ಉಡುಪಿ : ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹಾಲು ಉತ್ಪಾದನೆಗೆ ಸಂಬಂಧಿಸಿ 2022ರ ಜೂನ್-ಜುಲೈ ತಿಂಗಳವರೆಗೆ ಗರಿಷ್ಠ 5.60 ಲಕ್ಷ ಲೀಟರ್ ಹಾಲಿನ ಸಂಗ್ರಹವಿದ್ದು, ಕಳೆದ ಎರಡು, ಮೂರು ತಿಂಗಳಿಂದ ಈ ಪ್ರಮಾಣ 80 ಸಾವಿರದಿಂದ 1 ಲಕ್ಷ ಲೀ. ವರೆಗೆ ಕಡಿಮೆಯಾಗಿದೆ. ಇದರಿಂದ ಗರಿಷ್ಠ 5.60 ಲಕ್ಷ ಲೀ.ರಿಂದ 4 ಲಕ್ಷ ಲೀ. ಗೆ ಉತ್ಪಾದನೆ ಪ್ರಮಾಣ ಇಳಿಕೆಯಾಗಿದೆ. ಇದಕ್ಕೆ ಬೈಹುಲ್ಲಿನ ಅಲಭ್ಯ, ಖರ್ಚು ವೆಚ್ಚಗಳು ದುಬಾರಿ, ದನಗಳ ಸಾಕಣೆ ಪ್ರಮಾಣ ಕಡಿಮೆಯಾಗಿರುವುದು ಕಾರಣ ಎಂದು ಸಹಕಾರ ಭಾರತಿ ಹಾಲು ಪ್ರಕೋಷ್ಠ ರಾಜ್ಯ ಸಂಚಾಲಕ ಸಾಣೂರು ನರಸಿಂಹ ಕಾಮತ್ ತಿಳಿಸಿದ್ದಾರೆ.
ಈ ಸಮಸ್ಯೆಯನ್ನು ಪರಿಹರಿಸಲು ಹೈನುಗಾರರಿಂದ ಖರೀದಿಸುವ ಹಾಲಿನ ದರವನ್ನು ಕನಿಷ್ಠ 10 ರೂ.ಗಳಿಗೆ ಏರಿಸುವಂತೆ ಹೈನುಗಾರರು ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ಇದರಿಂದ ಹೈನುಗಾರಿಕೆ ಚೇತರಿಕೆಯಾಗಿ ಹಾಲಿನ ಉತ್ಪಾದನೆಯಲ್ಲಿ ಮತ್ತೆ ಏರಿಕೆಯಾಗಬಹುದು ಎಂಬ ಆಶಾವಾದವಿದೆ.
ಕಳೆದ 2017ರಲ್ಲಿ ಸರಕಾರ ಪ್ರೋತ್ಸಾಹಧನ ನೀಡಿತ್ತು. ಮೂರು ವರ್ಷಗಳಿಂದ ಖರೀದಿ ದರವನ್ನು ಏರಿಕೆ ಮಾಡಿಲ್ಲ. ಗ್ರಾಹಕರಿಗೆ ಹೊರೆಯಾಗದಂತೆ ಪ್ರೋತ್ಸಾಹಧನ ನೀಡಬೇಕು ಎಂದು ಹೈನುಗಾರರು ಹೇಳುತ್ತಿದ್ದಾರೆ. ಪ್ರಸ್ತುತ ಸರಕಾರ ಮತ್ತು ದ.ಕ. ಹಾಲು ಒಕ್ಕೂಟದ ಪ್ರೋತ್ಸಾಹಧನ ಒಟ್ಟು ಸೇರಿ ಒಂದು ಲೀ. ಹಾಲಿಗೆ 36.50 ರೂ. ಸಿಗುತ್ತದೆ. ಒಂದು ಲೀ.ಗೆ ಕನಿಷ್ಠ ಉತ್ಪಾದನ ವೆಚ್ಚ 45 ರೂ. ವರೆಗೆ ತಗಲುತ್ತಿದೆ. ಈ ಕಾರಣಕ್ಕಾಗಿ ಹೈನುಗಾರರು ಪ್ರೋತ್ಸಾಹಧನ ಹೆಚ್ಚಿಸಲು ಒತ್ತಾಯಿಸುತ್ತಿದ್ದಾರೆ.
ಕಳೆದ ಎರಡು ತಿಂಗಳಿಂದ ಹಾಲು ಉತ್ಪಾದನೆ ಪ್ರಮಾಣ ಇಳಿಕೆಯಾಗುತ್ತಿದೆ. ಹಾಲಿನ ಉತ್ಪಾದನೆಗೆ ಸಂಬಂಧಿಸಿ ರೈತರಿಗೆ ಪ್ರತೀ ಲೀ.ಗೆ ಸೂಕ್ತವಾದ ದರ ಸಿಗುತ್ತಿಲ್ಲ, ಖರ್ಚುವೆಚ್ಚಗಳು ಅಧಿಕವಾಗಿರುವುದರಿಂದ ಕೆಲವರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಹಾಲಿನ ಪ್ರೋತ್ಸಾಹಧನವನ್ನು 5ರಿಂದ ಗರಿಷ್ಠ 10 ರೂ.ಗಳವರೆಗೆ ಹೆಚ್ಚಿಸಲು ಕ್ರಮ ವಹಿಸಬೇಕು.
– ಸಾಣೂರು ನರಸಿಂಹ ಕಾಮತ್, ರಾಜ್ಯ ಸಂಚಾಲಕ, ಸಹಕಾರ ಭಾರತಿ ಹಾಲು ಪ್ರಕೋಷ್ಠ.
ಇದನ್ನೂ ಓದಿ : ಇಂದು ಸೂರ್ಯಗ್ರಹಣ : ದೇಗುಲಗಳಲ್ಲಿ ಪೂಜಾ ಸಮಯ ಬದಲಾವಣೆ