ವಿಜಯಪುರ: ಸೂರ್ಯೋದಯಕ್ಕೆ ಮುನ್ನವೇ ಕೊರೆಯುವ ಚಳಿಯಲ್ಲಿ ನಗರದಲ್ಲಿ ಸೈನಿಕ ಶಾಲೆ ವಿದ್ಯಾರ್ಥಿಗಳು ಏಕ ಭಾರತ ಶ್ರೇಷ್ಠ ಭಾರತ ಮ್ಯಾರಥಾನ್ ಓಟದಲ್ಲಿ ತೊಡಗಿದ್ದರು. ಸೂರ್ಯರಶ್ಮಿ ಕಿರಣಗಳು ಭೂಮಿಗೆ ತಾಕುವ ಮುನ್ನವೇ ಓಟದಲ್ಲಿ ಸಂಭ್ರಮ ಗೋಚರಿಸುತ್ತಿತ್ತು. ನಸುಕಿನಲ್ಲಿಯೇ ದೇಶದ ವಿವಿಧ ಸೈನಿಕ ಶಾಲೆ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲು ಅಣಿಯಾಗುತ್ತಿರುವ ದೃಶ್ಯ ನಗರದ ಎಲ್ಲ ಕಡೆಗಳಲ್ಲಿಯೂ ಕಂಡು ಬಂದಿತು.
ವಿಜಯಪುರದ ಸೈನಿಕ ಶಾಲೆ ಆವರಣದಲ್ಲಿ ನಡೆಯುತ್ತಿರುವ ‘ಏಕ ಭಾರತ ಶ್ರೇಷ್ಠ ಭಾರತ’ ಎನ್ನುವ ಅಭಿಯಾನದ ಸಮಾರೋಪ ಸಮಾರಂಭದ ಅಂಗವಾಗಿ ನಡೆದ ‘ಏಕ ಭಾರತ ಶ್ರೇಷ್ಠ ಭಾರತ’ ಮ್ಯಾರಥಾನ್ ಓಟದಲ್ಲಿ ವಿವಿಧ ರಾಜ್ಯದ ಸೈನಿಕ ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದರು.
ನಸುಕಿನಲ್ಲಿ ವಿಶ್ವ ವಿಖ್ಯಾತ ಗೋಳಗುಮ್ಮಟದತ್ತ ತಂಡೋಪತಂಡವಾಗಿ ಮ್ಯಾರಥಾನ್‌ನಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಅಲ್ಲಿ ಹೊಸ ಲೋಕವೇ ಸೃಷ್ಟಿಯಾಗಿತ್ತು. ಯುವಜನತೆ ಸಂಭ್ರಮದಲ್ಲಿ ಮಿಂದೇಳುವಂತೆ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು. ಮ್ಯಾರಥಾನ್‌ಗೆ ಪೊಲೀಸ್ ಅಧೀಕ್ಷಕ ಪ್ರಕಾಶ ನಿಕ್ಕಂ ಚಾಲನೆ ನೀಡಿದರು. ನಂತರ ಮ್ಯಾರಥಾನ್ ಓಟದಲ್ಲಿ ಪ್ರಕಾಶ ನಿಕ್ಕಂ, ಸೈನಿಕ ಶಾಲೆ ಪ್ರಾಚಾರ್ಯ ಕ್ಯಾಪ್ಟನ್ ವಿನಯ ತಿವಾರಿ, ಉಪ ಪ್ರಾಚಾರ್ಯ ರಾಜೀವ ಶುಕ್ಲಾ ಸಹ ಹೆಜ್ಜೆ ಹಾಕಿ ಗಮನ ಸೆಳೆದರು. ಸೈನಿಕ ಶಾಲೆಪ್ರಾಚಾರ್ಯ ಕ್ಯಾ.ವಿನಯ ತಿವಾರಿ ನೇತೃತ್ವದಲ್ಲಿ ಸೈನಿಕ ಶಾಲೆ ಶಿಕ್ಷಕರು, ಹಲವಾರು ಗಣ್ಯರು ಪಾಲ್ಗೊಂಡಿದ್ದರು.
ಮ್ಯಾರಥಾನ್ ಗೋಳಗುಮ್ಮಟ, ಕನಕ ದಾಸ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಗಾಂಧಿ ಚೌಕ್, ಶಿವಾಜಿ ವೃತ್ತ, ವಾಟರ್ ಟ್ಯಾಂಕ್, ಸೈನಿಕ್ ಸ್ಕೂಲ್‌ನ ಆವರಣಕ್ಕೆ ತಲುಪಿ ಸಂಪನ್ನಗೊಂಡಿತು. ದಾರಿಯುದ್ದಕ್ಕೂ ವಿದ್ಯಾರ್ಥಿಗಳು ಏಕ ಭಾರತ ಶ್ರೇಷ್ಠ ಭಾರತ ಸೇರಿದಂತೆ ವಿವಿಧ ಘೋಷಣೆ ಹಾಕಿ ಗಮನ ಸೆಳೆದರು.