Advertisement

ಕೆಎಂಎಫ್ ಹಾಲಿನ ದರ ಹೆಚ್ಚಳ? ಜ.17ರಂದು ಆಡಳಿತ ಮಂಡಳಿ ಸಭೆ

10:36 AM Jan 09, 2020 | sudhir |

– ಎಲ್ಲಾ 14 ಒಕ್ಕೂಟಗಳಿಂದಲೂ ಬೆಲೆ ಹೆಚ್ಚಳಕ್ಕೆ ಮನವಿ
– ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಿರುವ ಕೆಎಂಎಫ್

Advertisement

ಮಂಗಳೂರು: ಎಲ್ಲವೂ ಅಂದುಕೊಂಡಂತಾದರೆ ಸದ್ಯದಲ್ಲೇ ಹಾಲಿನ ದರ ಜೇಬು ಸುಡಲಿದೆ.

ದಕ್ಷಿಣ ಕನ್ನಡ ಹಾಲು ಉತ್ಪಾದಕ ಸಂಘಗಳ ಒಕ್ಕೂಟ ಸಹಿತ ರಾಜ್ಯದ 14 ಒಕ್ಕೂಟಗಳು ಹಾಲಿನ ದರ ಹೆಚ್ಚಳ ಮಾಡುವಂತೆ ಕೆಎಂಎಫ್ಗೆ ಮನವಿ ಸಲ್ಲಿಸಿವೆ. ಇದೇ 17ರಂದು ಕೆಎಂಎಫ್ ನಿರ್ದೇಶಕರ ಸಭೆ ನಡೆಯಲಿದ್ದು, ಇದರಲ್ಲಿ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.

ಹೈನುಗಾರರ ಉತ್ಪಾದನಾ ವೆಚ್ಚ ಮತ್ತು ಒಕ್ಕೂಟಗಳ ನಿರ್ವಹಣ ವೆಚ್ಚ ಹೆಚ್ಚಾಗುತ್ತಿರುವುದರಿಂದ ನಂದಿನಿ ಹಾಲಿನ ದರ ಏರಿಕೆ ಮಾಡಬೇಕು ಎಂಬುದು ಒಕ್ಕೂಟಗಳ ಬೇಡಿಕೆ. ಹೀಗಾಗಿ, ಜ.17ರ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡು ರಾಜ್ಯ ಸರಕಾರಕ್ಕೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಲಿದೆ. ಇದಕ್ಕೆ ಸರಕಾರ ಒಪ್ಪಿದಲ್ಲಿ ಹಾಲಿನ ದರ ಹೆಚ್ಚಳವಾಗುವುದು ಖಾತ್ರಿ. ರಾಜ್ಯದಲ್ಲಿ ಮೂರು ವರ್ಷಗಳ ಹಿಂದೆ ಹಾಲಿನ ದರವನ್ನು 2 ರೂ. ಏರಿಸಲಾಗಿತ್ತು. ಈಗಲೂ ಇಷ್ಟೇ ಏರಿಕೆ ಮಾಡುವಂತೆ ಕೆಎಂಎಫ್‌ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆಯಿದೆ.

ಒಕ್ಕೂಟಗಳ ವಾದವೇನು?
ಹಾಲಿನ ಮಾರಾಟ ದರ ಏರದೆ 3 ವರ್ಷ ಆಗಿದೆ. ನಿರ್ವಹಣ ವೆಚ್ಚ ಏರಿಕೆ ಆಗುತ್ತಲೇ ಇದೆ. ಡೀಸೆಲ್‌-ಪೆಟ್ರೋಲ್‌ ದರವೂ ಹೆಚ್ಚುತ್ತಿರುವುದರಿಂದ ಸಾಗಣೆ ವೆಚ್ಚವೂ ಏರುತ್ತಿರುವುದು ಹಾಲು ಉತ್ಪಾದಕ ಸಂಘಗಳಿಗೆ ಹೊರೆಯಾಗುತ್ತಿದೆ. ಸಿಬಂದಿಯ ಸಂಬಳ ಸಹಿತ ವಿವಿಧ ವೆಚ್ಚಗಳಲ್ಲೂ ಏರಿಕೆಯಾಗಿದ್ದು, ಇದನ್ನು ಹೊಂದಾಣಿಕೆ ಮಾಡಲು ಒಕ್ಕೂಟಗಳು ಸಮಸ್ಯೆ ಅನುಭವಿಸುತ್ತಿವೆ. ಅಷ್ಟೇ ಅಲ್ಲ, ನೆರೆಯ ರಾಜ್ಯಗಳಲ್ಲಿ ಹಾಲಿನ ಮಾರಾಟ ದರ ಹೆಚ್ಚು ಇರುವುದರತ್ತಲೂ ಒಕ್ಕೂಟಗಳು ಕೆಎಂಎಫ್‌ ಗಮನ ಸೆಳೆದಿವೆ.

Advertisement

ರೈತರಿಗೆ ಲಾಭ
ರೈತರಿಂದ ಹಾಲು ಖರೀದಿ ದರ ಏರಿಸದೆ ಸಾಕಷ್ಟು ಸಮಯವಾಗಿದ್ದು, ಏರಿಸುವಂತೆ ಬೇಡಿಕೆ ಸಲ್ಲಿಸುತ್ತಾ ಬಂದಿದ್ದಾರೆ. ಮೇವು, ಹಿಂಡಿ ಸಹಿತ ವಿವಿಧ ವಸ್ತುಗಳ ದರ ಜಾಸ್ತಿಯಾಗುತ್ತಲೇ ಇರುವುದರಿಂದ ಹಾಲಿನ ಖರೀದಿ ದರ ಏರಿಕೆ ಮಾಡುವಂತೆ ನಿರಂತರ ಒತ್ತಡವೂ ಇದೆ.

ಕೆಎಂಎಫ್‌ ವಿವರ
ಹಾಲು ಸಹಕಾರಿ ಸಂಘಗಳು: 16,380
ಒಟ್ಟು ಸದಸ್ಯರು: 25.20 ಲಕ್ಷ
ದೈನಂದಿನ ಹಾಲು ಸಂಗ್ರಹ: 77.22 ಲಕ್ಷ ಲೀ.
ದೈನಂದಿನ ಹಾಲು ಮಾರಾಟ: 36.77 ಲಕ್ಷ ಲೀ.

ಖಾಸಗಿಯವರು ಇತ್ತೀಚೆಗೆ ದರ ಏರಿಕೆ ಮಾಡಿದ್ದಾರೆ. ಹೀಗಾಗಿ ನಮ್ಮಲ್ಲಿ ದರ ಏರಿಕೆ ಮಾಡುವ ಬಗ್ಗೆ ಹಾಲು ಉತ್ಪಾದಕ ಸಂಘಗಳಿಂದ ಬೇಡಿಕೆ ಬಂದಿದೆ. ಜ.17ಕ್ಕೆ ಕೆಎಂಎಫ್‌ ನಿರ್ದೇಶಕರ ಮಂಡಳಿ ಸಭೆ ನಡೆಯಲಿದ್ದು, ಅಂದು ಈ ಕುರಿತು ಚರ್ಚೆ ನಡೆಸಲಿದ್ದೇವೆ.
– ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷರು

ಹಾಲು ಖರೀದಿ ದರ ಏರಿಕೆ ಮಾಡದೆ 3 ವರ್ಷ ಕಳೆದಿವೆ. ಹೈನುಗಾರರ ಹಿತರಕ್ಷಣೆ ಮತ್ತು ಉತ್ಪಾದನೆಯಲ್ಲಿ ಏರಿಕೆ ದಾಖಲಿಸುವುದಕ್ಕಾಗಿ ಹಾಲಿನ ಖರೀದಿ ದರ ಏರಿಕೆ ಮಾಡುವ ಆವಶ್ಯಕತೆಯಿದೆ. ಈ ಸಂಬಂಧ ಹಾಲಿನ ಮಾರಾಟ ದರ ಏರಿಕೆ ಮಾಡಬೇಕು ಎಂದು ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಕೆಎಂಎಫ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ರವಿರಾಜ್‌ ಹೆಗ್ಡೆ, ಅಧ್ಯಕ್ಷರು, ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ

  • ದಿನೇಶ್‌ ಇರಾ
Advertisement

Udayavani is now on Telegram. Click here to join our channel and stay updated with the latest news.

Next