ಮಂಗಳೂರು: ರಾಜ್ಯದಲ್ಲಿ ಹಾಲಿನ ಉತ್ಪಾದನೆ ಪ್ರತಿನಿತ್ಯ 8ರಿಂದ 10 ಲಕ್ಷ ಲೀ. ಕುಸಿತ ಕಂಡಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವ್ಯಾಪ್ತಿಯನ್ನೊಳಗೊಂಡ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವ್ಯಾಪ್ತಿಯಲ್ಲಿ ನಿತ್ಯ ಸುಮಾರು 60 ಸಾವಿರ ಲೀ. ಹಾಲು ಕೊರತೆ ಉಂಟಾಗಿದೆ.
ಒಕ್ಕೂಟ ವ್ಯಾಪ್ತಿಯಲ್ಲಿ ಕಳೆದ ವರ್ಷ ಜನವರಿಯಲ್ಲಿ ಪ್ರತೀ ದಿನ ಅಂದಾಜು 5.20 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದ್ದರೆ, ಈಗ ಸಂಗ್ರಹವಾಗುತ್ತಿರುವುದು ಅಂದಾಜು 4.60 ಲಕ್ಷ ಲೀ. ಮಾತ್ರ.
ಹಾಲಿಗೆ ಬೇಡಿಕೆ ಇರುವ ಕಾರಣ ಕೊರತೆ ನೀಗಿಸುವ ನಿಟ್ಟಿನಲ್ಲಿ ಮಂಡ್ಯ, ಹಾಸನ ಘಟಕದಿಂದ ಹಾಲು ತರಿಸಲಾಗುತ್ತಿದೆ. ಅಲ್ಲಿಯೂ ಹಾಲು ಉತ್ಪಾದನೆ ಕುಸಿತದಿಂದಾಗಿ ಕರಾವಳಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. ಅಲ್ಲಿಂದ ಹಾಲು ತರುವ ಟ್ಯಾಂಕರ್- ಸಾಗಾಟ ವೆಚ್ಚ, ಸಂಸ್ಕರಣ ವೆಚ್ಚವೂ ದ.ಕ. ಒಕ್ಕೂಟಕ್ಕೆ ಹೊರೆಯಾಗುತ್ತಿದೆ.
ಕೊರತೆ ಯಾಕೆ?
ಋತುಮಾನ ವ್ಯತ್ಯಾಸ ಹಾಗೂ ಅನಿಯಮಿತ ಮಳೆಯಿಂದ ಹಾಲು ಉತ್ಪಾದನೆ ಸಹಜವಾಗಿ ಕಡಿಮೆಯಾಗುತ್ತದೆ. ಈ ಬಾರಿ ಚರ್ಮಗಂಟು ರೋಗ ಬಹುಪ್ರಮಾಣದಲ್ಲಿ ವ್ಯಾಪಿಸಿ ಹಾಲು ಉತ್ಪಾದನೆಗೆ ಬಹುದೊಡ್ಡ ಹೊಡೆತ ನೀಡಿದೆ. ಹೈನುಗಾರರಿಗೆ ಸರಕಾರದಿಂದ ಸಿಗುವ ಪ್ರೋತ್ಸಾಹಧನ ಕಡಿಮೆ ಹಾಗೂ ಪಶು ಆಹಾರಗಳ ಬೆಲೆ ಗಗನಮುಖೀ ಯಾದ ಕಾರಣ ಹೈನುಗಾರಿಕೆಯಿಂದ ಕೆಲವರು ವಿಮುಖರಾಗುತ್ತಿದ್ದಾರೆ ಎಂಬ ಅಭಿಪ್ರಾಯವೂ ಇದೆ.
ದನ ಸಾಕುವುದು ಸವಾಲು !
ಕೊರೊನಾ ಕಾರಣದಿಂದ ನಗರ ಪ್ರದೇಶದಲ್ಲಿ ಉದ್ಯೋಗ ಮಾಡು ತ್ತಿದ್ದವರು ಗ್ರಾಮೀಣ ಭಾಗಕ್ಕೆ ಬಂದು ಹೈನುಗಾರಿಕೆಯಲ್ಲಿ ತೊಡ ಗಿಸಿ ಕೊಂಡರು. ಹೀಗಾಗಿ ಏಕಾಏಕಿ ಹಾಲಿನ ಪೂರೈಕೆ ರಾಜ್ಯದಲ್ಲಿ 1 ಲಕ್ಷ ಲೀಟರ್ ಏರಿಕೆಯಾಯಿತು. ಕೊರೊನಾ ಬಳಿಕ ಗ್ರಾಮೀಣ ಭಾಗ ದಲ್ಲಿದ್ದ ಯುವ ಸಮುದಾಯ ನಗರ ಸೇರಿದರು. ಆಗ ಮನೆಯಲ್ಲಿದ್ದ ಹಿರಿಯ ನಾಗರಿಕರಿಗೆ ದನ ಸಾಕು
ವುದು ಸವಾಲಾಗಿ, ಮಾರಾಟ ಮಾಡಿದರು. ಇದು ಕೂಡ ಹಾಲಿನ ಕೊರತೆಗೆ ಕಾರಣ ಎನ್ನಲಾಗುತ್ತಿದೆ.
Related Articles
“ಬೇಸಗೆ ಬರುವಾಗ ಹಾಲು ಉತ್ಪಾದನೆ ಸಹಜವಾಗಿಯೇ ಕಡಿಮೆ ಇರುತ್ತದೆ. ಮಳೆಗಾಲ ಬರುವವರೆಗೆ ಈ ಸಮಸ್ಯೆ. ಆ ಬಳಿಕ ಎಲ್ಲವೂ ಸರಿಯಾಗಲಿದೆ’ ಎಂಬುದು ಹಾಲು ಒಕ್ಕೂಟದ ಅಧಿಕಾರಿಗಳ ಅಭಿಪ್ರಾಯ. ಆದರೆ “ಹಾಲು ಉತ್ಪಾದಕರಿಗೆ ಸರಕಾರ ನೆರವು ನೀಡುವ ಮೂಲಕ ಹೈನುಗಾರರ ಕೈಹಿಡಿಯ ಬೇಕು; ಹಾಗಿದ್ದಲ್ಲಿ ಹಾಲು ಉತ್ಪಾದ ನೆಯೂ ಏರಿಕೆ ಕಾಣ ಬಹುದು’ ಎಂಬುದು ಕೆಲವು ಹೈನುಗಾರರ ಅಭಿಪ್ರಾಯ.
“ಸಮೃದ್ಧಿ’ ಹಾಲು ಮಾರಾಟಕ್ಕೆ ಹೊಡೆತ
ದ.ಕ. ಹಾಲು ಒಕ್ಕೂಟದಲ್ಲಿ ನಿತ್ಯ ಸುಮಾರು 20 ಸಾವಿರ ಲೀ. “ಸಮೃದ್ಧಿ’ ಹಾಲು ಮಾರಾಟವಾಗುತ್ತಿತ್ತು. ಐಸ್‌ಕ್ರೀಂ ಮಳಿಗೆ ಸಹಿತ ವಿವಿಧ ಕಡೆಗಳಿಗೆ ಇದು ಉಪಯೋಗವಾಗುತ್ತಿತ್ತು. ಆದರೆ ತುಪ್ಪ, ಬೆಣ್ಣೆ ತಯಾರಿಸಲು ಹಾಲಿನ ಕೊರತೆ ಎದುರಾದ ಕಾರಣ ಸಮೃದ್ಧಿ ಹಾಲು ಮಾರಾಟವನ್ನೇ ಸದ್ಯ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.
ಹಾಲಿನ “ಪುಡಿ’ಗೆ ಹಾಲಿಲ್ಲ !
ಉತ್ಪಾದನೆ ಆದ ಹಾಲಿನಲ್ಲಿ ಉಳಿಕೆ ಹಾಲನ್ನು ಸಾಮಾನ್ಯವಾಗಿ ಹಾಲಿನ ಪುಡಿ ಮಾಡಿ ದಾಸ್ತಾನು ಮಾಡಲಾಗುತ್ತದೆ. ಕೊರೊನಾ ಸಂದರ್ಭ ಹಾಲಿನ ಪುಡಿ ಭರಪೂರ ಉತ್ಪಾದನೆ ಆಗುತ್ತಿತ್ತು. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ.
1.05 ರೂ. ಪ್ರೋತ್ಸಾಹ ಧನಕ್ಕೆ ಕತ್ತರಿ!
ಹಾಲಿನ ಕೊರತೆಯಿಂದ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ರೈತರಿಗೆ ನೀಡಲಾಗುವ ವಿಶೇಷ ಪ್ರೋತ್ಸಾಹಧನದಲ್ಲಿ 1.05 ರೂ. ಹಿಂಪಡೆಯುವ ಮಹತ್ವದ ತೀರ್ಮಾನವನ್ನು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಕೈಗೊಂಡಿದೆ. ಪ್ರತೀ ಲೀ. ಹಾಲಿಗೆ 2.05 ರೂ. ವಿಶೇಷ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಇದರಲ್ಲಿ 1.05 ರೂ ಹಿಂಪಡೆಯಲಾಗಿದೆ.
ಎರಡೂ ಜಿಲ್ಲೆಯಲ್ಲಿ ಹಾಲಿನ ಬೇಡಿಕೆ ಅಧಿಕವಿದೆ. ಆದರೆ ಉತ್ಪಾದನೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸರಬರಾಜು ಮಾಡುವಲ್ಲಿ ಸಮಸ್ಯೆ ಆಗುತ್ತಿದೆ. ಸದ್ಯ ಮಂಡ್ಯ, ಹಾಸನದಿಂದ ಹಾಲು ತಂದು ಇಲ್ಲಿ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಅದು ವೆಚ್ಚ ದುಬಾರಿ. ಹೀಗಾಗಿ ಎರಡೂ ಜಿಲ್ಲೆಯಲ್ಲಿ ಹೈನುಗಾರರು ಹಾಲು ಉತ್ಪಾದನೆ ನೆಲೆಯಲ್ಲಿ ವಿಶೇಷ ಆದ್ಯತೆ ನೀಡಬೇಕಾಗಿದೆ. ಇದಕ್ಕಾಗಿ ಬ್ಯಾಂಕ್ ಅಥವಾ ಇತರ ಮೂಲಗಳಿಂದ ನೆರವು ಪಡೆದು ದನ ಸಾಕಾಣಿಕೆ ಮಾಡಿ ಹಾಲು ಉತ್ಪಾದನೆಯತ್ತ ಹೆಚ್ಚಿನ ಒತ್ತು ನೀಡಲು ಅವಕಾಶವಿದೆ.
– ಸುಚರಿತ ಶೆಟ್ಟಿ , ಅಧ್ಯಕ್ಷರು, ದ.ಕ. ಸಹಕಾರಿ ಹಾಲು ಒಕ್ಕೂಟ