ನವದೆಹಲಿ: ಭಾರತೀಯ ವಾಯುಪಡೆಯು ಬಾಲಕೋಟ್‌ನ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಸರ್ಜಿಕಲ್ ದಾಳಿ ನಡೆಸಿದರೂ ಪಾಕಿಸ್ತಾನ ತನ್ನ ‘ಉಗ್ರ ಪೋಷಣೆ’ಯ ಕೆಲಸವನ್ನು ಮಾತ್ರ ನಿಲ್ಲಿಸಿಲ್ಲ. ಬಾಲಕೋಟ್ ದಾಳಿಯ ಬಳಿಕ ಪಾಕಿಸ್ತಾನಿ ಉಗ್ರರು ತಮ್ಮ ಕಾರ್ಯಸ್ಥಳವನ್ನು ಬದಲಿಸಿದ್ದು, ಅಫ್ಘಾನಿಸ್ತಾನಕ್ಕೆ ತೆರಲಿ ಅಲ್ಲಿ ಉಗ್ರ ತರಬೇತಿ ನೀಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂಬ ಆತಂಕಕಾರಿ ವಿಚಾರವನ್ನು ಕೇಂದ್ರ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.
ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಬಾ ಸೇರಿದಂತೆ ಕೆಲವು ಉಗ್ರ ಸಂಘಟನೆಗಳು ಈಗ ಅಫ್ಘಾನಿಸ್ತಾನದ ಕುನಾರ್, ನಂಗರ್ಹಾರ್, ನುರಿಸ್ತಾನ್ ಮತ್ತು ಕಂದಹಾರ್ ಪ್ರಾಂತ್ಯಗಳಿಗೆ ಶಿಫ್ಟ್ ಆಗಿವೆ. ಅಷ್ಟೇ ಅಲ್ಲ, ಈ ಎರಡೂ ಸಂಘಟನೆಗಳು ಆಫ‌್ಗನ್ ಮೂಲಕ ತಾಲಿಬಾನ್ ಹಾಗೂ ಹಖನಿ ನೆಟ್ವರ್ಕ್ ಜತೆ ಕೈಜೋಡಿಸಿಕೊಂಡಿವೆ. ಅಲ್ಲಿ ಹಲವಾರು ಉಗ್ರರಿಗೆ ತರಬೇತಿ ಕೂಡ ನೀಡಲಾಗುತ್ತಿದೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ.
ಈ ಹಿನ್ನೆಲೆಯಲ್ಲಿ ಕಾಬೂಲ್ ಹಾಗೂ ಕಂದಹಾರ್‌ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಗಳಲ್ಲಿ ಬಿಗಿಭದ್ರತೆ ಏರ್ಪಡಿಸಲಾಗಿದ್ದು, ಹೈಅಲರ್ಟ್ ಘೋಷಿಸಲಾಗಿದೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಎಫ್ಎಟಿಎಫ್ನಿಂದ ಪಾರಾಗುವ ಉದ್ದೇಶ: ಉಗ್ರರ ವಿರುದ್ಧ ಪಾಕಿಸ್ತಾನವು ಕಠಿಣ ಕ್ರಮ ಕೈಗೊಳ್ಳದೇ ಹೋದಲ್ಲಿ, ಪ್ರಸಕ್ತ ವರ್ಷಾಂತ್ಯದಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಪಡೆ(ಎಫ್ಎಟಿಎಫ್)ಯ ಸಭೆಯಲ್ಲಿ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಹೀಗಾಗಿ, ಕಪ್ಪುಪಟ್ಟಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿಯೇ ಉಗ್ರರನ್ನು ಪಾಕಿಸ್ತಾನವೇ ಆಫ‌್ಗನ್ ಕಡೆಗೆ ಕಳುಹಿಸಿರಬಹುದೇ ಎಂಬ ಶಂಕೆ ಭಾರತೀಯ ಭದ್ರತಾ ಸಂಸ್ಥೆಗಳದ್ದು ಎನ್ನಲಾಗಿದೆ.
ಲಷ್ಕರ್‌ನಿಂದ ತರಬೇತಿ ಕೇಂದ್ರಗಳು: ಅಫ್ಘಾನಿಸ್ತಾನದ ನಂಗರ್ಹಾರ್, ನುರಿಸ್ತಾನ್, ಕುನಾರ್, ಹೆಲ್ಮಾಂಡ್ ಮತ್ತು ಕಂದಹಾಪ್ ಪ್ರಾಂತ್ಯಗಳಲ್ಲಿ ಲಷ್ಕರ್ ಅನೇಕ ತರಬೇತಿ ಕೇಂದ್ರಗಳನ್ನು ಆರಂಭಿಸಿದೆ. ತನ್ನ ಸದಸ್ಯರನ್ನು ಪೇಶಾವರದಿಂದ ಕಾಬೂಲ್ಗೆ ಕರೆಸಿಕೊಂಡು, ಇಲ್ಲೇ ತರಬೇತಿ ನೀಡಲು ಉದ್ದೇಶಿಸಿದೆ. ತಾಲಿಬಾನ್ ನೆರವಿನಿಂದ ಈ ಸದಸ್ಯರನ್ನು ವಿಧ್ವಂಸಕ ಕೃತ್ಯಗಳಿಗೆ ಸಜ್ಜುಗೊಳಿಸಲಾಗುತ್ತಿದೆ. ಆಫ‌್ಗನ್‌ನಲ್ಲಿ 300ಕ್ಕೂ ಹೆಚ್ಚು ಲಷ್ಕರ್ ಉಗ್ರರು ಈಗಾಗಲೇ ಇದ್ದು, ಇವರು ಅಮೆರಿಕ ಮತ್ತು ಮಿತ್ರಪಕ್ಷಗಳ ಪಡೆಗಳಿಗೂ ಅತಿದೊಡ್ಡ ಅಪಾಯ ಉಂಟುಮಾಡಿದೆ ಎಂದು ಇತ್ತೀಚೆಗಷ್ಟೇ ಪೆಂಟಗಟ್ ವರದಿ ಹೇಳಿತ್ತು.