ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿ ಗ್ರೆನೇಡ್ ದಾಳಿಯಲ್ಲಿ 12 ಮಂದಿ ನಾಗರಿಕರು ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದೆ.
ಸಿಆರ್ ಪಿಎಫ್ ಯೋಧರ ಬಂಕರ್ ನ್ನು ಗುರಿಯಾಗಿಸಿಕೊಂಡು ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು. ಆದರೆ ಗುರಿ ತಪ್ಪಿ ಅದು ರಸ್ತೆಯಲ್ಲಿ ಸ್ಪೋಟವಾಯಿತು. ಹೀಗಾಗಿ 12 ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಪುಲ್ವಾಮಾ ಜಿಲ್ಲೆಯ ಚೌಕ್ ಕಾಕಪೋರಾ ಪ್ರದೇಶದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 41 ಬೆಟಾಲಿಯನ್ ಬಂಕರ್‌ಗೆ ಉಗ್ರರು ಗ್ರೆನೇಡ್ ಎಸೆದಿದ್ದರು. ಆದರೆ ಇದು ಗುರಿ ತಪ್ಪಿ ಜನನಿಬಿಡ ರಸ್ತೆಯಲ್ಲಿ ಸ್ಪೋಟವಾಗಿದೆ.
ಗಾಯಗೊಂಡ ಎಲ್ಲ ನಾಗರಿಕರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಲ್ವಾಮಾ ಪೊಲೀಸರು ಘಟನೆ ಸಂಬಂಧ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ಭಯೋತ್ಪಾದನಾ ದಾಳಿ ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ.
ಪುಲ್ವಾಮಾದ ಚೌಕ್ ಕಕಪೊರಾದ ಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಉಗ್ರರನ್ನು ಪತ್ತೆಹಚ್ಚಿ ಸೆರೆಹಿಡಿಯಲು ವ್ಯಾಪಕ ಶೋಧಕಾರ್ಯ ಆರಂಭಿಸಲಾಗಿದೆ.