Advertisement

ಹಾಲಿನ ದರ ಏರಿಸದಿದ್ದರೆ 23ರಂದು ಕೆಎಂಎಫ್‌ಗೆ ಮುತ್ತಿಗೆ

04:45 PM Mar 12, 2022 | Kavyashree |

ಶಿವಮೊಗ್ಗ: ಹಾಲು ಒಕ್ಕೂಟಗಳು ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತೀ ಲೀಟರ್‌ಗೆ ಕನಿಷ್ಟ 30 ರೂ. ಗೆ ಏರಿಸದಿದ್ದರೆ ಮಾ.23 ರಂದು ಕೆಎಂಎಫ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕರ್ನಾಟಕ ಹಾಲು ಉತ್ಪಾದಕರ ವೇದಿಕೆ ರಾಜ್ಯ ಅಧ್ಯಕ್ಷ ನಾರಾಯಣ ಗೌಡ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಈಗಾಗಲೇ ರೈತರಿಂದ ಖರೀದಿ ಮಾಡುವ ಪ್ರತಿ ಲೀಟರ್‌ ಹಾಲಿಗೆ 2.50 ರೂ. ಏರಿಕೆ ಮಾಡಿರುವುದಾಗಿ ಘೋಷಿಸಲಾಗಿದೆ. ಇದು ಉತ್ಪಾದಕರಿಗೆ ಯಾವುದಕ್ಕೂ ಸಾಕಾಗುತ್ತಿಲ್ಲ. ಒಕ್ಕೂಟಗಳು ಲಾಭ ಮಾಡಿಕೊಳ್ಳುವುದರ ಜತೆಗೆ ದುಂದು ವೆಚ್ಚ ಮಾಡುತ್ತಿವೆ. ಇದರಿಂದಾಗಿ ರೈತರಿಗೆ ಹೆಚ್ಚಿನ ಬೆಲೆ ನೀಡದೆ ವಂಚಿಸಲಾಗುತ್ತಿದೆ ಎಂದು ದೂರಿದರು.

ಕೊರೊನಾ ನೆಪ ಹೇಳಿ ಹಾಲು ಮಾರಾಟವಾಗುತ್ತಿಲ್ಲವೆಂದು ಖರೀದಿ ದರವನ್ನು ಕಡಿಮೆ ಮಾಡಲಾಗಿತ್ತು. ಆದರೆ ಉತ್ಪಾದಕರು ಈ ಸಂಬಂಧ ಒಕ್ಕೂಟಗಳ ಮೇಲೆ ಯಾವುದೇ ಒತ್ತಡ ಹೇರಿರಲಿಲ್ಲ. ನಷ್ಟ ಸಹಿಸಿಕೊಂಡು ಹಾಲು ಪೂರೈಸುತ್ತಿದ್ದರು. ಆದರೆ ಈಗ ಹಾಲಿಗೆ ಹೆಚ್ಚಿನ ಬೇಡಿಕೆ ಇದೆ. ಹಾಲಿನ ಉಪ ಉತ್ಪನ್ನಗಳಿಗೂ ಬೇಡಿಕೆ ಇದ್ದರೂ ಅದನ್ನು ಪರಿಗಣಿಸದೆ ರೈತರಿಗೆ ಕಡಿಮೆ ಬೆಲೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಉತ್ಪಾದಕರಿಂದ ಖರೀದಿಸುವ ಹಾಲಿಗೆ ವೈಜ್ಞಾನಿಕ ಹಾಗೂ ಏಕರೂಪದ ದರ ರಾಜ್ಯಾದ್ಯಂತ ನಿಗದಿ ಮಾಡಬೇಕು. ಆಹಾರ ಸುರಕ್ಷತಾ ಮಾನದಂಡ ಕಾಯ್ದೆ ಅನ್ವಯ ಹಾಲು ಖರೀದಿಯ ಕನಿಷ್ಠ ಗುಣಮಟ್ಟ ಕಾಯ್ದೆ ಅನ್ವಯ ತಕ್ಷಣ ಜಾರಿಗೊಳಿಸಿ 2017 ರಿಂದ ರಾಜ್ಯದ ಹಾಲು ಉತ್ಪಾದಕರಿಗೆ ಆಗಿರುವ ನಷ್ಟವನ್ನು ನೀಡುವಂತೆ ಆಗ್ರಹಿಸಿದರು.

ಜಿಡ್ಡಿನಾಂಶ ಹಾಗೂ ಎಸ್‌ಎನ್‌ಎಫ್‌ ಆಧಾರದ ಮೇಲೆ ಉತ್ಪಾದಕರಿಗೆ ದರ ನೀಡುವ ವಿಧಾನವನ್ನು ಕೂಡಲೇ ಜಾರಿಗೊಳಿಸಬೇಕು. ಪಶು ಆಹಾರವನ್ನು ಶೇ.50 ರ ರಿಯಾಯಿತಿಯಲ್ಲಿ ಪೂರೈಸಬೇಕು. ಹಾಲು ಒಕ್ಕೂಟಗಳಲ್ಲಿ ನೇಮಕ ಮಾಡಿಕೊಳ್ಳುವಾಗ ಹಾಲು ಉತ್ಪಾದಕರ ಮಕ್ಕಳಿಗೆ ಶೇ. 50 ರಷ್ಟು ಸ್ಥಾನ ನೀಡುವಂತೆ ಒತ್ತಾಯಿಸಿದರು.

Advertisement

ಒಕ್ಕೂಟಗಳಲ್ಲಿ ಅನವಶ್ಯಕವಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದನ್ನು ನಿಯಂತ್ರಿಸಬೇಕು. ಗುತ್ತಿಗೆ ಕಾರ್ಮಿಕರನ್ನು ಕಡಿಮೆ ಮಾಡಬೇಕು. ಸಂಘಗಳ ಸಿಬ್ಬಂದಿಗೆ ಪಿಎಫ್‌, ಗ್ರಾಜ್ಯುಟಿ, ನಿವೃತ್ತಿ ವೇತನ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ 14 ಹಾಲು ಒಕ್ಕೂಟಗಳಿದ್ದು, ಇವುಗಲ್ಲಿ 9 ಒಕ್ಕೂಟಗಳು ನಷ್ಟದಲ್ಲಿರುವುದಾಗಿ ತೋರಿಸಲಾಗಿದೆ. ಉಳಿದವು ಮಾತ್ರ ಲಾಭದಲ್ಲಿವೆ ಎಂದು ಹೇಳಲಾಗಿದೆ. ಎಲ್ಲಾ ಒಕ್ಕೂಟಗಳು ಮಾರ್ಚ್‌ ತಿಂಗಳಲ್ಲಿ ಮಾತ್ರ ಲಾಭದಲ್ಲಿವೆ ಎಂದು ತೋರಿಸಿ ಸರ್ಕಾರದಿಂದ ಬರುವ ಲಾಭ ಪಡೆಯಲು ಯತ್ನಿಸುತ್ತಿವೆ ಎಂದರು.

ಒಂದು ಲೀಟರ್‌ ಹಾಲು ಉತ್ಪಾದನೆ ಮಾಡಲು 30 ರಿಂದ 40 ರೂ. ವೆಚ್ಚವಾಗುತ್ತದೆ. ಇದನ್ನು ಇದುವರೆಗೂ 22 ರೂ. ಗೆ ಮಾರಾಟ ಮಾಡಲಾಗುತಿತ್ತು. ಈಗ ಒಕ್ಕೂಟಗಳು ಕೇವಲ 2.50 ರೂ. ಮಾತ್ರ ಹೆಚ್ಚಳ ಮಾಡಿವೆ. ಇದು ತೀರಾ ಕಡಿಮೆಯಾಗಿರುವುದರಿಂದ ಕೂಡಲೇ ಪ್ರತೀ ಲೀಟರ್‌ಗೆ 30 ರೂ. ಹೆಚ್ಚಳ ಮಾಡಿ ಖರೀದಿಸುವಂತೆ ಆಗ್ರಹಿಸಿದರು.

ಎಚ್‌.ಎಲ್‌. ಷಡಾಕ್ಷರಿ, ಜೈರಾಮ್‌ ಗೋಂದಿ, ಲೋಕೇಶ್‌ ಜಿ. ಕಲ್ಲುಕೊಪ್ಪ, ಶ್ರೀನಿವಾಸ್‌, ಗಜೇಂದ್ರ, ವೆಂಕಟೇಶ್‌, ಟಿ. ರಾಜಣ್ಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next