ಕಲಬುರಗಿ: ಪ್ರಾರ್ಥನಾ ಮಂದಿರಗಳ ಮೈಕ್ ನಿಷೇಧ ಆದೇಶ ಏಕೆ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ಆದೇಶ ನೀಡಿ ಹಲವಾರು ದಿನಗಳಾಗಿವೆ. ಆದರೆ ಇದುವರೆಗೂ ಆದೇಶ ಪಾಲನೆ ಆಗುತ್ತಿಲ್ಲ. ಬೆಳ್ಳಂಬೆಳಗ್ಗೆ ಪ್ರಾರ್ಥನಾ ಮಂದಿರಗಳ ಮೇಲೆ ಮೈಕ್‌ನಿಂದ ಶಬ್ದ ಕೇಳಿಬರುತ್ತದೆ. ಇದು ಸುಪ್ರಿಂಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ. ಈ ಕುರಿತಂತೆ ಶ್ರೀರಾಮ ಸೇನೆ ಹೋರಾಟ ಶುರು ಮಾಡಲಿದೆ ಎಂದು ತಿಳಿಸಿದರು.
ಪ್ರಾರ್ಥನೆ ಮಾಡಲು ಅಭ್ಯಂತರವಿಲ್ಲ, ಆದರೆ ಶಬ್ದಕ್ಕೆ ತಕರಾರು ಇದೆ. ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೇ ನಾವೇ ಮೈಕ್ ತೆಗೆದುಹಾಕುತ್ತೇವೆ ಎಂದರು. ಮತಾಂತರ ಈ ದೇಶಕ್ಕೆ ಬಹುದೊಡ್ಡ ಗಂಡಾಂತರ ಆಗಿದೆ. ದೇಶದಲ್ಲಿ ದೊಡ್ಡ ಪ್ರಮಾಣದ ಮತಾಂತರ ಕಾರ್ಯ ನಡೆಯುತ್ತಿದೆ. 50ಕ್ಕೂ ಅಧಿ ಕ ಮಠಾ ಧೀಶರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಆಗ್ರಹಿಸಿದ್ದೆವು. ಕಾನೂನು ಜಾರಿಗೆ ತರದಿದ್ದರೆ ಜನವರಿ ತಿಂಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಸಚಿವ, ಶಾಸಕ ಪ್ರೀಯಾಂಕ ಖರ್ಗೆಗೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಮಾತಾಡಿದ್ದಾರೆ. ಆದರೆ ಸ್ವಾಮೀಜಿಯೊಬ್ಬರು ಪ್ರಿಯಾಂಕ್ ಖರ್ಗೆ ಅವರ ಏಜೆಂಟ್ ರಂತೆ ಮಾತನಾಡಿರುವುದು ಸರಿಯಲ್ಲ. ಧಾರ್ಮಿಕ ಮುಖಂಡರಾಗಿ ಜನರ ಬಗ್ಗೆ ಮಾತನಾಡಿ. ಮತಾಂತರ, ಹಿಂದೂಗಳ ಮೇಲಿನ ದಬ್ಟಾಳಿಕೆ ಈ ವಿಚಾರಗಳ ಕುರಿತು ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಠಾಧಿಪತಿಗಳು ಮಠಗಳು, ಧರ್ಮ, ದೇಶ ಉಳಿಸಲು ಕಾರ್ಯ ಮಾಡಬೇಕು. ಗೋಹತ್ಯೆ ತಡೆಯಲು ಮುಂದಾಗಬೇಕು ಎಂದರಲ್ಲದೇ, ಗೋಹತ್ಯೆ ನಿಷೇಧ ಕಾಯ್ದೆ ಕಾಟಚಾರಕ್ಕೆ ಸಿಮೀತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.