ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್‌ನ ಬಿಜ್‌ಬೆಹರಾ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಬಿಹಾರದ ವಲಸೆ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಸಂಭವಿಸಿದೆ. ಮೃತ ಕಾರ್ಮಿಕನನ್ನು ಬಿಹಾರದ ರಾಜು ಶಾ ಎಂದು ಗುರುತಿಸಲಾಗಿದೆ.
ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ಮುನ್ನಾದಿನದಂದು ಈ ದಾಳಿ ನಡೆದಿದ್ದು. ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ಎನ್‌ಸಿ ಅಭ್ಯರ್ಥಿ ಮಿಯಾನ್ ಅಲ್ತಾಫ್ ಇಂದು (ಗುರುವಾರ) ನಾಮಪತ್ರ ಸಲ್ಲಿಸಲಿದ್ದಾರೆ. ಎನ್‌ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಅನಂತನಾಗ್‌ನಲ್ಲಿ ರ‍್ಯಾಲಿಯನ್ನು ನಡೆಸಲಿದ್ದಾರೆ. ಈ ಕ್ಷೇತ್ರದಲ್ಲಿ ಮೇ. 7 ರಂದು ಮತದಾನ ನಡೆಯಲಿದೆ.
ಘಟನೆಯ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಮಾಹಿತಿ ಹಂಚಿಕೊಂಡ ಜಮ್ಮು ಕಾಶ್ಮೀರ ಪೊಲೀಸರು, ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ ಈ ವೇಳೆ ವಲಸೆ ಕಾರ್ಮಿಕನೋರ್ವ ಗಂಭೀರ ಗಾಯಗೊಂಡಿದ್ದು ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಲಾಗಿಯಿತಾದರೂ ಚಿಕಿತ್ಸೆ ಫಲಿಸದೆ ಕಾರ್ಮಿಕ ಮೃತಪಟ್ಟಿದ್ದಾನೆ ಈತನ ಬಗ್ಗೆ ವಿವರ ಪತ್ತೆಹಚ್ಚಿದಾಗ ಆತ ಬಿಹಾರದ ನಿವಾಸಿ ರಾಜು ಶಾ ಎಂದು ಗೊತ್ತಾಗಿದೆ.
ಘಟನೆ ಸಂಬಂಧ ಅನಂತನಾಗ್ ಪ್ರದೇಶ ಸುತ್ತ ಭಯೋತ್ಪಾದಕ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.