ಬೆಂಗಳೂರು: ರಾಜ್ಯದಲ್ಲಿ ಮುಂದಿನ 14 ದಿನಗಳವರೆಗೆ ಲಾಕ್ ಡೌನ್ ಘೋಷಣೆಯಾದ ಬೆನ್ನಲ್ಲೆ ಕಾರ್ಮಿಕರ ವಲಸೆ ಮತ್ತೆ ಶುರುವಾಗಿದೆ. ರಾಜ್ಯದ ಬೆಂಗಳೂರು, ಮಂಗಳೂರು ಸೇರಿದಂತೆ ಪ್ರಮುಖ ನಗರಳಿಂದ ತವರೂರಿನತ್ತ ವಲಸೆ ಕಾರ್ಮಿಕರು ಮುಖ ಮಾಡಿದ್ದಾರೆ.
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಇಂದು ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿಗಳು, ಮುಂದಿನ 14 ದಿನಗಳ ವರೆಗೆ ರಾಜ್ಯಾದ್ಯಂತ ಕಠಿಣ ಕ್ರಮಗಳನ್ನು ಜಾರಿ ಮಾಡುವುದಾಗಿ ಘೋಷಿಸಿದರು. ಮುಖ್ಯಮಂತ್ರಿಗಳ ಆದೇಶ ಹೊರ ಬೀಳುತ್ತಿದ್ದಂತೆ ಆತಂಕಕ್ಕೊಳಗಾದ ಸಾವಿರಾರು ಜನರು ಗಂಟು-ಮೂಟೆ ಕಟ್ಟಿಕೊಂಡು ತಮ್ಮ ಊರುಗಳಿಗೆ ತೆರಳಲು ಬಸ್ ನಿಲ್ದಾಣಗಳತ್ತ ದೌಡಾಯಿಸಿದರು.
ಸೋಮವಾರ ಮಧ್ಯಾಹ್ನದ ಬಳಿಕ ಮಂಗಳೂರಿನಲ್ಲಿರುವ ಸರ್ಕಾರಿ ಬಸ್ ನಿಲ್ದಾಣ ವಲಸೆ ಕಾರ್ಮಿಕರಿಂದ ತುಂಬಿ ತುಳುಕುತ್ತಿತ್ತು. ಎಲ್ಲರ ಮೊಗದಲ್ಲೂ ಆತಂಕದ ಛಾಯೆ ಆವರಿಸಿಕೊಂಡಿತ್ತು. ಕಂಕುಳಲ್ಲಿ ಪುಟ್ಟ ಮಗು, ತಲೆಯ ಮೇಲೆ ಬಟ್ಟೆಗಳ ಗಂಟು ಹೊತ್ತುಕೊಂಡು ತಮ್ಮೂರಿನ ಬಸ್‍ಗಳ ಬೋರ್ಡ್ ಹುಡುಕುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಕಳೆದ ಬಾರಿ ಲಾಕ್ ಡೌನ್ ವೇಳೆ ಪಟ್ಟ ಕಷ್ಟ ಮತ್ತೆ ಮರುಳಿತು ಎನ್ನುವ ಭಯದ ನಡುವೆ ಬೇಗನೆ ಊರಿಗೆ ಸೇರುವ ದಾವಂತ ಸಾವಿರಾರು ಜನರ ಮುಖದಲ್ಲಿ ಎದ್ದು ಕಾಣಿಸುತ್ತಿತ್ತು.
ಇತ್ತ ಬೆಂಗಳೂರಿನಲ್ಲಿಯೂ ಇದೇ ಪರಿಸ್ಥಿತಿ ಕಂಡು ಬಂದಿದೆ. ಮಧ್ಯಾಹ್ನ ಸರ್ಕಾರದ ಆದೇಶ ಹೊರ ಬೀಳುತ್ತಿದ್ದಂತೆ ಬಸ್ ನಿಲ್ದಾಣದತ್ತ ದೌಡಾಯಿಸಿದ ಸಾವಿರಾರು ಜನರು ಬೇಗನೆ ಮನೆ ಸೇರುವ ದಾವಂತದಲ್ಲಿ ಬಸ್‍ಗಳನ್ನು ಏರುತ್ತಿದ್ದರು.