ಜಮ್ಮು-ಕಾಶ್ಮೀರ: ಇಂದು ಮುಂಜಾನೆ ನಡೆದ ಕಾರ್ಯಾಚರಣೆಯಲ್ಲಿ ಸೇನಾಪಡೆಗಳು ಅನಂತ್ನಾಗ್ ಜಿಲ್ಲೆಯಲ್ಲಿ ಉಗ್ರನೋರ್ವನನ್ನು ಹೊಡೆದುರುಳಿಸಿದ್ದಾರೆ. ಮತ್ತಿಬ್ಬರು ಉಗ್ರರು ಪರಾರಿಯಾಗಿದ್ದು ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ.
ಕಣಿವೆ ರಾಜ್ಯದಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು, ಭಯೋತ್ಪಾದಕರ ದಾಳಿಗೆ ಇತ್ತೀಚಿಗೆ ಲಾರಿ ಚಾಲಕನೊಬ್ಬ ಬಲಿಯಾಗಿದ್ದ. ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಬಿಜ್ಬೆಹರಾದಲ್ಲಿ ಉಗ್ರರು ಚಾಲಕನನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಆ ದಾಳಿಯ ಪ್ರಮುಖ ಉಗ್ರನೋರ್ವನನ್ನು ಇಂದು ಸೇನಾ ಪಡೆಗಳು ಎನ್ ಕೌಂಟರ್ ನಡೆಸಿ ಹೊಡೆದುರುಳಿಸಿದ್ದಾರೆ.
ದಕ್ಷಿಣ ಕಾಶ್ಮೀರದಲ್ಲಿ ಕಳೆದ 2 ವಾರಗಳಿಂದ ಈಚೆಗೆ ನಡೆದ ಉಗ್ರರ ದಾಳಿಗೆ 6 ಮಂದಿ ಟ್ರಕ್ ಚಾಲಕರು ಸಾವನ್ನಪ್ಪಿದ್ದಾರೆ. ಕಾಶ್ಮೀರರೇತರನ್ನೇ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ನಿನ್ನೆ ಹೊರ ರಾಜ್ಯಗಳ ಟ್ರಕ್ ಚಾಲಕರನ್ನು ಶೋಫಿಯಾನ್ ನಗರದಿಂದ ಹೊರ ಕಳಿಸಲು ಮುಂದಾಗಿದ್ದರು. ಮರುದಿನವೇ ಮತ್ತೊಂದು ದಾಳಿ ನಡೆದಿದೆ.
ಯುರೋಪಿಯನ್ ಯೂನಿಯನ್ ನಿಯೋಗ ಇಂದು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು ಆ ಹಿನ್ನಲೆಯಲ್ಲಿ ಭಾರೀ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ನಿಯೋಗ 370 ನೇ ವಿಧಿ ರದ್ದು ಪಡಿಸಿದ ನಂತರ ಜಮ್ಮು-ಕಾಶ್ಮೀರದಲ್ಲಿನ ವಸ್ತುಸ್ಥಿತಿಯ ಕುರಿತು ಅಧ್ಯಯನ ಮಾಡಲಿದೆ.