ಮೆಲ್ಬರ್ನ್: ಆಸ್ಟ್ರೇಲಿಯ ಮತ್ತು ಆ್ಯಶಸ್ ಎದುರಾಳಿ ಇಂಗ್ಲೆಂಡ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ನೆಚ್ಚಿನ ತಂಡಗಳಾಗಿವೆ ಎಂದು ಕಾಂಗರೂ ನಾಡಿನ ಮಾಜಿ ಬ್ಯಾಟ್ಸ್‌ಮನ್ ಮೈಕಲ್ ಹಸ್ಸಿ ಅಭಿಪ್ರಾಯಪಟ್ಟಿದ್ದಾರೆ. ಇವೆರಡೂ “ಎ’ ವಿಭಾಗದಲ್ಲಿರುವ ತಂಡಗಳಾಗಿವೆ.
“ಆಸ್ಟ್ರೇಲಿಯವೇ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ. ದ್ವೇಷದಿಂದ ಹೇಳಬೇಕೆಂದರೆ ಆತಿಥೇಯ ಇಂಗ್ಲೆಂಡ್ ಕೂಡ ಫೇವರಿಟ್ ಆಗಿದೆ. ಇಂಗ್ಲೆಂಡ್ ಅತ್ಯುತ್ತಮ ಆಲ್‌ರೌಂಡರ್‌ಗಳನ್ನು ಹೊಂದಿರುವ ತಂಡವಾಗಿದೆ. ಜತೆಗೆ ತವರಿನ ಬೆಂಬಲವೂ ಅವರಿಗಿದೆ…’ ಎಂದು ಹಸ್ಸಿ ಹೇಳಿದರು.
“ನಾಯಕ ಮಾರ್ಗನ್ ಉತ್ತಮ ಪಡೆಯನ್ನೇ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಸ್ಟೋಕ್ಸ್, ವೋಕ್ಸ್ ಅಮೋಘ ಪ್ರದರ್ಶನ ನೀಡಿದ್ದನ್ನು ಮರೆಯುವಂತಿಲ್ಲ. ಜಾಸನ್ ರಾಯ್, ಸ್ಯಾಮ್ ಬಿಲ್ಲಿಂಗ್ಸ್, ಅಲೆಕ್ಸ್ ಹೇಲ್ಸ್ ಅವರಂಥ ಪ್ರಚಂಡ ಆರಂಭಿಕರಿದ್ದಾರೆ. ಗಾಯಾಳಾಗಿದ್ದ ಡೇವಿಡ್ ವಿಲ್ಲಿ, ಮಾರ್ಕ್ ವುಡ್ ತಂಡಕ್ಕೆ ಮರಳಿದ್ದಾರೆ. ಒಟ್ಟಾರೆ ಇಂಗ್ಲೆಂಡಿಗೂ ಗೆಲುವಿನ ಅವಕಾಶ ದಟ್ಟವಾಗಿದೆ…’ ಎಂದರು.
“ಆದರೆ ಆಸ್ಟ್ರೇಲಿಯಕ್ಕೆ ಆಸ್ಟ್ರೇಲಿಯವೇ ಸಾಟಿ. ಸ್ಟೀವ್ ಸ್ಮಿತ್ ಅಮೋಘ ರೀತಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ವಾರ್ನರ್-ಫಿಂಚ್ ಆರಂಭಿಕ ಜೋಡಿ, ಮ್ಯಾಕ್ಸ್‌ವೆಲ್-ಲಿನ್ ಅವರಂಥ ಬಿಗ್ ಹಿಟ್ಟರ್, ಸ್ಪೀಡ್‌ಸ್ಟರ್‌ಗಳಾದ ಕಮಿನ್ಸ್-ಸ್ಟಾರ್ಕ್ ಅವರೆಲ್ಲ ಆಸ್ಟ್ರೇಲಿಯವನ್ನು ಗೆಲುವಿನ ಪೀಠದಲ್ಲಿ ಕೂರಿಸುವ ಸಾಮರ್ಥ್ಯ ಹೊಂದಿದ್ದಾರೆ…’ ಎಂದರು.
“ಬಿ’ ವಿಭಾಗದಲ್ಲಿ ಹಾಲಿ ಚಾಂಪಿಯನ್ ಭಾರತ ಮತ್ತು ದಕ್ಷಿಣ ಆಫ್ರಿಕಾ ಫೇವರಿಟ್ ತಂಡಗಳೆಂಬುದು ಹಸ್ಸಿ ಅಭಿಪ್ರಾಯ.