Advertisement

“ವಲಸಿಗ’ರ ಸ್ವಾಗತಕ್ಕೆ ಶಾಲೆಗಳು ಸಜ್ಜು

01:04 AM May 13, 2019 | Team Udayavani |

ಶೈಕ್ಷಣಿಕ “ವಲಸಿಗ’ರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ಶಿಕ್ಷಣ ಸಂಸ್ಥೆಗಳು ತುದಿಗಾಲಲ್ಲಿ ನಿಂತಿವೆ. ಹೊಸ ಕೋರ್ಸ್‌ಗಳು, ಸಾರಿಗೆ ಸೇವೆ ಮತ್ತಿತರ ಸೌಲಭ್ಯಗಳ ಮೂಲಕ ಪೋಷಕರನ್ನು ಆಕರ್ಷಿಸಲಾಗುತ್ತಿದೆ. ಶಿಕ್ಷಣ ಇಲಾಖೆ ಕೂಡ ಪಠ್ಯ ಪುಸ್ತಕಗಳನ್ನು ಆರಂಭದಲ್ಲೇ ಕೊಡಲು ಸಿದ್ಧತೆ ಮಾಡಿಕೊಂಡಿದೆ. ಇದರೊಂದಿಗೆ ಬ್ಯಾಗ್‌ಗಳ ಹೊರೆಯನ್ನು ಕಡಿಮೆ ಮಾಡಿರುವುದೂ ಸೇರಿದಂತೆ ಕೆಲವು ನೀತಿ-ನಿಯಮಗಳ ಮಾರ್ಪಾಡುಗಳೊಂದಿಗೆ ಸಜ್ಜಾಗಿದೆ. ಇನ್ನೇನು ಶಾಲೆ, ಕಾಲೇಜುಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ಶೈಕ್ಷಣಿಕ ಮಾಹಿತಿ ಈ ಬಾರಿಯ “ಸುದ್ದಿ ಸುತ್ತಾಟ’ದಲ್ಲಿ…

Advertisement

ಬೆಂಗಳೂರು:
ಮಕ್ಕಳ ಶಿಕ್ಷಣಕ್ಕಾಗಿ ಹೊರ ಜಿಲ್ಲೆ, ರಾಜ್ಯಗಳಿಂದ ಇಲ್ಲಿಗೆ ವರ್ಗಾವಣೆ ಆಗುವುದು, ಒಳ್ಳೆಯ ಶಾಲೆಯಲ್ಲಿ ಸೀಟು ಸಿಗಲೆಂದು ಬಡಾವಣೆಯಿಂದ ಬಡಾವಣೆಗೆ ಮನೆ ಶಿಫ್ಟ್, ಶಾಲೆಯಿಂದ ಕಾಲೇಜು ಮೆಟ್ಟಿಲೇರುವವರು ಹೀಗೆ ನಗರದಲ್ಲಿ ಈಗ “ಶೈಕ್ಷಣಿಕ ವಲಸೆ’ಯ ಕಾಲ. ಈ ವಲಸೆಗೆ ಶಾಲೆಗಳೂ ಸಜ್ಜಾಗಿವೆ.

ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸುವ ಉದ್ದೇಶದಿಂದ ರಾಜ್ಯದ ಬೀದರ್‌, ರಾಯಚೂರು, ಮಧ್ಯ ಕರ್ನಾಟಕ ಹಾಗೂ ಹಳೇ ಮೈಸೂರು ಭಾಗದ ಜಿಲ್ಲೆಗಳು ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ಹೊರ ರಾಜ್ಯಗಳಿಂದ ಪ್ರತಿ ವರ್ಷ ನೂರಾರು ಪೋಷಕರು ನಗರಕ್ಕೆ ಬರುತ್ತಾರೆ. ಮುಂಬೈನಿಂದಲೂ ಇಲ್ಲಿಗೆ ಬಂದು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಡಿ ಸೀಟು ಗಿಟ್ಟಿಸಿಕೊಂಡು, ಇಲ್ಲಿ ನೆಲೆಯೂರಿದವರೂ ಇದ್ದಾರೆ. ಅದೇ ರೀತಿ, ಮಗುವಿನ ಶಾಲೆಗೆ ಹತ್ತಿರದಲ್ಲೇ ಮನೆಗಳನ್ನು ಸ್ಥಳಾಂತರಿಸುವವರ ಉದಾಹರಣೆಗಳೂ ಸಾಕಷ್ಟಿವೆ.

ಪ್ರತಿ ವರ್ಷ 1.5 ಲಕ್ಷ ಪ್ರವೇಶ: ನಗರದಲ್ಲಿ ಪ್ರತಿ ವರ್ಷ ಎಲ್‌ಕೆಜಿ ಮತ್ತು 1ನೇ ತರಗತಿಗೇ ಸುಮಾರು ಒಂದರಿಂದ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಇಲ್ಲಿ ಸುಮಾರು ಒಂದು ಸಾವಿರ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳಿದ್ದು, ಸುಮಾರು 4,500ಕ್ಕೂ ಹೆಚ್ಚು ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳಿವೆ. ಹಾಗೆಯೇ 500ಕ್ಕೂ ಅಧಿಕ ಅನುದಾನಿತ ಶಾಲೆಗಳಿವೆ. ಸುಮಾರು ಎರಡು ಸಾವಿರ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ. ರಾಜಧಾನಿಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ಖಾಸಗಿ ಶಾಲೆಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ದರಪಟ್ಟಿ ಪ್ರದರ್ಶನ ಕಡ್ಡಾಯ: ಸರ್ಕಾರಿ ನಿಯಮದ ಪ್ರಕಾರ ಎಲ್ಲ ಖಾಸಗಿ ಹಾಗೂ ಅನುದಾನಿತ ಶಾಲೆಗಳು ತಮ್ಮ ಶಾಲಾ ಸೂಚನಾ ಫ‌ಲಕ ಹಾಗೂ ವೆಬ್‌ಸೈಟ್‌ಗಳಲ್ಲಿ ದರಪಟ್ಟಿಯನ್ನು ಪ್ರಕಟಿಸಿರಬೇಕು. ಮಕ್ಕಳ ದಾಖಲಾತಿ ಸಂದರ್ಭದಲ್ಲಿ ಶಾಲಾಡಳಿತ ಮಂಡಳಿಗಳು ದುಬಾರಿ ಶುಲ್ಕ ವಸೂಲಿ ಮಾಡಬಾರದು ಎಂಬ ಉದ್ದೇಶದಿಂದ ಈ ಕ್ರಮ ಸರ್ಕಾರ ಬಹಳ ವರ್ಷಗಳ ಹಿಂದೆಯೇ ಜಾರಿಗೆ ತಂದಿತ್ತು.

Advertisement

ಆದರೆ, ಬಹುತೇಕ ಖಾಸಗಿ ಶಾಲೆಗಳಲ್ಲಿ ದರಪಟ್ಟಿ ಪ್ರಕಟಿಸಿರುವುದಿಲ್ಲ. ಮಕ್ಕಳಿಗೆ ಸೀಟು ಸಿಗಲಿ ಎಂಬ ಕಾರಣಕ್ಕೆ ಈ ಬಗ್ಗೆ ದೂರು ನೀಡಲು ಪಾಲಕ, ಪೋಷಕರು ಹಿಂದೇಟು ಹಾಕುತ್ತಾರೆ. ದುಬಾರಿ ಶುಲ್ಕ ವಸೂಲಿ ಮಾಡುವುದು ಹಾಗೂ ದರಪಟ್ಟಿ ಪ್ರಕಟಿಸಿದೇ ಇರುವುದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಆರ್‌ಟಿಇ ಸೀಟಿಗೆ ಕತ್ತರಿ: ಶಿಕ್ಷಣ ಹಕ್ಕು ಕಾಯ್ದೆಯ ನಿಯಮಕ್ಕೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿರುವುದರಿಂದ ಖಾಸಗಿ ಶಾಲೆಯಲ್ಲಿ ಆರ್‌ಇಟಿ ಅಡಿ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ ಪ್ರತಿವರ್ಷ ಸುಮಾರು 20ರಿಂದ 25 ಸಾವಿರ ವಿದ್ಯಾರ್ಥಿಗಳು ಆರ್‌ಟಿಇ ಅಡಿ ದಾಖಲಾಗುತ್ತಿದ್ದರು.

ಈ ವರ್ಷ ನಿಯಮಕ್ಕೆ ತಿದ್ದುಪಡಿ ತಂದಿರುವುದರಿಂದ ಮುಂದಿನ ಶೈಕ್ಷಣಿಕ ವರ್ಷಕ್ಕೆ ಲಭ್ಯವಿದ್ದ 500 ಸೀಟಿಗೆ ಈಗಾಗಲೇ ಒಂದು ಸುತ್ತಿನ ಆಯ್ಕೆ ಪ್ರಕ್ರಿಯೆಯೂ ಮುಗಿದಿದೆ. ಬೆಂಗಳೂರಿನ ಗಿರಿನಗರ ಮತ್ತು ಗಣೇಶ ಮಂದಿರ ವಾರ್ಡ್‌ಗಳಲ್ಲಿ ಸರ್ಕಾರಿ ಶಾಲೆಗಳು ಇಲ್ಲದಿರುವುದರಿಂದ ಈ ವಾರ್ಡ್‌ಗಳಲ್ಲಿ ಆರ್‌ಟಿಇ ಸೀಟು ಹಂಚಿಕೆ ಮಾಡಲಾಗಿದೆ. ಈ ಬಾರಿ ಮಕ್ಕಳಿಗೊಂದು ಸಿಹಿ ಸುದ್ದಿ. 2019-20ನೇ ಸಾಲಿನಿಂದ ಶಾಲಾ ಮಕ್ಕಳ ಬ್ಯಾಗ್‌ ಭಾರ ಎಷ್ಟಿರಬೇಕು ಎಂಬುದನ್ನು ನಿಗದಿಪಡಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು,

-ಎಲ್ಲ ಶಾಲಾಡಳಿತ ಮಂಡಳಿಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದೆ. ಅದರಂತೆ 1ರಿಂದ 2ನೇ ತರಗತಿ ವಿದ್ಯಾರ್ಥಿಗಳಿಗೆ 1.5- 2 ಕೆಜಿ, 3ರಿಂದ 5ನೇ ತರಗತಿ 2-3 ಕೆಜಿ, 6ರಿಂದ 8ನೇ ತರಗತಿ 3-4 ಕೆಜಿ, 9ರಿಂದ 10ನೇ ತರಗತಿಗೆ 4-5 ಕೆಜಿ ಮೀರಬಾರದು ಎಂದು ಸರ್ಕಾರ ಖಡಕ್‌ ಎಚ್ಚರಿಕೆ ನೀಡಿದೆ. ಆದರೆ, ಸರ್ಕಾರದ ಈ ಆದೇಶಕ್ಕೆ ಖಾಸಗಿ ಆಡಳಿತ ಮಂಡಳಿಗೂ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಬ್ಯಾಗ್‌ ರಹಿತ ದಿನ: ತಿಂಗಳ 3ನೇ ಶನಿವಾರವನ್ನು “ಬ್ಯಾಗ್‌ ರಹಿತ ದಿನ’ ಆಚರಿಸಬೇಕು ಎಂದು ಸರ್ಕಾರ ಈಗಾಗಲೇ ತಿಳಿಸಿದೆ. ಆ ದಿನ ಶಿಕ್ಷಕರು ಪಠ್ಯಪುಸ್ತಕ ಅಥವಾ ಕಲಿಕಾ ಸಾಮಗ್ರಿ ಇಲ್ಲದೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಬೇಕು. ವಿಜ್ಞಾನ ಪ್ರಯೋಗ, ಪ್ರದರ್ಶನಗಳು, ಸಾಮಾನ್ಯ ಜ್ಞಾನ ಶೈಕ್ಷಣಿಕ ಸಂಘದ ಚಟುವಟಿಕೆಗಳು,

ಚಿತ್ರಕಲೆ, ಚಿತ್ರಗಳಿಗೆ ಬಣ್ಣ ತುಂಬುವ ಚಟುವಟಿಕೆ, ಕರಕುಶಲತೆ, ಭಕ್ತಿಗೀತೆಗಳು, ದೇಶಭಕ್ತಿ ಗೀತೆಗಳ ಚಟುವಟಿಕೆ, ನಕ್ಷೆ ಓದಿಸುವುದು, ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳನ್ನು ಆಡಿಸುವುದು. ನೃತ್ಯ, ಚರ್ಚಾ ಸ್ಪರ್ಧೆ, ನಾಟಕ, ಆಶುಭಾಷಣ, ಧ್ಯಾನ, ಯೋಗದಂತಹ ಚಟುವಟಿಕೆಗಳನ್ನು ನಡೆಸಲು ಸೂಚಿಸಿದೆ. ಎಷ್ಟರ ಮಟ್ಟಿಗೆ ಇದು ಶಾಳೆಗಳಲ್ಲಿ ಅನುಷ್ಠಾನವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಶಾಲೆಗೆ ಬನ್ನಿ ಶನಿವಾರ: ಇನ್ನು 2019-20ನೇ ಸಾಲಿನಿಂದ ಶಾಲೆಗೆ ಬನ್ನಿ ಶನಿವಾರ ಕಾರ್ಯಕ್ರಮ ಆರಂಭಿಸಲು ಇಲಾಖೆ ಕಾರ್ಯತಂತ್ರ ರೂಪಿಸಿದೆ. ಇದರಡಿ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ನೋಂದಾಯಿಸಿಕೊಂಡು, ಸರ್ಕಾರಿ ಶಾಲೆಗೆ ಹೋಗಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಬಹುದು.

ಈ ಹಿಂದೆಯೇ ಸರ್ಕಾರಿ ಶಾಲೆಗಳ ಶೈಕ್ಷಣಿಕ ಸುಧಾರಣೆಗಾಗಿ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆ ಈ ಹಿಂದೆ ಶಾಲೆಗೆ ಬನ್ನಿ ಶನಿವಾರ ಎಂಬ ಕಾರ್ಯಕ್ರಮ ರೂಪಿಸಿತ್ತು. ಕೆಲವೊಂದು ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಸಮರ್ಪಕವಾಗಿ ನಡೆಸಿಕೊಂಡು ಹೋಗಲು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಸ್ಥಗಿತವಾಗಿತ್ತು.

ಶಾಲಾ ವಾಹನಗಳ ಮುಂಗಡ ಬುಕ್ಕಿಂಗ್‌: ಬಹುತೇಕ ಖಾಸಗಿ ಶಾಲೆಗಳಲ್ಲಿ ಶಾಲಾ ವಾಹನ ಇರುತ್ತದೆ. ಶಾಲಾ ವಾಹನಗಳು ಕೆಲವೊಂದು ಮಾರ್ಗದಲ್ಲಿ ಓಡಾಡುವುದಿಲ್ಲ ಹಾಗೂ ಕೆಲವು ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಲು ವಿಳಂಬವಾಗುವುದರಿಂದ ಅಂತಹವರಿಗೆ ಶಾಲಾ ವಾಹನವು ಸಿಗುವುದಿಲ್ಲ. ಹೀಗಾಗಿ ಬಹುತೇಕರು ಶಾಲಾ ವಾಹನಗಳನ್ನು ಮುಂಗಡವಾಗಿಯೇ ಕಾಯ್ದಿರಿಸಿಕೊಂಡಿರುತ್ತಾರೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಮತ್ತು ವಾಪಾಸ್‌ ಮನೆಗೆ ಬಿಡಲೆಂದೇ ಕೆಲವು ಖಾಸಗಿ ವಾಹನಗಳು, ರಿಕ್ಷಾ, ಓಮ್ನಿ ವ್ಯಾನ್‌ಗಳು ಇವೆ. ಅವುಗಳನ್ನು ಪಾಲಕ, ಪೋಷಕರು ಮುಂಗಡ ಬುಕಿಂಗ್‌ ಮಾಡಿರುತ್ತಾರೆ.

ಖಾಸಗಿ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಸುರಕ್ಷತೆಯ ಬಗ್ಗೆಯೂ ಪಾಲಕರು ಹೆಚ್ಚು ಗಮನ ಹರಿಸಬೇಕಾಗುತ್ತದೆ. ಲಕ್ಷಾಂತರ ರೂಪಾಯಿ ಕೊಟ್ಟು ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡಲಾಗುತ್ತದೆ. ಆದರೆ, ಆ ಶಾಲೆಗೆ ತೆರಳುವ ಮಗುವಿನ ಜೀವವನ್ನು ಪಣಕ್ಕಿಡಲಾಗುತ್ತದೆ. 100-200 ರೂ. ಉಳಿಸಲು ಈ ಪ್ರಯೋಗ ನಡೆಯುತ್ತದೆ. ಇದೆಲ್ಲವೂ ಜೀವಕ್ಕೆ ಎರವಾಗುವ ದುಸ್ಸಾಹಸವೇ ಆಗಿದೆ. ಈ ನಿಟ್ಟಿನಲ್ಲಿ ಪೋಷಕರ ಹೊಣೆಗಾರಿಕೆಯೂ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ನಿಗದಿಗಿಂತ ಹೆಚ್ಚು ಮಕ್ಕಳಿದ್ದರೆ ಸಮಸ್ಯೆ ಏನು?: ಯಾವೊಂದು ವಾಹನದ ತೂಕಕ್ಕೆ ತಕ್ಕಂತೆ ಸೀಟುಗಳು, ಬ್ರೇಕ್‌, ಗೇಯರ್‌, ಎಕ್ಸಿಲೇಟರ್‌ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ನಿಗದಿಪಡಿಸಲಾಗಿರುತ್ತದೆ. ಆದರೆ, ಅದನ್ನು ಮರುವಿನ್ಯಾಸಗೊಳಿಸಿದಾಗ ವಾಹನದ ಕ್ಷಮತೆ ಕಡಿಮೆಯಾಗುತ್ತದೆ. ಸಂಚಾರದ ವೇಳೆ ಸಮಸ್ಯೆ ಕಾಣಿಸಿಕೊಳ್ಳಬಹುದು ಅಥವಾ ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.

ತಂತ್ರಜ್ಞಾನ ಆಧಾರಿತ ಸೇವೆಯೂ ಇದೆ: ಕೆಲವು ಪ್ರತಿಷ್ಠಿತ ಶಾಲೆಗಳು ಮಕ್ಕಳ ಸುರಕ್ಷತೆಗಾಗಿ ಮುಂದುವರಿದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅತ್ಯುತ್ತಮ ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಿವೆ. ಮಗು ವಾಹನ ಏರಿದ ತಕ್ಷಣ ಪೋಷಕರ ಮೊಬೈಲ್‌ಗೆ ಸಂದೇಶ ರವಾನೆ ಆಗುತ್ತದೆ. ಜಿಪಿಎಸ್‌ ವ್ಯವಸ್ಥೆ ಅಳವಡಿಕೆಯಿಂದ ವಾಹನದ ಚಲನ-ವಲನ ಗೊತ್ತಾಗುತ್ತದೆ. ಶಾಲಾ ಆಡಳಿತಕ್ಕೂ ಈ ಮಾಹಿತಿ ತಲುಪುತ್ತದೆ.

ಶಾಲೆಗಳು ಬಸ್‌ಗಳನ್ನು ನೋಂದಣಿ ಮಾಡಿಕೊಂಡು ನಿರ್ವಹಣೆಗಾಗಿ ತಮಗೆ ನೀಡಿರುತ್ತಾರೆ. ಮಕ್ಕಳ ಸುರಕ್ಷತೆಗಾಗಿಯೇ ಆ್ಯಪ್‌ ಅಭಿವೃದ್ಧಿಪಡಿಸಿದ್ದೇವೆ. ಇದರಿಂದ ಮಗು ಬಸ್‌ ಏರಿದ ತಕ್ಷಣ ಸಂಬಂಧಪಟ್ಟವರಿಗೆ ಮೆಸೇಜ್‌ ರವಾನೆಯಾಗುತ್ತದೆ. ಬಸ್‌ ಯಾವ ವೇಗದಲ್ಲಿ ಹೋಗುತ್ತಿದೆ? ಆ ಬಸ್‌ಗಳಲ್ಲಿ ಇರುವ ಮಕ್ಕಳ ಸಂಖ್ಯೆ ಎಷ್ಟು? ಎಷ್ಟು ಗಂಟೆಗೆ ಶಾಲೆ ತಲುಪಿತು? ಇದೆಲ್ಲ ಮಾಹಿತಿ ಮೊಬೈಲ್‌ನಲ್ಲೇ ದೊರೆಯುತ್ತದೆ.

ಕನಿಷ್ಠ 16 ಸಾವಿರ; ಗರಿಷ್ಠ 45 ಸಾವಿರ ಶುಲ್ಕ: ಸಾಮಾನ್ಯವಾಗಿ ಶಾಲಾ ವಾಹನಗಳ ಸಾರಿಗೆ ಸೇವೆ ಶುಲ್ಕ ವಾರ್ಷಿಕ ಕನಿಷ್ಠ 16 ಸಾವಿರ ರೂ.ನಿಂದ ಗರಿಷ್ಠ 40-45 ಸಾವಿರ ರೂ.ವರೆಗೂ ಇರುತ್ತದೆ. ಆದರೆ, ಇದು ಆಯಾ ಶಾಲೆ ಮತ್ತು ಏರಿಯಾ ಹಾಗೂ ದೂರವನ್ನು ಅವಲಂಬಿಸಿರುತ್ತದೆ.

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next