ಮೈಸೂರು: ಇತಿಹಾಸ ಕಾಲದಿಂದಲೂ ನಡೆದುಕೊಂಡು ಬಂದು ಸಕರಾತ್ಮಕತೆ ಮೂಡಿಸುತ್ತಿದ್ದ ವಲಸೆ, ಇತ್ತೀಚಿನ ದಿನಗಳಲ್ಲಿ ನಕರಾತ್ಮಕತೆ ಬೆಳೆಸುವುದರ ಜತೆಗೆ ರಾಜಕೀಯ ಲಾಭಗಳಿಗಾಗಿ ಪರಿವರ್ತನೆಗೊಂಡಿದೆ ಎಂದು ಚಲನಚಿತ್ರ ತಜ್ಞ ಎನ್.ವಿದ್ಯಾಶಂಕರ ಹೇಳಿದರು.
ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಆಯೋಜಿಸಿದ್ದ ಬಹುರೂಪಿ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ಮಾಧ್ಯಮದಲ್ಲಿ ವಲಸೆ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ.
ವಲಸೆ ಎಂಬುದು ದೈಹಿಕ ಮತ್ತು ಮಾನಸಿಕ ಎಂದು ಎರಡು ವಿಭಾಗದಲ್ಲಿ ವಿಗಂಡಿಸಬಹುದಾಗಿದ್ದು, ವಲಸೆ ಎಂಬುದು ಸಾಂಸ್ಕೃತಿಕ ವೈವಿಧ್ಯತೆಯನ್ನು ಸಾರುತ್ತದೆ. ಆದರೆ, ಇಂದು ವಲಸೆ ಎಂಬುದು ಹಿಂಸೆಯ ರೂಪ ತಾಳಿದ್ದು, ಇತ್ತೀಚಿನ ದಿನಗಳಲ್ಲಿ ರಾಜಕೀಯ ಲಾಭಕ್ಕಾಗಿ ವಲಸೆ ಹೋಗುತ್ತಿದಾರೆ. ಮಯನ್ಮಾರ್‌ನ ರೊಹಿಂಗ್ಯಗಳು ಹಾಗೂ ಅಮೇರಿಕಾದಲ್ಲಿರುವ ಮೇಕ್ಸಿಕೋ ಸಮುದಾಯದ ವಲಸೆ ರಾಜಕೀಯ ಪಡೆದುಕೊಳ್ಳುತ್ತಿದೆ ಎಂದರು.
ಪ್ರೇಕ್ಷಕರ ಆಕರ್ಷಣೆ: ಬಹುರೂಪಿ ನಾಟಕೋತ್ಸವದ ಅಂಗವಾಗಿ ನಡೆದ ಬಹುರೂಪಿ ಚಲನಚಿತ್ರೋತ್ಸವದ ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮೊದಲ ದಿನದಂದು ಪ್ರದರ್ಶನಗೊಂಡ ಗಾಡ್ ಪ್ರೇ ರೆಗ್ಗಿಯೋ ನಿರ್ದೇಶನದ ಪೊವಕ್ಕಾಟ್ಸೆ, ಫಿಲಿಪ್ಪೀ ವಾನ್ಲಿಕೇವ್ ನಿರ್ದೇಶನದ ಪ್ರಾನ್ಸ್ ದೇಶದ ಇನ್ ಸಿರಿಯಾ ಚಿತ್ರಗಳಿಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಟ, ನಿರ್ಮಾಪಕ ಜೈ ಜಗದೀಶ್, ನಟಿ ವಿಜಯಲಕ್ಷ್ಮೀಸಿಂಗ್, ರಂಗಾಯಣ ನಿದೇಶಕಿ ಭಾಗೀರಥಿ ಬಾಯಿ ಕದಂ, ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಬಹುರೂಪಿ ಚಲನಚಿತ್ರೋತ್ಸವದ ಸಂಚಾಲಕ ಪ್ರಶಾಂತ್ ಹಿರೇಮಠ, ಕೆ.ಮನು, ಬಹುರೂಪಿ ನಾಟಕೋತ್ಸವದ ಸಂಚಾಲಕರಾದ ಮೈಮ್ ರಮೇಶ್, ಕೃಷ್ಣಪ್ರಸಾದ್ ಹಾಜರಿದ್ದರು.