ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಅಂತ್ಯಗೊಂಡಿಲ್ಲ. ಆದರೆ ಉಗ್ರರ ಸಂಖ್ಯೆ ಸಾರ್ವಕಾಲಿಕ ಕನಿಷ್ಠಮಟ್ಟಕ್ಕೆ ಇಳಿದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಗುರುವಾರ ತಿಳಿಸಿದ್ದಾರೆ. ಉತ್ತರ ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸ್ಥಳೀಯ ಉಗ್ರರು, ಪಾಕಿಸ್ತಾನಿ ಉಗ್ರರು ಸೇರಿದಂತೆ ಒಟ್ಟಾರೆ ಉಗ್ರರ ಸಂಖ್ಯೆ ಕಡಿಮೆಯಾಗಿದೆ. ಭಯೋತ್ಪಾದನೆಯು ಸರ್ವನಾಶದ ಹಾದಿ ಎಂಬುದು ಇಲ್ಲಿನ ಯುವಕರಿಗೆ ಈಗ ಅರ್ಥವಾಗಿದೆ. ಅವರು ಶಿಕ್ಷಣ, ಕ್ರೀಡೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅನೇಕ ಯುವಕರು ತಮ್ಮ ವೃತ್ತಿ, ಬದುಕು ಮತ್ತು ಕುಟುಂಬಗಳಿಗಾಗಿ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ,’ ಎಂದು ಹೇಳಿದ್ದಾರೆ.
ಜಮ್ಮುಕಾಶ್ಮೀರದಲ್ಲಿ ಮತ್ತೆ ಚುನಾವಣೆ?
ಭಾರತೀಯ ಚುನಾವಣಾ ಆಯೋಗದ ಅಧಿಕಾರಿಗಳು ಇದೇ ತಿಂಗಳು ಜಮ್ಮುಕಾಶ್ಮೀರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಇದರಿಂದ ಇದೇ ವರ್ಷ ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆ ನಡೆಯಬಹುದು ಎಂದು ರಾಜಕೀಯ ಪಕ್ಷಗಳಲ್ಲಿ ಭರವಸೆ ಮೂಡಿಸಿದೆ. 2014ರಲ್ಲಿ ಕೊನೆಯ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ನಂತರ 2019ರ ಆ.5ರಂದು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಾಗಿಸಲಾಯಿತು. ಜಮ್ಮು ಮತ್ತು ಕಾಶ್ಮೀರಕ್ಕಾಗಿ ಕ್ಷೇತ್ರ ವಿಗಂಡಣೆ ಆಯೋಗವನ್ನು ಕೇಂದ್ರ ಸರ್ಕಾರ ರಚಿಸಿದ್ದು, ಆಯೋಗವು ಕಳೆದ ವರ್ಷ ಅಕ್ಟೋಬರ್‌ನಲ್ಲಿ ತನ್ನ ವರದಿ ಸಲ್ಲಿಸಿದೆ.
ಇದೇ ವೇಳೆ, ಜಮ್ಮು ಮತ್ತು ಕಾಶ್ಮೀರದ ಹವಾಮಾನ ಮತ್ತು ಭದ್ರತೆಯನ್ನು ಅವಲೋಕಿಸಿ ಚುನಾವಣೆ ನಡೆಸಲಾಗುವುದು ಎಂದು ಇತ್ತೀಚೆಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದರು.