Advertisement

ಶ್ರದ್ಧಾ-ಭಕ್ತಿಯಿಂದ ಪ್ರವಾದಿ ಜನ್ಮದಿನ ಆಚರಣೆ

01:17 PM Oct 31, 2020 | Suhan S |

ಬಂಕಾಪುರ: ಪಟ್ಟಣದಲ್ಲಿ ಮಹಮ್ಮದ ಪೈಗಂಬರ್‌ ಜನ್ಮದಿನದ ಅಂಗವಾಗಿ ಈದ್‌ -ಎ-ಮಿಲಾದ್‌-ಉನ್‌-ನಬಿ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಶುಕ್ರವಾರ ಆಚರಿಸಿದರು.

Advertisement

ಕೋವಿಡ್‌ ನಿಯಮಾವಳಿ ಪ್ರಕಾರ ಹೆಚ್ಚು ಜನ ಸೇರದೆ ಆಸಾರ ಮಹಲ್‌ನಿಂದ ಮೆರವಣಿಗೆ ನಡೆಸಲಾಯಿತು. ನಂತರ ನಡೆದ ಧರ್ಮ ಸಮಾರಂಭದಲ್ಲಿಧರ್ಮ ಗುರುಗಳು ಮಾತನಾಡಿ,ಮಹಮ್ಮದ ಪೈಗಂಬರ್‌ ಅವರ ತತ್ವಸಿದ್ಧಾಂತಗಳಾದ ಶಾಂತಿ, ಕರುಣೆ, ಪ್ರೀತಿ, ಸಾಮರಸ್ಯದ ಗುಣಗಳನ್ನ ಯುವಕರು ಮೈಗೂಡಿಸಿಕೊಂಡು ನಡೆದಾಗ ಇಂತಹ ಮಹಾನ್‌ ವ್ಯಕ್ತಿಗಳಜಯಂತಿಗಳು ಅರ್ಥಪೂರ್ಣವಾಗಲು ಸಾಧ್ಯವಿದೆ. ಮಹಮ್ಮದ ಪೈಗಂಬರರು ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆ ಕೊಡಿಸಲು ಹೋರಾಡಿದವರಾಗಿದ್ದರು. ದೀನದಲಿತರು, ಶೋಷಿತರಿಗೆ ಸಮಾಜದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಡಲು ಶ್ರಮಿಸಿದವರಾಗಿದ್ದರು ಎಂದು ಹೇಳಿದರು.

ತನ್ನಿಮಿತ್ತ ಪಟ್ಟಣದ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಇಡೀ ಪಟ್ಟಣ ವಿದ್ಯುದ್ದೀಪಗಳಿಂದ ಅಲಂಕೃತಗೊಂಡು ಹಬ್ಬದ ವಾತಾವರಣವನ್ನು ಇಮ್ಮಡಿಗೊಳಿಸಿತ್ತು. ಅಲ್ಲಲ್ಲಿ ಮೆಕ್ಕಾ ಮದೀನಾ ಭಾವಚಿತ್ರಗಳು ಕಂಗೊಳಿಸುತ್ತಿದ್ದವು. ಪಟ್ಟಣದ ಆಯಾ ಸ್ಥಳಗಳಲ್ಲಿ ಸಿಹಿ ತಿನಿಸು, ಹಣ್ಣು, ಹಂಪಲು, ತಂಪು ಪಾನೀಯಗಳನ್ನು ವಿತರಿಸಲಾಯಿತು.

ಅಂಜುಮನ್‌ ಸಂಸ್ಥೆ ಅಧ್ಯಕ್ಷ ಮಹಮ್ಮದ ಹುಸೇನ ಖತೀಬ, ಡಾ| ಕೆ.ಎಂ.ಬಮ್ಮನಹಳ್ಳಿ, ಎ.ಎ.ಗಂಜೇನವರ, ತಹಮೀದ್‌ ಖಾಜಿ, ಫಾರೂಖ್‌ ಖೇಲಿ,ಖಾಜಾವೈಸ್‌ ಖಲೀಫಾ, ನೂರಹ್ಮದ ಡೊರಳ್ಳಿ, ಕಲಂದರ ಜಂಗಳಿ, ಮುನ್ನಾ ,ಬಾಬಾ ತರೀನ, ನನ್ನೆಸಾಬ ದೇವಗಿರಿ, ಇಂತಿಯಾಜ್‌ ಕನವಳ್ಳಿ, ಅಯೂಬಖಾನ ಪಠಾಣ, ಅಬ್ದುಲ್‌ ಜಲೀಲ್‌ ಅಂಭೂರ, ಮಖಬೂಲ ಲಾಲಾನವರ, ಇಬ್ರಾಹಿಂಸಾಬ ಪಂಚಖಾನ ಮತ್ತಿತರರು ಉಪಸ್ಥಿತರಿದ್ದರು.

ಈದ್‌ ಮಿಲಾದ್‌ ಸರಳ ಆಚರಣೆ :

Advertisement

 ಹಾವೇರಿ: ಮಹಾಮಾರಿ ಕೋವಿಡ್ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮದ ಪ್ರವರ್ತಕ ಹಜರತ್‌ ಮಹ್ಮದ್‌ ಪೈಗಂಬರ್‌ ಅವರ ಜನ್ಮದಿನದ ಅಂಗವಾಗಿ ಆಚರಿಸುವ ಈದ್‌ ಮಿಲಾದ್‌ ಹಬ್ಬವನ್ನು ಶುಕ್ರವಾರ ಮುಸ್ಲಿಂ ಬಾಂಧವರು ಜಿಲ್ಲೆಯಾದ್ಯಂತ ಸರಳವಾಗಿ ಆಚರಿಸಿದರು.

ಪ್ರವಾದಿ ಮಹಮ್ಮದ್‌ ಪೈಗಂಬರ್‌ ಜನ್ಮದಿನಾಚರಣೆ ಅಂಗವಾಗಿ ನಗರದಲ್ಲಿ ಭವ್ಯ ಮೆರವಣಿಗೆ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಗೆ ಸರ್ಕಾರ ಹೊರಡಿಸಿದ ಮಾರ್ಗಸೂಚಿ ಅನ್ವಯ ಯಾವುದೇ ಮೆರವಣಿಗೆ, ಸಾಮೂಹಿಕ ಪ್ರಾರ್ಥನೆ ಸಲ್ಲಿಸದೇ ಮುಸ್ಲಿಂ ಬಾಂಧವರು ಸರಳವಾಗಿ ಈದ್‌ ಮಿಲಾದ್‌ ಹಬ್ಬ ಆಚರಿಸಿದರು.

ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಹೊಸ ಬಟ್ಟೆಗಳನ್ನು ಧರಿಸಿ ಪ್ರಾರ್ಥನೆ ಸಲ್ಲಿಸುವ ಮೂಲಕ ಪರಸ್ಪರ ಹಬ್ಬದ ಶುಭಾಶಯಗಳನ್ನು ಕೋರಿದರು.

ನಗರದಲ್ಲಿ ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರ ಮನೆ, ಮಸೀದಿಗಳಿಗೆ ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಪ್ರತಿವರ್ಷ ಈದ್‌ ಮಿಲಾದ್‌ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ತಮ್ಮ

ಮನೆಗಳಲ್ಲಿ ಸಿಹಿ ಪದಾರ್ಥ ತಯಾರಿಸಿ ಪರಸ್ಪರ ನೆರೆಹೊರೆಯವರಿಗೆ ಹಂಚುವುದು ಹಾಗೂ ಪ್ರಮುಖ ಮಸೀದಿ, ದರ್ಗಾಗಳಲ್ಲಿ ದಾನಿಗಳು ಅನ್ನಸಂತರ್ಪಣೆ ಮಾಡುವುದು ಸಂಪ್ರದಾಯವಾಗಿತ್ತು. ಆದರೆ, ಈ ಬಾರಿ ಕೋವಿಡ್ ಹಿನ್ನೆಲೆ ಹಬ್ಬದ ಆಚರಣೆಯ ಮಾರ್ಗಸೂಚಿಯಲ್ಲಿ ಇದಕ್ಕೆ ಅವಕಾಶ ನೀಡಿದ ಕಾರಣ ಬಹುತೇಕ ಮುಸ್ಲಿಂ ಬಾಂಧವರು ತಮ್ಮ ಮನೆಯಲ್ಲಿಯೇ ಪ್ರಾರ್ಥನೆ ಮಾಡಿ ಹಬ್ಬ ಆಚರಿಸಿದರು.

ಈದ್‌ ಮಿಲಾದ್‌ ಹಬ್ಬದ ಹಿನ್ನೆಲೆ ನಗರದಲ್ಲಿ ಪ್ರತಿವರ್ಷ ಬೃಹತ್‌ ಮೆರವಣಿಗೆ ಆಯೋಜಿಸಲಾಗುತ್ತಿತ್ತು. ಆದರೆ, ಈ ಬಾರಿ ಮೆರವಣಿಗೆಗೆ ಅವಕಾಶ ನೀಡಿದ ಹಿನ್ನೆಲೆ ಮುಸ್ಲಿಮರು ತಮ್ಮ ಮನೆಯ ಆವರಣ, ಓಣಿಗಳಲ್ಲಿ ಪ್ರಾರ್ಥನೆ ಮಾಡಿ ಸರಳವಾಗಿ ಹಬ್ಬ ಆಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next