ಕಲ್ಲಿಕೋಟೆ: “”ನಮ್ಮ ಸುತ್ತಲೂ ಹಿಂದೂಗಳಿದ್ದಾರೆ. ನಾವು ಖಲೀಫ ಸುಲ್ತಾನನ ಧ್ಯೇಯಗಳ ಬಗ್ಗೆ ಮಾತಾಡಿದರೆ ನಮ್ಮನ್ನು ಹಿಂದೂಗಳು ಐಸಿಸ್ ಉಗ್ರರೆಂದು ಕರೆದು ಬಿಡುತ್ತಾರೆ. ಹಾಗಾಗಿ, ಜಿಹಾದಿ ವಿಚಾರಗಳನ್ನು ನಾವು ಮಕ್ಕಳಲ್ಲಿ ಇಷ್ಟಿಷ್ಟೇ ತುಂಬುತ್ತೇವೆ. ಅದು ನಿಧಾನವಾಗಿ ಅವರನ್ನು ಆವರಿಸಿ ಮುಂದೆ ಅವರ ಹೃದಯ ಭಾರತ, ಹಿಂದೂಗಳ ವಿರುದ್ಧ ವಿಷದ ಮಡುವಾಗುವಂತೆ ಮಾಡುವುದೇ ನಮ್ಮ ಗುರಿ”
ಇದು ಪಾಕಿಸ್ಥಾನದ ಯಾವುದೋ ಉಗ್ರ ಹೇಳಿದ ಮಾತಲ್ಲ. ಇಲ್ಲೇ, ಕೇರಳದ ಕಲ್ಲಿಕೋಟೆಯ ಪುಲ್ಲರಮ್ಮಲ್‌ನ ಕರುಣಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಡೆಸಲ್ಪಡುತ್ತಿರುವ ಮದ್ರಸಾದ ಸಹ ಕಾರ್ಯದರ್ಶಿ ಮೊಹಮ್ಮದ್ ಬಶೀರ್, “ವಹಾಬಿಸಂ’ (ಸೌದಿ ಮಾದರಿಯ ಧರ್ಮಾಂಧತೆಯ ಪರಿಕಲ್ಪನೆ) ಬೋಧನೆ ಬಗ್ಗೆ ಹೇಳಿಕೊಂಡಿರುವುದು. ಈತನಷ್ಟೇ ಅಲ್ಲ, “ಇಂಡಿಯಾ ಟುಡೇ’ ನಡೆಸಿರುವ ಕುಟುಕು ಕಾರ್ಯಾಚರಣೆಯಲ್ಲಿ ಕೇರಳದ ಕೆಲವು ಮದ್ರಸಾಗಳ ಇಂಥ ನಿಜವಾದ ಹಕೀಕತ್ತು ಬಯಲಾಗಿದೆ.
ಕರಂತೂರಿನಲ್ಲಿ ಮದ್ರಸಾ ನಡೆಸುತ್ತಿರುವ ಅಬ್ದುಲ್ ಮಲಿಕ್, ಇಸ್ಲಾಂ ಬೋಧಕ ಜಾಕಿರ್ ನಾಯ್ಕ ಮಾಡಿರುವ ಹಿಂದೂ ವಿರೋಧಿ ಭಾಷಣಗಳ ವೀಡಿಯೋಗಳನ್ನು ತನ್ನ ಮದ್ರಸಾದಲ್ಲಿ ಪ್ರದರ್ಶಿಸುವುದಾಗಿ ಕುಟುಕು ಕಾರ್ಯಾಚರಣೆ ನಡೆಸಿದವರಿಗೆ ತಿಳಿಸಿದ್ದಾನೆ.
ಹಣಕಾಸು ನೆರವು: ಈ ಮದರಸಾಗಳ ನಿರ್ವಹಣೆಗೆ ಸೌದಿ ಅರೇಬಿಯಾದಿಂದ ವರ್ಷಕ್ಕೆ 50 ಲಕ್ಷ ರೂ.ವರೆಗೆ ಹವಾಲಾ ಹಣ ಬರುತ್ತದೆಂದು ಇವರೇ ಒಪ್ಪಿಕೊಂಡಿದ್ದಾರೆ. ಕೊಯಿಲಾಂಡಿಯ ಮರ್ಕಝುಲ್ ಜಮೀನಾ ಮದ್ರಸಾದ ಅಬ್ದುಲ್ ಗಫರ್ ಹೇಳುವ ಪ್ರಕಾರ, ಆತನ ಮದ್ರಸಾಕ್ಕೆ ಸೌದಿಯಿಂದ ಮಾತ್ರವಲ್ಲ ದುಬೈ, ಕತಾರ್, ಒಮನ್‌ಗಳಿಂದಲೂ ಹಣ ಬರುತ್ತದೆ.
ಮಂಗಳವಾರವಷ್ಟೇ, ಭಾರತದ ಕೆಲವು ಮದ್ರಸಾಗಳು ಉಗ್ರರನ್ನು ಸೃಷ್ಟಿ ಮಾಡುತ್ತಿವೆ ಎಂದು ಶಿಯಾ ವಕ್ಫ್ ಮಂಡಳಿ ಮುಖ್ಯಸ್ಥ ವಾಸಿಂ ರಿಜ್ವಿ ನೀಡಿದ್ದ ಹೇಳಿಕೆಯನ್ನು ಈ ಕಾರ್ಯಾಚರಣೆಯಿಂದ ಬಹಿರಂಗವಾದ ಅಂಶಗಳು ಪುಷ್ಟೀಕರಿಸಿವೆ.