ಜಮ್ಮು: ಬಂಧಿತ ಮಾಜಿ ಪೊಲೀಸ್ ಅಧಿಕಾರಿ ದೇವೀಂದರ್ ಸಿಂಗ್ ಜತೆಗೆ ಇದ್ದ ಹಿಜ್ಬುಲ್ ಉಗ್ರ ನವೀದ್ ಬಾಬು ಕಣಿವೆ ರಾಜ್ಯದ ಮಾಜಿ ಶಾಸಕರೊಬ್ಬರ ಜತೆಗೆ ನಿಕಟ ಸಂಪರ್ಕದಲ್ಲಿದ್ದ. ಹಿರಿಯ ಅಧಿಕಾರಿಗಳು ಜಮ್ಮುವಿನಲ್ಲಿ ಈ ಅಂಶ ಖಚಿತಪಡಿಸಿದ್ದಾರೆ.
ಉಗ್ರ ನವೀದ್ ಈಗ ಎನ್‌ಐಎ ಕಸ್ಟಡಿಯಲ್ಲಿದ್ದಾನೆ.
ಸದ್ಯ ಕೇಂದ್ರಾಡಳಿತ ಪ್ರದೇಶದ ಮಾನ್ಯತೆ ಪಡೆದಿರುವ ಜಮ್ಮು ಮತ್ತು ಕಾಶ್ಮೀರದ ವಿಸರ್ಜಿತ ವಿಧಾನಸಭೆಯಲ್ಲಿ ಸ್ವತಂತ್ರ ಶಾಸಕರಾಗಿದ್ದ ವ್ಯಕ್ತಿ ಜತೆಗೆ ಈತ ಸಂಪರ್ಕ ಹೊಂದಿದ್ದ ಬಗ್ಗೆ ವಿಚಾರಣೆ ವೇಳೆ ಉಗ್ರ ಮಾಹಿತಿ ನೀಡಿದ್ದಾನೆ.
ಈ ಸಂದರ್ಭ ಉತ್ತರ ಕಾಶ್ಮೀರದಲ್ಲಿ ಉಗ್ರ ಸಂಘಟನೆಗೆ ನೆಲೆ ಕಂಡುಕೊಳ್ಳುವ ನಿಟ್ಟಿನಲ್ಲಿ ಅಡಗುತಾಣ ರಚಿಸುವ ಬಗ್ಗೆ ಮಾತುಕತೆ ನಡೆಸಲಾಗಿತ್ತು ಎಂಬ ವಿಚಾರವನ್ನು ಆತ ಬಾಯಿಬಿಟ್ಟಿದ್ದಾನೆ.