ಮಿಲನ್: ಕೋವಿಡ್ 19 ವೈರಸ್ ನಮಗೆ ಪ್ರಕೃತಿ ಬಗೆಗಿನ ಪ್ರೀತಿಯನ್ನು ಬೆಳೆಸಿತೇ? ಹಾಗಾದರೆ ನಾವು ವಾಪಸು ನಮ್ಮ ಮೂಲ ಪದ್ಧತಿಗೆ ಹೋಗುತ್ತಿದ್ದೇವೆಯೇ ಎಂದು ಕೇಳಿದರೆ ಹೌದೆನ್ನುವುದು ಸೂಕ್ತ.
ಜಾಗತಿಕ ತಾಪಮಾನ ಇತ್ಯಾದಿ ಕಾರಣಕ್ಕೂ ನಾವು ಪರಿಸರ ಮಾಲಿನ್ಯವನ್ನು ತಗ್ಗಿಸಲೇಬೇಕಿದೆ. ಅದಕ್ಕೆ ಮುನ್ನುಡಿಯಾಗಿ ಕೋವಿಡ್ 19 ವೈರಸ್ ಬಂದಿದೆ ಎಂದುಕೊಳ್ಳೋಣ. ಇಟಲಿಯ ಮಿಲನ್ ಈ ಬಾರಿ ಕೋವಿಡ್ 19 ವೈರಸ್ ದಾಳಿಗೆ ತೀವ್ರವಾಗಿ ತುತ್ತಾದ ನಗರ. ಅಲ್ಲೀಗ ಪರಿಸರ ಸ್ನೇಹಿ ಜಪ ಆರಂಭವಾಗಿದೆ.
ಲಾಕ್‌ಡೌನ್ ನಿಯಮಗಳು ಸಡಿಲಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬದಲು, ನಗರದ ಸುಮಾರು 35 ಕಿ. ಮೀ ರಸ್ತೆಯನ್ನು ಪಾದಚಾರಿಗಳಿಗೆ ಹಾಗೂ ಸೈಕಲ್ ಸವಾರರಿಗೆ ಅನುಕೂಲವಾಗುವಂತೆ ಪುನರ್ ರೂಪಿಸಲಾಗುವುದು ಎಂದಿದೆ ಸ್ಥಳೀಯ ಆಡಳಿತ.
ಮುಕ್ತ ಬೀದಿ ಪರಿಕಲ್ಪನೆಯನ್ನು ಜಾರಿಗೆ ತರಲು ಯೋಜಿಸಿದ್ದು, ಈ ಮೂಲಕ ಸೋಂಕು ಹರಡುವುದಕ್ಕೆ ಕಾರಣವಾಗಬಹುದಾದ ಸಾರ್ವ ಜನಿಕ ಸಾರಿಗೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದೆಂದೂ ಆಲೋಚಿಸಿದೆ.
ಇದರೊಂದಿಗೆ ಮೇ ತಿಂಗಳ ಬಳಿಕ ಮೆಟ್ರೋ ರೈಲು ವ್ಯವಸ್ಥೆಯ ಶೇ. 30 ರಷ್ಟು ಭಾಗವನ್ನು ಮಾತ್ರ ಪುನಾರಂಭಿಸಲಾಗುವುದು. ಆಗ ಮಾತ್ರ ಸಾಮಾಜಿಕ ಅಂತರ ಪಾಲನೆ ಮಾಡಲು ಸಾಧ್ಯ ಎಂಬುದು ಸ್ಥಳೀಯ ಆಡಳಿತದ ಚಿಂತನೆ.
ಈ ರಸ್ತೆಯಲ್ಲಿ ತಾತ್ಕಾಲಿಕ ಸೈಕಲ್ ಟ್ರ್ಯಾಕ್ ಹಾಗೂ ಅಗಲವಾದ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗುವುದು. ಇದು ಲಾಕ್‌ಡೌನ್ ಎರಡನೇ ಹಂತದಲ್ಲಿ ಆಗುವಂಥ ಕೆಲಸಗಳು. ಮಿಲನ್ ಅತ್ಯಂತ ಪ್ರಮುಖ ವಾಣಿಜ್ಯ ನಗರ.