲ್ ಹಾಲು-ನೀರು ಮಿಶ್ರೀತ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಸ್ತಾಪ ಮುಂದಿಟ್ಟಿದ್ದು, ಯಾವಾಗ ಬೇಕಾದರೂ ಸಿಬಿಐ ತನಿಖೆಗೆ ವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಸಿಬಿಐ ತನಿಖೆಗೆ ವಹಿಸುವ ಬಗ್ಗೆ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಸಿಬಿಐ ತನಿಖೆಗೆ ವಹಿಸುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಬಳಿ ಪ್ರಸ್ತಾಪ ಇಟ್ಟಿದ್ದು, ಮನ್‌ಮುಲ್ ನಿರ್ದೇಶಕರು ಸಹ ತನಿಖೆಗೆ ಸಹಕರಿಸುವ ಬಗ್ಗೆ ತಿಳಿಸಿದ್ದಾರೆ. ಆದ್ದರಿಂದ ಹಗರಣವನ್ನು ತನಿಖೆಗೆ ವಹಿಸಲಾಗುವುದು. ಹಗರಣ ಬೆಳಕಿಗೆ ಬಂದಾಗ ನಾವೇ ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದೆವು. ಸಿಬಿಐಗೆ ವಹಿಸುವ ಬಗ್ಗೆ ಎಲ್ಲ ಶಾಸಕರು ಸಿಎಂ ಜೊತೆಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಆಗಿನ ಬಿಜೆಪಿ ಸರ್ಕಾರ ಸಿಐಡಿ ತನಿಖೆಗೆ ವಹಿಸುವ ಮೂಲಕ ಪ್ರಕರಣ ಹಳ್ಳ ಹಿಡಿಯುವಂತೆ ಮಾಡಿತ್ತು. ಮೆಗಾಡೇರಿ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ: ಕಾಂಗ್ರೆಸ್ ಆಡಳಿತ ಸಂದರ್ಭದಲ್ಲಿ ಮೆಗಾಡೇರಿ ನಿರ್ಮಾಣ ಮಾಡುವ ಕಾಮಗಾರಿಯಲ್ಲಿ 72 ಕೋಟಿ ರೂ. ಅವ್ಯವಹಾರ ನಡೆದಿತ್ತು. ಆ ಪ್ರಕರಣದ ಬಗ್ಗೆಯೂ ತನಿಖೆ ನಡೆಸಲಿದೆಯಾ ಎಂಬ ಪ್ರಶ್ನೆಗಳು ಎದ್ದಿವೆ. ಮೆಗಾಡೇರಿ ನಿರ್ಮಾಣಕ್ಕಾಗಿ ರೈತರ ಪ್ರತೀ ಲೀಟರ್ ಹಾಲಿನಲ್ಲಿ ಹಣ ಕಡಿತ ಮಾಡಲಾಗಿತ್ತು. ಈ ಹಣದಲ್ಲಿಯೇ ಮೆಗಾಡೇರಿ ನಿರ್ಮಾಣಕ್ಕೆ ಮುಂದಾಗಿತ್ತು. ಕಾಮಗಾರಿಯಲ್ಲಿ ಅವ್ಯವಹಾರ ನಡೆಸಲಾಗಿತ್ತು. ಇದರ ಬಗ್ಗೆ ರೈತ ಹೋರಾಟಗಾರರು, ಹಾಲು ಉತ್ಪಾದಕರು ಧ್ವನಿ ಎತ್ತಿದ್ದರು. ಸರ್ಕಾರದ ತನಿಖೆಯಲ್ಲಿ ಅವ್ಯವಹಾರ ನಡೆಸಿದ್ದು, ಸಾಬೀತಾಗಿ ಆಡಳಿತ ಮಂಡಳಿಯನ್ನು ವಜಾ ಮಾಡಲಾಗಿತ್ತು. ಆದರೆ, ಅವ್ಯವಹಾರದ ಹಣವನ್ನು ಇದುವರೆಗೂ ತಪ್ಪಿತಸ್ಥರಿಂದ ವಸೂಲಿ ಮಾಡಿಲ್ಲ. ಅಲ್ಲದೆ, ತಪ್ಪಿತಸ್ಥರ ವಿರುದ್ಧವೂ ಯಾವುದೇ ಕ್ರಮ ಆಗಿಲ್ಲ.
ಇದೀಗ ಕಾಂಗ್ರೆಸ್ ಸರ್ಕಾರ ಹಾಲು-ನೀರು ಮಿಶ್ರೀತ ಹಗರಣದ ಜೊತೆಗೆ ಮೆಗಾಡೇರಿ ನಿರ್ಮಾಣ ಕಾಮಗಾರಿ ಅವ್ಯವಹಾರದ ಬಗ್ಗೆಯೂ ಕ್ರಮ ಕೈಗೊಳ್ಳಲಿದೆಯೇ ಕಾದು ನೋಡಬೇಕು.