ಕೋಲಾರ: ಅವಿಭಜಿತ ಜಿಲ್ಲೆಯ ಜೀವನಾಡಿಯಾಗಿರುವ ಹೈನೋದ್ಯಮ ಅವಲಂಬಿಸಿರುವವರಿಗೆ ಒಕ್ಕೂಟ ಸಿಹಿ ಸುದ್ದಿ ನೀಡುತ್ತಿದ್ದು, ರೈತರಿಂದ ಖರೀದಿಸುವ ಹಾಲಿನ ದರ ಲೀಟರ್‌ಗೆ 2 ರೂ. ಹೆಚ್ಚಿಸಲಾಗಿದ್ದು, ಈ ತಿಂಗಳಿಂದಲೇ ಜಾರಿಗೆ ಬಂದಿದೆ ಎಂದು ಕೋಚಿಮುಲ್ ಅಧ್ಯಕ್ಷ ಹಾಗೂ ಶಾಸಕ ಕೆವೈ. ನಂಜೇಗೌಡ ತಿಳಿಸಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇದೇ ತಿಂಗಳು ನೂತನ ಪರಿಷ್ಕೃತ ದರ ಜಾರಿಗೆ ಬರುತ್ತದೆ. ರೈತರು ಹಾಲಿನ ಉದ್ಪಾದನೆ ಹೆಚ್ಚಿಸಬೇಕು ಎಂಬ ಉದ್ದೇಶದಿಂದ ದರ ಪರಿಸ್ಕೃತಗೊಳಿಸಲಾಗಿದೆ ಎಂದು ಹೇಳಿದರು.
ಮನಸ್ಸು ಗೆಲ್ಲುವ ತೀರ್ಮಾನ: ಜಿಲ್ಲೆಯಲ್ಲಿ ಹಾಲು ಕಡಿಮೆ ಅಗಿರುವುದು ದುರಾದೃಷ್ಟಕರ ಸಂಗತಿ. ಹೀಗಾಗಿ ಉತ್ಪಾದಕರಿಗೆ ಹಾಲು ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಎರಡು ತಿಂಗಳು ಕಾಲ ಅಧಿಕಾರಿಗಳೊಂದಿಗೆ ಸರ್ವೆ ನಡೆಸಿ ಉತ್ಪಾದಕರ ಮನಸ್ಸು ಗೆಲ್ಲುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಷೇರುದಾರರಿಗೆ ಮಾತ್ರ ಮೇವಿನ ಬೀಜ: ಮೇವಿನ ಬೀಜಜಿಲ್ಲೆಯಲ್ಲಿ ಹಸಿರು ಮೇವಿನ ಕೊರತೆ ನೀಗಿಸಲು ಉಚಿತವಾಗಿ ಮೇವಿನ ಬೀಜ ವಿತರಣೆ ಮಾಡಲಾಗುವುದು. ಜತೆಗೆ ಒಂದು ಎಕರೆಗೆ 3 ಸಾವಿರ ಸಹಾಯ ಧನ ನೀಡಲಾಗುವುದು. ಮೇವು ಬೀಜ ಪಡೆದು ಕೊಳ್ಳುವವರು ಕಡ್ಡಾಯವಾಗಿ ಸಂಘದ ಶೇರುದಾರ ನಾಗಿರಬೇಕು ಎಂದು ಹೇಳಿದರು.
ಹಳೇ ಮಾನದಂಡ ಪಾಲನೆ: ಹಾಲಿನ ಗುಣಮಟ್ಟದ ಶೇಖರಣೆಯನ್ನು ಹೆಚ್ಚಿಸಲು ಉತ್ತೇಜಿಸುವ ಸಲು ವಾಗಿ ಉತ್ಪಾದಕರಿಗೆ 26 ರೂ.ಅನ್ನು ಶೇ.3.5 ಫ್ಯಾಟ್ ಆಧಾರದ ಮೇರೆಗೆ ಪಾವತಿಸಲಾಗುತ್ತಿದ್ದು, ಈಗಲೂ ಅದೇ ಮಾನದಂಡಗಳನ್ನು ಪಾಲಿಸಲಾಗುತ್ತಿದೆ ಎಂದು ವಿವರಿಸಿದರು. ಹಿಂದೆ ಜಿಲ್ಲೆಯಲ್ಲಿ ನಡೆದ ಹಸಿವು ಮೇವು ಅಂದೋಲನ ಇಡೀ ರಾಜ್ಯಕ್ಕೆ ಮಾದರಿಯಾಗಿತ್ತು. ಅದೇ ರೀತಿ ಹಾಲು ಉತ್ಪಾದನೆಯಲ್ಲೂ ದ್ವಿತೀಯ ಸ್ಥಾನದಲ್ಲಿತ್ತು. ಒಕ್ಕೂಟದ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಹಾಲು ಉತ್ಪಾದನೆ ಮಾಡಲು ಆಸಕ್ತಿಯುಳ್ಳ ಅರ್ಹ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಿ ಒಕ್ಕೂಟದ ಸಹಭಾಗಿತ್ವದಲ್ಲಿ ಡಿಸಿಸಿ ಬ್ಯಾಂಕ್ ಮೂಲಕ ಕಾಯಕ ಯೋಜನೆಯಡಿ ಶೂನ್ಯ ಬಡ್ಡಿ ದರದಲ್ಲಿ 75 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಮಿಶ್ರತಳಿ ಹಸು ಖರೀದಿಸಲು ಸಾಲ ನೀಡುವ ಒಕ್ಕೂಟ ಮುಂದಾಗಿದೆ ಎಂದು ಹೇಳಿದರು.
ತಾತ್ಕಾಲಿಕ ತಡೆ: ಒಕ್ಕೂಟದಲ್ಲಿ ಹಿಂದೆ ಪ್ರತಿ ದಿನ 11.50 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿತ್ತು. ಪ್ರಸ್ತುತ ಹಾಲು ಶೇಖರಣೆ ಕಡಿಮೆಯಾಗಿರುವ ಕಾರಣ ಸಿಬ್ಬಂದಿಯ ವೆಚ್ಚವನ್ನು ಕಡಿಮೆ ಮಾಡಲು ಪ್ರೋರೇಟಾ ಆಧಾರದಲ್ಲಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದರು.
ಒಕ್ಕೂಟದ ನಿರ್ದೇಶಕರಾದ ವಿ.ಮಂಜುನಾಥರೆಡ್ಡಿ, ಕಾಂತರಾಜ್, ಅಶ್ವಥರೆಡ್ಡಿ, ಡಿ.ವಿ.ಹರೀಶ್, ಹನುಮೇಶ್, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ವಿ.ತಿಪ್ಪಾರೆಡ್ಡಿ ಹಾಜರಿದ್ದರು.