ವಿಜಯಪುರ: ಬದುಕನ್ನು ಅರಸಿ ಮಹಾರಾಷ್ಟ್ರ ರಾಜ್ಯಕ್ಕೆ ಗುಳೆ ಹೋಗಿದ್ದ ವಿಜಯಪುರ ಜಿಲ್ಲೆಯ ಜನರು ಸಿಂಧುದುರ್ಗ ನಗರದಿಂದ ವಿಶೇಷ ರೈಲಿನಿಂದ ಶುಕ್ರವಾರ ನಗರದ ರೈಲು ನಿಲ್ದಾಣಕ್ಕೆ ಬಂದಿಳಿದರು.
ಜಿಲ್ಲೆಯ 1200 ಕಾರ್ಮಿಕರನ್ನು ಹೊತ್ತ ರೈಲು ಬೆಳಿಗ್ಗೆ 4-30 ಕ್ಕೆ ಬರಬೇಕಿದ್ದರೂ,5 ಗಂಟೆ ವಿಳಂಬವಾಗಿ ಬೆಳಿಗ್ಗೆ 10-30 ರ ಸುಮಾರಿಗೆ ನಗರದ ನಿಲ್ದಾಣಕ್ಕೆ ತಲುಪಿತು. ನಿಲ್ದಾಣಕ್ಕೆ ಬಂದ ಎಲ್ಲ ಕಾರ್ಮಿಕರಿಗೆ ಪೆಡಲ್ ಸ್ಯಾನಿಟೈಸರ್ ಮೂಲಕ ಕೈ ತೊಳೆಸಿ, ಥರ್ಮಾ ಟೆಸ್ಟಿಂಗ್ ನಡೆಸಲಾಯಿತು.
ಸ್ವಯಂ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಎಸ್ಪಿ ಅನುಪಮ್ ಅಗರವಾಲ, ಸಿಇಓ ಗೋವಿಂದರಡ್ಡಿ, ಎಡಿಸಿ ಡಾ.ಔದ್ರಾಮ್, ನಗರ ಪಾಲಿಕೆ ಆಯುಕ್ತ ಹರ್ಷ ಶಟ್ಟಿ ಇವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ರೈಲು ನಿಲ್ದಾಣದಲ್ಲಿ ಖುದ್ದು ಹಾಜರಿದ್ದು ಕಾರ್ಮಿಕರನ್ನು ಸ್ವಾಗತಿಸಿತು.
ಚಿಕ್ಕಪುಟ್ಟ ಮಕ್ಕಳು ಹಾಗೂ ಸಾಮಾನು ಸರಂಜಾಮು ಸಮೇತ ಬಂದ ಕಾರ್ಮಿಕರ ಕುಟುಂಬಗಳು, ಅವರವರ ಊರುಗಳಿಗೆ ಹೋಗಲು ಜಿಲ್ಲಾಡಳಿತ ಉಚಿತ ಬಸ್ ವ್ಯವಸ್ಥೆ ಮಾಡಿತ್ತು. ಸುಮಾರು 60 ಬಸ್ ಮೂಲಕ ಕಾರ್ಮಿಕರನ್ನು ಊರಿಗೆ ತಲುಪಿಸಲು ತಾಲೂಕವಾರು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಬಸ್ ಏರುವ ಮುನ್ನ ಪ್ರತಿ ಕಾರ್ಮಿಕರು ಹಾಗೂ ಮಕ್ಕಳಿಗೆ ನೀರು, ಉಪಹಾರದ ಪಾರ್ಸಲ್, ಬಿಸ್ಕತ್ ಸೌಲಭ್ಯ ಕಲ್ಪಿಸಲಾಗಿತ್ತು.
ತವರಿಗೆ ಮರಳಿದ ಎಲ್ಲ ಕಾರ್ಮಿಕರಿಗೆ ಅವರವರ ಗ್ರಾಮಗಳಲ್ಲಿ ಸಾಂಸ್ಥಿಕ ಕ್ವಾರಂಟೈನ ನಿಗಾದಲ್ಲಿ ಇರಿಸಲು ಶಾಲೆ-ಹಾಸ್ಟೆಲ್ ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.