Advertisement

ಗುಳೆ ಕಾರ್ಮಿಕರಿಗೆ ಕಾಡುತ್ತಿದೆ ಊರಿನ ನೆನಪು

12:41 PM Apr 30, 2020 | Naveen |

ವಾಡಿ: ತಿಂಗಳಾಯಿತು ಇದ್ದಲ್ಲೇ ಇದ್ದಿವಿ. ಇನ್ನೆಷ್ಟು ದಿನಾಂತ ನಾವಿಲ್ಲಿ ಇರೋದು? ಇಲ್ಲಿ ಊಟ, ವಸತಿ, ನೀರಿಗೇನೂ ತೊಂದರೆಯಿಲ್ಲ. ಆದರೆ ಅಲ್ಲಿ ನಮ್ಮ ಹೊಲ-ಮನಿ ಹಾಳುಬಿದ್ದಾವ. ವೃದ್ಧ ತಂದೆ-ತಾಯಿ ಮತ್ತು ಅವರ ಬಳಿ ಬಿಟ್ಟುಬಂದ ಮಕ್ಕಳು ನಮ್ಮ ದಾರಿ ಕಾಯುತ್ತಿದ್ದಾರೆ. ಲಾಕ್‌ ಡೌನ್‌ ಕೊನೆಗಾಣುವ ಲಕ್ಷಣ ಕಾಣುತ್ತಿಲ್ಲ. ಹೇಗಾದ್ರೂ ಮಾಡಿ ನಮಗೆ ನಮ್ಮೂರಿಗೆ ಕಳಿಸಿಕೊಡಿ ಎಂದು ವಾಡಿಯಲ್ಲಿ ಸಿಲುಕಿರುವ ಹೊರ ರಾಜ್ಯದ ಕೂಲಿ ಕಾರ್ಮಿಕರು ಕಣ್ಣೀರು ಹಾಕುತ್ತಿದ್ದಾರೆ.

Advertisement

ರೈಲು ಹಳಿ ದುರಸ್ತಿ ಕಾಮಗಾರಿಗೆಂದು ಚಿತ್ತಾಪುರ ತಾಲೂಕಿನ ವಾಡಿ ಜಂಕ್ಷನ್‌ ಪಟ್ಟಣಕ್ಕೆ ಕುಟುಂಬ ಸಮೇತ ಗುಳೆ ಬಂದಿರುವ ಮಧ್ಯಪ್ರದೇಶ ಮೂಲದ 20 ಕೂಲಿ ಕಾರ್ಮಿಕರು, ಗುತ್ತಿಗೆದಾರನ ವಂಚನೆಗೆ ತುತ್ತಾಗಿ ಊರು ಸೇರಲಾಗದೆ ಲಾಕ್‌ಡೌನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಪಾಳು ಕಟ್ಟಡದಲ್ಲಿ ಆಶ್ರಯ ಪಡೆದಿದ್ದ ಇವರನ್ನು ಸ್ಥಳಾಂತರಿಸಿದ ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಅವರು ಇಲ್ಲಿನ ರೈಲ್ವೆ ಕಾಲೋನಿಯ ಗಣೇಶ ಫಂಕ್ಷನ್‌ ಹಾಲ್‌ ಒದಗಿಸಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ನಿತ್ಯ ಮಧ್ಯಾಹ್ನ ಮತ್ತು ಸಂಜೆ ಊಟ ಸರಬರಾಜು ಮಾಡುತ್ತಿದ್ದಾರೆ.

ಸ್ಥಳೀಯ ಸಂಘ ಸಂಸ್ಥೆಗಳ ಕಾರ್ಯಕರ್ತರು, ಅಕ್ಕಿ, ಗೋದಿ ಹಿಟ್ಟು, ತರಕಾರಿ, ಸಕ್ಕರೆ, ಬೇಳೆ ಕೊಡುತ್ತಿದ್ದಾರೆ. ತಿಂಗಳುಗಟ್ಟಲೇ ಕುಳಿತಲ್ಲೇ ಕುಳಿತು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇವೆ. ಲಾಕ್‌ಡೌನ್‌ ಮುಂದೂಡಿದರೆ ಇನ್ನೂ ಎರಡು-ಮೂರು ತಿಂಗಳು ನಾವು ಇಲ್ಲಿಯೇ ಇರಬೇಕಾಗುತ್ತದೆ. ನಮ್ಮವರಿಂದ ದೂರಾಗಿ ನೆಮ್ಮದಿ ಕದಡಿದೆ. ಇಲ್ಲಿ ಕೆಲಸ ಸಿಕ್ಕರೂ ಮಾಡುವುದಿಲ್ಲ. ನಮಗೆ ನಮ್ಮೂರಲ್ಲಿ ಹೊಲ, ಮನೆಗಳಿವೆ. ಮೆಕ್ಕೆ, ಸೋಯಾಬಿನ್‌, ಇತರ ಬೆಳೆ ಬೆಳೆಯಲು ಹೊಲ ಹಸನು ಮಾಡಬೇಕಿದೆ. ಪ್ರತಿವರ್ಷ ಮಳೆಗಾಲದಲ್ಲಿ ನಾವು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತೇವೆ. ನಂತರದ ದಿನಗಳಲ್ಲಿ ಗುಳೆ ಹೋಗುತ್ತೇವೆ. ಈ ವರ್ಷ ಎದುರಾದ ಜೀವನ ಸಂಕಟ ಯಾವತ್ತೂ ಅನುಭವಿಸಿರಲಿಲ್ಲ ಎಂದು ತಮ್ಮ ಸಂಕಷ್ಟವನ್ನು ತೋಡಿಕೊಳ್ಳುತ್ತಿದ್ದಾರೆ.

ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next