ನೆಲಮಂಗಲ: ಹಾಲು ಉತ್ಪಾದಕರು ಸಹಕಾರ ಸಂಘಗಳಲ್ಲಿ ಉತ್ತಮ ಗುಣಮಟ್ಟದ ಹಾಲು ಶೇಖರಣೆಯಾಗಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಜಿ.ಆರ್. ಭಾಸ್ಕರ್ ಸಲಹೆ ನೀಡಿದರು. ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ನಿಯುತದಿಂದ ಆಯೋಜಿಸಲಾಗಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಹಾಲು ಗುಣಮಟ್ಟದ್ದಾಗಿದ್ದರೆ ಉತ್ಪನ್ನ ಖರೀದಿ: ಹಾಲು ಉತ್ಪಾದಕರು ಡೈರಿಗಳಿಗೆ ಹಾಕುವ ಹಾಲಿನ ಗುಣಮಟ್ಟ 3.5ಕ್ಕೂ ಹೆಚ್ಚು ಇರಬೇಕು. ಹಾಲಿನ ಗುಣಮಟ್ಟ ಉತ್ತಮವಾಗಿದ್ದರೆ ಮಾತ್ರ ಗ್ರಾಹಕರು ಹಾಲು ಹಾಗೂ ಹಾಲಿನ ಪದಾರ್ಥ ಖರೀದಿಸುತ್ತಾರೆ. ಉತ್ಪಾದಕರಿಗೆ ಉತ್ತಮ ಬೆಲೆ ಸಿಗುತ್ತದೆ. ಹಾಲು ಉತ್ಪಾದಕರು ಕೆಚ್ಚಲು ಬಾವು ಹಾಲು ಬಳಸಬಾರದು. ನಿಮ್ಮ ಮಕ್ಕಳಂತೆ ಸಮಾಜದಲ್ಲಿನ ಮಕ್ಕಳನ್ನು ಕಾಣಬೇಕು. ಆ ಮಕ್ಕಳಿಗೆ ವಿಷದ ಹಾಲು ಕುಡಿಸಲು ಮುಂದಾಗುವುದು ಬೇಡ. ಡೇರಿಗಳಲ್ಲಿ ಉತ್ತಮ ಹಾಗೂ ಶುದ್ಧ ಹಾಲು ಶೇಖರಿಸಬೇಕು ಎಂದರು.
ಜಿಪಂ ಸದಸ್ಯೆ ಪುಷ್ಪಾ ಸಂಪತ್ ಮಾತನಾಡಿ, ಮಹಿಳೆಯರು ಕಾಮಧೇನು ನಂಬಿ ಜೀವನದ ಯಶಸ್ಸಿನ ಹಾದಿಯಲ್ಲಿದ್ದಾರೆ. ಮಹಿಳೆಯರು ಮನೆಗೆ ಆಶ್ರಯವಾದಂತೆ ಮಹಿಳೆಯರಿಗೆ ಕಾಮಧೇನು ಆಶ್ರಯವಾಗಿದೆ. ಲಕ್ಷಾಂತರ ಕುಟುಂಬಗಳಿಗೆ ಜೀವನಾಧಾರವಾಗಿದೆ. ಮಹದೇವಪುರದ ಡೇರಿ ಯಶಸ್ವಿಯಾಗಿ ಸಾಗಿದ್ದು, ರೈತರ ಜೀವನದ ಸಂಜೀನಿಯಾಗಿರುವುದು ಸಂತೋಷದ ವಿಷಯ ಎಂದರು.
2.11 ಕೋಟಿ ಮೊತ್ತದ ವ್ಯವಹಾರ: ಮಹದೇವಪುರ ಹಾಲು ಉತ್ಪಾದಕರ ಸಹಕಾರ ಸಂಘ 2018-19ನೇ ಸಾಲಿನಲ್ಲಿ 2.11ಕೋಟಿ ಹಾಲು ಖರೀದಿಸಿದೆ. 8.5 ಲಕ್ಷ ಲಾಭ ಸಂಗ್ರಹಿಸಿದೆ. ತಾಲೂಕಿನಲ್ಲಿ ಹಾಲು ಶೇಖರಿಸುವ 2ನೇ ಹಾಲು ಒಕ್ಕೂಟವಾಗಿದೆ ಎಂದು ಕಾರ್ಯದರ್ಶಿ ಚಂದ್ರಶೇಖರ್ ತಿಳಿಸಿದರು.
ವಿಮೆ ಹಣ ನೀಡಲು ಮನವಿ: ರೈತರ ಹಸುಗಳು ಮರಣ ಹೊಂದಿ ವರ್ಷ ಕಳೆದರೂ ವಿಮೆ ಹಣ ಬಂದಿಲ್ಲ. ಇತ್ತೀಚಿಗೆ ಹೆಚ್ಚು ವಿಮೆಯ ಹಣ ಪಡೆಯುತಿದ್ದಾರೆ. ಉತ್ತಮ ಔಷಧ ಸರಬರಾಜು ಹಾಗೂ ಸಮಯಕ್ಕೆ ಸರಿಯಾಗಿ ವೈದ್ಯರು ಸೇವೆ ನೀಡಬೇಕು ಎಂದು ಹಾಲು ಉತ್ಪಾದಕರು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಭಾಸ್ಕರ್‌ಗೆ ಮನವಿ ಸಲ್ಲಿಸಿದರು.
ಯಂಟಗಾನಹಳ್ಳಿ ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಚಿಕ್ಕಣ್ಣ, ಉಪಾಧ್ಯಕ್ಷ ಚಿಕ್ಕಣ್ಣಸ್ವಾಮಿ, ಬೆಂಗಳೂರು ಹಾಲು ಒಕ್ಕೂಟದ ನೆಲಮಂಗಲ ಶಿಬಿರ ಉಪವ್ಯವಸ್ಥಾಪಕ ಎ.ಆರ್. ಗಣರಾಜು, ವಿಸ್ತರಣಾಧಿಕಾರಿ ಮರೀಗೌಡ, ವಕೀಲ ಸಂಘದ ಅಧ್ಯಕ್ಷ ಸುರೇಶ್, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷೆ ಹೊನ್ನಮ್ಮ, ಉಪಾಧ್ಯಕ್ಷ ನಂಜೇಗೌಡ ಇದ್ದರು.