ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ ಸ್ವಾಯತ್ತೆಯನ್ನು ವಾಪಸ್ ಪಡೆದ ಬಳಿಕ ಉಗ್ರರ ರಣಬೇಟೆಗೆ ಕೇಂದ್ರ ಸರಕಾರ ಹೊಸ ಪ್ಲಾನ್ ಹಾಕಿಕೊಂಡಿದ್ದು, ಮೂರೂ ಪಡೆಗಳ ಜಗತ್ಪ್ರಸಿದ್ದ ಕಮಾಂಡೋಗಳು ಇನ್ನು ಕಾರ್ಯಾಚರಣೆ ನಡೆಸುವುದು ಖಚಿತವಾಗಿದೆ.
ಜಗತ್ತಿನ ಅತಿ ಪ್ರಬಲ ಕಮಾಂಡೋ ಪಡೆಗಳಾದ ಸೇನೆಯ ಪ್ಯಾರಾ ಕಮಾಂಡೋಗಳು, ನೌಕಾ ಪಡೆಯ ಮಾರ್ಕೋಸ್ ಕಮಾಂಡೋಗಳು, ವಾಯುಪಡೆಯ ಗರುಡ್ ಕಮಾಂಡೋಗಳು ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಜಂಟಿಯಾಗಿ ಭಾಗಿಯಾಗಲಿದ್ದಾರೆ.
ರಕ್ಷಣಾ ಸಚಿವಾಲಯದ ಹೊಸ, ವಿಶೇಷ ಕಾರ್ಯಾಚರಣೆಗಾಗಿರುವ ವಿಭಾಗ (ಎಎಫ್ಎಸ್‌ಒಡಿ) ಅಡಿಯಲ್ಲಿ ಈ ಕಮಾಂಡೋಗಳು ಕಾರ್ಯಾಚರಣೆ ನಡೆಸಲಿದ್ದಾರೆ.
ಕೆಲವೊಂದು ಕಾರ್ಯಾಚರಣೆಗಳಲ್ಲಿ ಇವರು ಅಪರೂಪಕ್ಕೊಮ್ಮೆ ಭಾಗಿಯಾಗುತ್ತಿದ್ದರೂ, ಹೀಗೆ ಒಟ್ಟಾಗಿ ಭಾಗಿಯಾಗುವ ಬಗ್ಗೆ ನಿರ್ಧಾರ ಕೈಗೊಂಡಿದ್ದು ಇದೇ ಮೊದಲಾಗಿದೆ. ಸೇನೆಯ ಪ್ಯಾರಾ ಕಮಾಂಡೋಗಳು ಕ್ಲಿಷ್ಟ ಕಾರ್ಯಾಚರಣೆಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದರು. ಶೀಘ್ರ ಇವರನ್ನು ಮಾರ್ಕೋಸ್, ಗರುಡ್ ಕಮಾಂಡೋಗಳು ಸೇರಿಕೊಳ್ಳಲಿದ್ದಾರೆ. ಈ ಎರಡು ದಳಗಳ ಸಣ್ಣ ಕೇಂದ್ರಗಳು ಶ್ರೀನಗರದಲ್ಲಿವೆ.
ಕಮಾಂಡೋ ಪಡೆಗಳು ಜಂಟಿ ಕಾರ್ಯಾಚರಣೆಗೆ ಅಣಿಯಾಗುವುದು, ಕಮಾಂಡೋ ಪಡೆಗಳ ನಡುವೆ ಸಹಭಾಗಿತ್ವ ವೃದ್ಧಿಗೆ ಕಾರ್ಯಾಚರಣೆಯಲ್ಲಿ ಭಾಗಿಗೊಳಿಸಲಾಗುತ್ತಿದೆ. ಈಗಾಗಲೇ ಎರಡು ಬಾರಿ ಈ ಕಮಾಂಡೋಗಳು ದಾಳಿ ಮತ್ತು ಶತ್ರುಗಳು ಆವರಿಸಿದ ಪ್ರದೇಶವನ್ನು ಮರುವಶ ಮಾಡಿಕೊಳ್ಳುವ ಪ್ರಾಯೋಗಿಕ ಕಾರ್ಯಾಚರಣೆಗಳಲ್ಲಿ ಬಳಸಿಕೊಳ್ಳಲಾಗಿದೆ.