ಸುಳ್ಯ: ಮಕ್ಕಳಿಗೆ ಒದಗಿಸಲಾಗುವ “ಕ್ಷೀರಭಾಗ್ಯ’ ಯೋಜನೆಯ ಹಾಲಿನ ಪುಡಿ ಪ್ಯಾಕೆಟ್‌ಗಳು ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಬೇಂಗಮಲೆ ಪ್ರದೇಶದಲ್ಲಿ ತ್ಯಾಜ್ಯವಾಗಿ ಪತ್ತೆಯಾಗಿವೆ.
ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯ ಲಾಗಿದೆ ಎಂದು ಬಂದ ದೂರಿನನ್ವಯ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ಯಾಮ್‌ಪ್ರಸಾದ್ ಅವರು ಸ್ಥಳ ಪರಿಶೀಲನೆ ನಡೆಸಿದಾಗ “ಕ್ಷೀರಭಾಗ್ಯ’ ಯೋಜನೆಯಡಿ ಮಕ್ಕಳಿಗೆ ಉಚಿತವಾಗಿ ವಿತರಿಸಬೇಕಾದ ಹಾಲಿನ ಪುಡಿ ಪ್ಯಾಕೆಟ್‌ಗಳು ಅವು ಎಂದು ತಿಳಿದು ಬಂತು.
ಹಾಲಿನ ಪುಡಿ ಪ್ಯಾಕೆಟ್‌ಗಳಿಂದ ಹೊರಚೆಲ್ಲಿದ ಸ್ಥಿತಿಯಲ್ಲಿತ್ತು. ಇವುಗಳು ಇಲ್ಲಿಗೆ ಹೇಗೆ ಬಂದವು ಎಂಬುದು ತಿಳಿದುಬಂದಿಲ್ಲ.
ಬೇಂಗಮಲೆ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆಯುವ ಪ್ರಕರಣಗಳಲ್ಲಿ ಹಲವರನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಕಾರ್ಯವನ್ನು ಐವರ್ನಾಡು ಗ್ರಾ. ಪಂ. ವತಿಯಿಂದ ಮಾಡಲಾಗುತ್ತಿದ್ದರೂ ತ್ಯಾಜ್ಯ ಎಸೆಯುವವರು ತಮ್ಮ ಕೃತ್ಯವನ್ನು ಮುಂದುವರಿಸುತ್ತಿದ್ದು, ಗ್ರಾ.ಪಂ.ಗೆ ಇದು ತಲೆನೋವಾಗಿ ಪರಿಣಮಿಸಿದೆ.