ಬೆಳ್ಮಣ್: ತುಳುನಾಡಿನ ಕಾರಣಿಕ ಕ್ಷೇತ್ರ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಅದ್ದೂರಿಯ ಸಿರಿ ಜಾತ್ರೆ ಎಪ್ರಿಲ್ 11ರಂದು ನಡೆಯಲಿದ್ದು 2013ರಲ್ಲಿ ಪ್ರಚಾರದ ಪರಿಕಲ್ಪನೆಗೆ ಬಳಸಲಾಗಿ ಭಾರೀ ಜನಪ್ರಿಯತೆ ಗಳಿಸಿದ್ದ ರಸ್ತೆ ಬದಿಯ ಮೈಲುಗಲ್ಲುಗಳು ಈ ಬಾರಿಯ ಸಿರಿ ಜಾತ್ರೆ ಪ್ರಚಾರಕ್ಕೆ ಸಿದ್ಧಗೊಂಡಿವೆ.
ಬುಧವಾರ ನಂದಳಿಕೆಯಲ್ಲಿ ಈ ಪ್ರಚಾರದ ಪರಿಕಲ್ಪನೆಯನ್ನು ಬಿಡಗಡೆಗೊಳಿಸಲಾಯಿತು. ಈ ಪರಿಕಲ್ಪನೆಯ ರೂವಾರಿ ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ತನ್ನ, ಮಿತ್ರರ ಜತೆ ಸಿರಿಜಾತ್ರೆಯ ಪ್ರಚಾರದ ಮೈಲುಗಲ್ಲುಗಳನ್ನು ಬಿಡುಗಡೆಗೊಳಿಸಿದರು.
ಹಿಂದೆ 2013ರಲ್ಲಿ ಸಿರಿ ಜಾತ್ರೆಯ ಪ್ರಚಾರಕ್ಕೆ ಬಳಸಲಾದ ಮೈಲುಗಲ್ಲುಗಳು ಮತ್ತೆ ಬಹು ಬೇಡಿಕೆ ಯಿಂದ ಪ್ರಚಾರಕ್ಕೆ ಬಳಸಬೇಕಾ ಯಿತೆಂದ ಸುಹಾಸ್ ಹೆಗ್ಡೆ, ಪ್ಲಾಸ್ಟಿಕ್ ರಹಿತ ಪರಿಕರಗಳಿಂದ ಈ ಮೈಲು ಗಲ್ಲುಗಳನ್ನು ರಚಿಸಲಾಗಿದ್ದು 4000 ಮೈಲುಗಲ್ಲುಗಳು ಈಗಾಗಲೇ ತಯಾರಾಗಿವೆ. ಒಂದರ ಮೌಲ್ಯ ಸುಮಾರು 140 ರೂಪಾಯಿಗಳ ದ್ದಾಗಿದೆಯೆಂದರು. ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಮಡಿಕೇರಿ ಸಹಿತ ಅಕ್ಕ ಪಕ್ಕದ ಎಲ್ಲ ಜಿಲ್ಲೆಗಳ ರಸ್ತೆಯ ಬದಿಗಳಲ್ಲಿ ಈ ಮೈಲುಗಲ್ಲುಗಳು ತಲೆಯೆತ್ತಲಿದ್ದು ಎಪ್ರಿಲ್ 11ರ ಈ ಬಾರಿ ಸಿರಿ ಜಾತ್ರೆ ಈ ಹಿಂದಿಗಿಂತಲೂ ಅದ್ದೂರಿಯಾಗಿ ನಡೆಯಲಿದೆಯೆಂದ ಸುಹಾಸ್ ಹೆಗ್ಡೆ, ನಂದಳಿಕೆಯ ಪರಿಸರದ 7 ಗ್ರಾಮ ಗಳ ಸಹಸ್ರಾರು ಸ್ವಯಂಸೇವಕರು ಈ ಸಿರಿ ಜಾತ್ರೆಯ ಯಶಸ್ಸಿನ ಭಾಗವಾಗಲಿದ್ದಾರೆಂದರು.
ಈ ಹಿಂದೆ ಮೈಲುಗಲ್ಲು ಸಹಿತ ಅಂಚೆ ಕಾರ್ಡ್, ಕೊಡೆ, ಗೋಣಿಚೀಲದಂತಹ ಪರಿಕಲ್ಪನೆಗಳ ಮೂಲಕ ಪ್ರಚಾರ ಪಡೆದಿದ್ದ ಸಿರಿ ಜಾತ್ರೆ ಈ ಬಾರಿ ಮತ್ತೆ ಮೈಲುಗಲ್ಲುಗಳ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ಪಡೆಯಲಿದೆ. ಈ ಮೈಲುಗಲ್ಲುಗಳ ರಚನೆಯಲ್ಲಿ ಸುಹಾಸ್ ಹೆಗ್ಡೆಯವರ ಸರಳಾ ಮರದ ಮಿಲ್ಲಿನ ಕಾರ್ಮಿಕ ಬಳಗ, ಮೂಡಬಿದಿರೆಯ ಅಬ್ಟಾಸ್ ಮಹಮದ್ ಅವರ ಅಬ್ಟಾಸ್ ಮರದ ಮಿಲ್ಲಿನ ಬಳಗ ಹಗಲಿರುಳು ಶ್ರಮಿಸಿದೆ. ಲಕ್ಷಾಂತರ ಭಕ್ತಾದಿಗಳನ್ನು ಆಕರ್ಷಣೆಯ ಧಾರ್ಮಿಕ ಶ್ರದ್ಧಾ ಕೇಂದ್ರ ನಂದಳಿಕೆ ಸಿರಿ ಜಾತ್ರೆಗೆ 4,000 ಮೈಲುಗಲ್ಲುಗಳು ಕೈ ಬೀಸಿ ಕರೆಯುತ್ತಿವೆ.