ಬೆಂಗಳೂರು: ಕೇಂದ್ರ ಸರಕಾರ ವಿದೇಶದಿಂದ ಹಾಲು ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದರೆ ದೇಶದ ರೈತರಿಗೆ ವಿಷವುಣಿಸಿದಂತೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಇಸಿಪಿ) ಅಡಿಯಲ್ಲಿ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದು ಇದರಿಂದ ದೇಶದ ಹೈನುಗಾರಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕೇಂದ್ರ ಸರಕಾರದ ಈ ನಿರ್ಧಾರ ಭಾರತದ ಗ್ರಾಮೀಣ ಆರ್ಥಿಕತೆಯ ಮೇಲೆ ಗುಂಡೇಟು ಹೊಡೆದಂತಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರಕಾರ 2022 ಗೆ ಕೃಷಿಕರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದೆ. ಆದರೆ ವಿದೇಶದಿಂದ ಹಾಲು ಆಮದು ಮಾಡಿಕೊಂಡರೆ ಅವರ ಆದಾಯ ಈಗಿರುವುದಕ್ಕಿಂತಲೂ ಅರ್ಧಕ್ಕೆ ಇಳಿಯುತ್ತದೆ. ಕೇಂದ್ರ ಸರಕಾರ “ಮೇಕ್ ಇನ್ ಇಂಡಿಯಾ’ ಯೋಜನೆ ಘೋಷಣೆ ಮಾಡಿದೆ. ಹೈನುಗಾರಿಕೆಯೂ ಅದರ ವ್ಯಾಪ್ತಿಗೆ ಬರುತ್ತದೆ. ಆದರೆ ಈಗಿನ ಕೇಂದ್ರದ ನಿರ್ಧಾರ “ಮೇಕ್ ಇನ್ ಇಂಡಿಯಾ’ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ಹೈನುಗಾರಿಕೆ ಅಸಂಘಟಿತ ಕಾರ್ಮಿಕರ ವಲಯದಲ್ಲಿದೆ. ಭಾರತ ವಿದೇಶಗಳಿಗೆ ಹಾಲು ರಪು¤ ಮಾಡುವಷ್ಟು ಶಕ್ತಿ ಹೊಂದಿಲ್ಲ. ಅಲ್ಲದೇ ರೈತರ ಹಾಲು ಉತ್ಪಾದನೆಯ ಗುಣಮಟ್ಟವನ್ನೂ ಹೆಚ್ಚಿಸುವ ಅಗತ್ಯ ಇರುವುದರಿಂದ 2030 ರ ವರೆಗೆ ಈಗಿರುವ ವ್ಯವಸ್ಥೆಯನ್ನೇ ಮುಂದುವರಿಸಬೇಕು. ಇಲ್ಲದಿದ್ದರೆ ಭಾರತದ ಗ್ರಾಮೀಣ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಹಾಲು ಆಮದು ಮಾಡಿಕೊಳ್ಳುವುದರಿಂದ ದೊಡ್ಡ ಕಂಪೆನಿಗಳಿಗೆ ಲಾಭವಾಗುತ್ತದೆ. ಇದು ಗ್ರಾಮೀಣ ಬದುಕಿಗೆ ಮಾರಕವಾಗಿದೆ. ಕೆಎಂಎಫ್ ಅಧ್ಯಕ್ಷರು ಇದರ ಬಗ್ಗೆ ಮಾತನಾಡುತ್ತಿಲ್ಲ. ಅವರು ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿದರೆ ದೇಶದ್ರೋಹದ ಆರೋಪ ಹೊರಿಸಲಾಗುತ್ತದೆ. ಈ ಪ್ರಕರಣದಲ್ಲಿ ನ್ಯಾಯಾಂಗದಲ್ಲಿಯೂ ನ್ಯಾಯ ಸಿಗುವ ಭರವಸೆಯಿಲ್ಲ. ಆದರೆ ಕೇಂದ್ರ ಸರಕಾರದ ಬೆದರಿಕೆಗೆ ಎಲ್ಲರೂ ಹೆದರುವುದಿಲ್ಲ ಎಂದು ಹೇಳಿದರು.
ಸಿಎಂ ಎಂಪಿಗಳು ನಿಯೋಗ ತೆಗೆದುಕೊಂಡು ಹೋಗುವ ಬದಲು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಹೋಗಬೇಕು. ಪ್ರಧಾನಿ ಮನವೊಲಿಸುವ ಪ್ರಯತ್ನ ಮಾಡಬೇಕು. ಅಡಿಕೆ ಆಮದು ಮಾಡಿಕೊಳ್ಳುವುದರಿಂದಲೂ ನಮ್ಮ ಅಡಿಕೆ ಬೆಳೆಗಾರರಿಗೂ ನಷ್ಟವಾಗುತ್ತದೆ.ಅದನ್ನೂ ಪ್ರಧಾನಿ ಗಮನಕ್ಕೆ ತರಬೇಕು ಎಂದು ಹೇಳಿದರು.