ಅಹಮದಾಬಾದ್: 2022ರ ಸಾಲಿನ ಐಪಿಎಲ್ ಕೂಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಯಾನ ಅಂತ್ಯವಾಗಿದೆ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಎಡವಿದ ಫಾಫ್ ಡು ಪ್ಲೆಸಿಸ್ ಪಡೆ ನಿರಾಶೆ ಅನುಭವಿಸಿದೆ. ನಾಯಕ ಬದಲಾದರೂ ಆರ್ ಸಿಬಿಯ ಕಪ್ ಗಾಗಿ ಕಾಯುವಿಕೆ ಮುಂದುವರಿದಿದೆ.
ತಂಡದ ಪ್ರಮುಖ ಬೌಲರ್ ಮೊಹಮ್ಮದ್ ಸಿರಾಜ್ ಈ ಬಾರಿ ದುಬಾರಿಯಾದರು. ಒಂದು ಸೀಸನ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಬಿಟ್ಟುಕೊಟ್ಟ ಅನಗತ್ಯ ದಾಖಲೆಗೂ ಸಿರಾಜ್ ಪಾತ್ರರಾಗಬೇಕಾಯಿತು.
ಆರ್‌ಸಿಬಿಯ ಅಂತಿಮ ಲೀಗ್ ಪಂದ್ಯಕ್ಕೆ ಕೈಬಿಡಲ್ಪಟ್ಟ ಸಿರಾಜ್, ಪ್ಲೇಆಫ್‌ನಲ್ಲಿ ಮತ್ತೆ ಸ್ಥಾನ ಪಡೆದರು. ಆದರೆ ತಂಡವು ತನ್ನ ಮೇಲೆ ತೋರಿಸಿದ ನಂಬಿಕೆಯನ್ನು ಉಳಿಸಿಕೊಳ್ಳಲು ಸಿರಾಜ್ ಗೆ ಸಾಧ್ಯವಾಗಲಿಲ್ಲ. ಎರಡು ಪ್ಲೇಆಫ್ ಪಂದ್ಯಗಳಲ್ಲಿ6 ಓವರ್ ಗಳಲ್ಲಿ 75 ರನ್ ಗಳನ್ನು ಬಿಟ್ಟುಕೊಟ್ಟು ಕೇವಲ 1 ವಿಕೆಟ್ ಪಡೆದಿರುವುದು ಸಿರಾಜ್ ಸಾಧನೆ.
ಸಿರಾಜ್ ಬಗ್ಗೆ ಮಾತನಾಡಿದ ಆರ್ ಸಿಬಿ ಡೈರೆಕ್ಟರ್ ಮೈಕ್ ಹೆಸನ್, ಆರಂಭದಲ್ಲಿ ವಿಕೆಟ್ ಪಡೆಯದ ಕಾರಣ ಸಿರಾಜ್ ಆತ್ಮವಿಶ್ವಾಸ ಸ್ವಲ್ಪ ಕಡಿಮೆಯಾಗಿದೆ. ಆದರೆ ಆತ ಮಾನಸಿಕವಾಗಿ ಗಟ್ಟಿಗ, ಮುಂದಿನ ಬಾರಿ ಮಿಂಚಲಿದ್ದಾನೆ ಎಂದರು.
ಇದನ್ನೂ ಓದಿ:ಮತ್ತೊಂದು ಶತಕ: ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಬಟ್ಲರ್
“ಮೊಹಮ್ಮದ್ ಸಿರಾಜ್ ಉತ್ತಮ ಬೌಲರ್, ಅವರು ಈ ಬಾರಿ ಅತ್ಯುತ್ತಮ ಪ್ರದರ್ಶನ ತೋರಲಿಲ್ಲ, ಆದರೆ ಅವರು ಬಲಿಷ್ಠರಾಗಿ ಹಿಂತಿರುಗುತ್ತಾರೆ ಎಂದು ನಮಗೆ ತಿಳಿದಿದೆ” ಎಂದು ಹೆಸನ್ ಹೇಳಿದರು.
ಈ ಬಾರಿಯ ಕೂಟದಲ್ಲಿ 15 ಪಂದ್ಯಗಳಲ್ಲಿ ಸಿರಾಜ್ 9 ವಿಕೆಟ್ ಮಾತ್ರ ಪಡೆದಿದ್ದಾರೆ. ದುಬಾರಿ ಬೌಲಿಂಗ್ ಮಾಡಿದ ಸಿರಾಜ್ 10.08 ಎಕಾನಮಿಯಲ್ಲಿ ಬೌಲಿಂಗ್ ಎಸೆದಿದ್ದರು. 2021ರ ಕೂಟದಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಬಲಗೈ ವೇಗಿ 6.78ರ ಏಕಾನಮಿ ಹೊಂದಿದ್ದರು.