ತಿಪಟೂರು: ತೀವ್ರ ಬರಗಾಲದ ಮಧ್ಯೆಯೂ ರೈತರು ಕಷ್ಟಪಟ್ಟು, ಪಶುಸಂಗೋಪನೆಯನ್ನೇ ಮುಖ್ಯ ಆದಾಯ ಕಸುಬನ್ನಾಗಿಸಿಕೊಂಡಿದ್ದಾರೆ. ಇದರಿಂದ ಬರುವ ಹಾಲನ್ನು ಡೇರಿಯವರು ಗುಣಮಟ್ಟದ ಶಂಕೆಗಳ ಜೊತೆ ವಿವಿಧ ಕಾರಣ ಹುಡುಕಿ ಹಾಲನ್ನು ತಿರಸ್ಕರಿಸುತ್ತಿದ್ದಾರೆ. ಇದರಿಂದ ಹಾಲು ಉತ್ಪಾದಕ ರೈತರು ದಿಕ್ಕು ತೋಚದೇ ಸಂಕಷ್ಟಕ್ಕೊಳಗಾಗಿದ್ದಾರೆ.
ಡೇರಿಯಿಂದ ರೈತರಿಗೆ ಅನ್ಯಾಯ: ಹಳ್ಳಿಗಳಲ್ಲಿ ಮನುಷ್ಯರಿಗೆ ಕುಡಿಯಲು ನೀರಿಲ್ಲದಿದ್ದರೂ ಬದುಕಿಗೆ ಆಸರೆಯಾಗಿರುವ ಹೈನುಗಾರಿಕೆಗೆ ಹಣ ಕೊಟ್ಟು ಮೇವು-ನೀರು ಖರೀದಿಸಿ, ಹಸುಗಳ ಪಾಲನೆ, ಪೋಷಣೆ ಮಾಡುತ್ತಿದ್ದಾರೆ ರೈತರು. ಅವುಗಳು ಕೊಡುವಷ್ಟು ಹಾಲನ್ನು ಡೇರಿಗೆ ಪೂರೈಸಲು ಹೋದರೆ, ಹಾಲಿನಲ್ಲಿ ಒಳ್ಳೆಯ ಜಿಡ್ಡಿನಾಂಶವಿಲ್ಲ, ಉತ್ತಮ ಗುಣಮಟ್ಟವಿಲ್ಲ ಎಂದು ಹೇಳಿ ತಿರಸ್ಕರಿಸುತ್ತಿದ್ದಾರೆ. ತಿರಸ್ಕರಿಸಿದ ಹಾಲನ್ನು ಅನ್ಯಮಾರ್ಗವಿಲ್ಲದೆ, ಖಾಸಗಿ ಡೇರಿಗಳನ್ನು ಹುಡುಕಿ ಹಾಲು ಮಾರಬೇಕಾಗಿದೆ. ಖಾಸಗಿಯವರು ಯಾವುದೇ ನೆಪ ಹೇಳದೆ ಹಾಲು ಖರೀದಿಸುತ್ತಿದ್ದು, ಉತ್ತಮ ಬೆಲೆಯನ್ನೂ ನೀಡುತ್ತಿದ್ದಾರೆ. ಸರ್ಕಾರಿ ಸಂಸ್ಥೆಯಾದ ನಂದಿನಿ ಡೇರಿ ಮಾತ್ರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂಬುದು ರೈತರ ಆಕ್ರೋಶವಾಗಿದೆ.
ಡೇರಿಯಿಂದ ಅವೈಜ್ಞಾನಿಕ ತೀರ್ಮಾನ: ನಂದಿನಿ ಡೇರಿಯ ಆಡಳಿತ ಮಂಡಳಿಯ ಇತ್ತೀಚಿನ ಕೆಲ ತೀರ್ಮಾನಗಳು ಪಶುಸಂಗೋಪನೆಯನ್ನೇ ನೆಚ್ಚಿ ಬದುಕುತ್ತಿರುವ ರೈತರಿಗೆ ನುಂಗಲಾರದ ತುಪ್ಪವಾಗಿದೆ. ಹಾಲಿನ ಗುಣಮಟ್ಟ ಕಡಿಮೆಯಾದರೆ ಸರ್ಕಾರ ಪ್ರತಿ ಲೀಟರ್‌ಗೆ ನೀಡುವ 5 ರೂ. ನೀಡುವುದಿಲ್ಲ ಎಂಬ ಅವೈಜ್ಞಾನಿಕ ತೀರ್ಮಾನಗಳು ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎಂಬಂತಾಗಿದೆ.
ಖಾಸಗಿ ಡೇರಿಯಲ್ಲಿ ಕಲಬೆರಕೆ: ಖಾಸಗಿ ಡೇರಿಗಳಲ್ಲಿ ರೈತರಿಂದ ಹಾಲು ಖರೀದಿ ಮಾಡುತ್ತಾರೆ. ಹಾಲಿಗೆ ಹಾಲಿನ ಪೌಡರ್ ಮಿಶ್ರಣ ಮಾಡಿ, ಕಲಬೆರಕೆ ಮಾಡುತ್ತಿರುವ ವಿಚಾರ ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ತಿಳಿದಿದೆ. ಆದರೂ ಸಹ ಸಾರ್ವಜನಿಕರ ಆರೋಗ್ಯದ ಮೇಲೆ ಆಗುತ್ತಿರುವ ದುಷ್ಪಾರಿಣಾಮ ತಡೆಗೆ ಯಾವುದೇ ಶಿಸ್ತು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಪ್ರಾಮಾಣಿಕ ರೈತನಿಗೆ ನಷ್ಟವಾಗಿದ್ದು, ರೈತನು ಜಾನುವಾರುಗಳಿಗೆ ಮೇವು ಕತ್ತರಿಸುವ ಯಂತ್ರಕ್ಕೆ ಮೇವು ಬದಲಿಗೆ ತಲೆ ಕೊಡುವ ಪರಿಸ್ಥಿತಿ ಎದುರಾಗಿದೆ. ಇದರ ವಿರುದ್ಧ ಜನಪ್ರತಿನಿಧಿಗಳು, ಪ್ರಜ್ಞಾವಂತ ಯುವಕರು, ರೈತರು ಧ್ವನಿ ಎತ್ತಬೇಕಾಗಿದೆ.
ಅಧಿಕಾರಿಗಳಿಗೆ ರೈತರ ಕಷ್ಟದ ಅರಿವಿಲ್ಲ: ಕರ್ನಾಟಕ ಸರ್ಕಾರದ ಅಧೀನಕ್ಕೆ ಒಳಪಟ್ಟಿರುವ ಎಲ್ಲಾ ಹಾಲು ಒಕ್ಕೂಟಗಳು ಕೋಟಿಕಟ್ಟಲೆ ಲಾಭಾಂಶದಲ್ಲಿದೆ. ಅಲ್ಲಿಗೆ ಆಯ್ಕೆಯಾಗಿರುವ ನಿರ್ದೇಶಕರು ಸರಿಯಾಗಿ ರೈತರಪರ ನಿಲ್ಲದೇ ತಮ್ಮ ಸ್ವಾರ್ಥ ಹಿತಾಸಕ್ತಿ ಮಾತ್ರ ಯೋಚಿಸುತ್ತಾರೆ. ಸಾಮಾನ್ಯ ರೈತನು ಹಾಕಿದ ಹಾಲಿನ ಲಾಭದಿಂದ ತಿಂಗಳಿಗೆ ಅರ್ಧ ಲಕ್ಷಕ್ಕೂ ಹೆಚ್ಚಿಗೆ ಸಂಬಳ ಪಡೆಯುತ್ತಿರುವ ಅಧಿಕಾರಿಗಳಿಗೆ ಹಾಲು ಉತ್ಪಾದಕರ ಕಷ್ಟನಷ್ಟಗಳ ಅರಿವೇ ಇಲ್ಲವಾಗಿದೆ. ಇಷ್ಟೇ ಅಲ್ಲದೆ ಒಕ್ಕೂಟದಿಂದ ಕೊಡುವ 50 ಕೆ.ಜಿ.ಯ ಪಶು ಆಹಾರಕ್ಕೆ 980 ರೂ., ದುಬಾರಿ ಬೆಲೆಯನ್ನು ನಿಗದಿ ಮಾಡಿ, ರೈತರಿಗೆ ಎಲ್ಲಾ ವಿಧಗಳಲ್ಲೂ ನಷ್ಟ ಮಾಡುತ್ತಿದ್ದಾರೆ. ಇದರಿಂದ ಇನ್ನು ಮುಂದೆ ರೈತರು ನಾವೆಲ್ಲಾ ಹೇಗಪ್ಪಾ ಪಶುಸಂಗೋಪನೆಯಲ್ಲಿ ಜೀವನ ಮಾಡುವುದು ಎಂದು ನಿಟ್ಟುಸಿರು ಬಿಡುತ್ತಿದ್ದಾರೆ.
● ಬಿ.ರಂಗಸ್ವಾಮಿ