Advertisement

ಚುನಾವಣೆಗೆ ಮೈಲ್ಯಾಕ್‌ನ ಶಾಯಿ

01:59 AM Mar 13, 2019 | |

ಮೈಸೂರು: ಮತದಾನದ ವೇಳೆ ಮತದಾರರ ಕೈ ಬೆರಳಿಗೆ ಹಚ್ಚುವ ಅಳಿಸಲಾಗದ ಶಾಯಿ ಪೂರೈಸಲು
ಮೈಸೂರಿನಲ್ಲಿರುವ ಕರ್ನಾಟಕ ಸರ್ಕಾರದಅಧೀನ ಉದ್ಯಮ ಮೈ ಸೂರು ಅರಗು ಮತ್ತು ಬಣ್ಣದ ಕಾರ್ಖಾನೆ (ಮೈಲ್ಯಾಕ್‌) ಟೊಂಕ ಕಟ್ಟಿ ನಿಂತಿದೆ.

Advertisement

ಭಾರತ ಚುನಾವಣಾ ಆಯೋಗ, ಕಳೆದ ನವೆಂಬರ್‌- ಡಿಸೆಂಬರ್‌ನಲ್ಲೇ ಮೈಲ್ಯಾಕ್‌ಗೆ 26,01,173 ಬಾಟಲ್‌ ಅಳಿಸಲಾಗದ ಶಾಯಿ ಪೂರೈಸುವಂತೆ ಬೇಡಿಕೆ ಸಲ್ಲಿಸಿದೆ. ಸಂಸ್ಥೆ ಮಾರ್ಚ್‌ ಅಂತ್ಯದೊಳಗೆ 10 ಮಿ.ಲೀ. ಸಾಮರ್ಥ್ಯದ 26,01.173 ಬಾಟಲ್‌ ಶಾಯಿ ಪೂರೈಸಲು 2019ರ ಜನವರಿ 7 ರಿಂದಲೇ ಉತ್ಪಾದನೆ ಆರಂಭಿಸಿದ್ದು, ಸಂಸ್ಥೆಯ 25 ಮಂದಿ ಕಾಯಂ ಕಾರ್ಮಿಕರ ಜೊತೆಗೆ ಅಂದಾಜು 100 ಮಂದಿ ಗುತ್ತಿಗೆ ಕಾರ್ಮಿಕರನ್ನು ಅಳಿಸಲಾಗದ ಶಾಯಿ
ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ.

10 ಮಿ.ಲೀ. ಬಾಟಲ್‌ನ ಶಾಯಿಯನ್ನು 750ಕ್ಕೂ ಹೆಚ್ಚು ಜನರ ಕೈ ಬೆರಳಿಗೆ ಹಚ್ಚಬಹು ದಾಗಿದ್ದು, ಆಯೋಗಕ್ಕೆ ಅಳಿಸಲಾಗದ ಶಾಯಿ ಪೂರೈಕೆಯಿಂದ ಮೈಲ್ಯಾಕ್‌ 33 ಕೋಟಿ ರೂ. ವಹಿವಾಟು ನಡೆಸಲಿದೆ.

1937ರಲ್ಲಿ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಂದ ಸ್ಥಾಪಿತವಾದ ಮೈಲ್ಯಾಕ್‌ ಸಂಸ್ಥೆ, ಅಲಂಕಾರಿಕ ಬಣ್ಣಗಳಾದ ಮೈಲ್ಯಾಕ್‌ ಸಿಂಥೆಟಿಕ್‌ ಎನಾಮಲ್‌, ಬೃಂದಾವನ್‌ ಸಿಂಥೆಟಿಕ್‌ ಎನಾಮಲ್‌, ಮೈಸೊಲಿನ್‌ ಅಕ್ರೈಲಿಕ್‌ ವಾಷಬಲ್‌ ಡಿಸ್ಟಂಪರ್‌ ತಯಾರಿಸುತ್ತದೆ.

ಮತದಾನದಲ್ಲಿ ಬಳಸಲಾಗುವ ಅಳಿಸಲಾಗದ ಶಾಯಿ ಉತ್ಪಾದನೆಯಿಂದ ಜಗತ್ತಿನ ಗಮನ ಸೆಳೆದಿದ್ದು, ಭಾರತ
ಮಾತ್ರವಲ್ಲದೆ, ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಚುನಾವಣೆಗಳಿಗೂ ಶಾಯಿ ಪೂರೈಸಿದ ಹಿರಿಮೆ ಸಂಸ್ಥೆಗಿದೆ.2018ರಲ್ಲಿ
ಮಲೇಷ್ಯಾ ಸಂಸತ್‌ ಚುನಾವಣೆಗೆ 60 ಮಿ.ಲೀ ಸಾಮರ್ಥ್ಯದ 2.32 ಲಕ್ಷ ಬಾಟಲ್‌ ಅಳಿಸಲಾಗದ ಶಾಯಿ ಪೂರೈಸುವಂತೆ ಅಲ್ಲಿನ ಚುನಾವಣಾ ಆಯೋಗದಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಮೈಲ್ಯಾಕ್‌ ಸಕಾಲದಲ್ಲಿ ಅವರ ಬೇಡಿಕೆ ಪೂರೈಸಿ ಭಾರತೀಯ ರೂ. ಅಂದಾಜು 8 ಕೋಟಿ ವಿದೇಶಿ ವಹಿವಾಟು ನಡೆಸಿತ್ತು.

Advertisement

ಚುನಾವಣಾ ಆಯೋಗದ ಬೇಡಿಕೆಯಂತೆ 10 ಎಂ.ಎಲ್‌. ಸಾಮರ್ಥ್ಯದ 26,01,173 ಬಾಟಲ್‌ ಅಳಿಸಲಾಗದ ಶಾಯಿ ಪೂರೈಸಲು ಉತ್ಪಾದನೆ ಮಾಡಲಾಗುತ್ತಿದೆ. ಮಾರ್ಕಿಂಗ್‌ ಪೆನ್‌ಗೆ ಬೇಡಿಕೆ ಬಂದಿಲ್ಲ. 4 ರಾಜ್ಯಗಳ ವಿಧಾನಸಭಾ ಚುನಾವಣೆಗೆ ಪ್ರತ್ಯೇಕವಾಗಿ ಶಾಯಿಗೆ ಬೇಡಿಕೆ ಬಂದಿಲ್ಲ, ಆಯಾಯ ರಾಜ್ಯಗಳ ಲೋಕಸಭಾ ಚುನಾವಣೆಗಳ ಜೊತೆಗೆ ಮತದಾನ ನಡೆಸಲಾಗುವುದರಿಂದ ಅದೇ ಪ್ರಮಾಣದ ಶಾಯಿ ಸಾಕಾಗುತ್ತದೆ.
● ಚಂದ್ರಶೇಖರ್‌ ದೊಡ್ಡಮನಿ, ವ್ಯವಸ್ಥಾಪಕ ನಿರ್ದೇಶಕರು, ಮೈಲ್ಯಾಕ್‌

ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next